ADVERTISEMENT

ಐದು ಉಪನಗರ, ನಾಲ್ಕು ವಿಲ್ಲಾ ಯೋಜನೆ ರೂಪಿಸಲು ಗೃಹ ಮಂಡಳಿಗೆ ಸಚಿವ ಜಮೀರ್‌ ಅಹಮದ್‌ ಸೂಚನೆ

​ಪ್ರಜಾವಾಣಿ ವಾರ್ತೆ
Published 7 ಜೂನ್ 2023, 20:03 IST
Last Updated 7 ಜೂನ್ 2023, 20:03 IST
ವಸತಿ ಸಚಿವ ಬಿ.ಜೆಡ್‌. ಜಮೀರ್‌ ಅಹಮದ್‌ ಖಾನ್‌ ಅವರು ಕರ್ನಾಟಕ ಗೃಹ ಮಂಡಳಿ ಕಚೇರಿಗೆ ಬುಧವಾರ ಭೇಟಿನೀಡಿ ಅಧಿಕಾರಿಗಳು, ಸಿಬ್ಬಂದಿಯ ಕಾರ್ಯವೈಖರಿ ಪರಿಶೀಲಿಸಿದರು
ವಸತಿ ಸಚಿವ ಬಿ.ಜೆಡ್‌. ಜಮೀರ್‌ ಅಹಮದ್‌ ಖಾನ್‌ ಅವರು ಕರ್ನಾಟಕ ಗೃಹ ಮಂಡಳಿ ಕಚೇರಿಗೆ ಬುಧವಾರ ಭೇಟಿನೀಡಿ ಅಧಿಕಾರಿಗಳು, ಸಿಬ್ಬಂದಿಯ ಕಾರ್ಯವೈಖರಿ ಪರಿಶೀಲಿಸಿದರು   

ಬೆಂಗಳೂರು: ರಾಜಧಾನಿಯ ಹೊರ ವಲಯದ ಐದು ಸ್ಥಳಗಳಲ್ಲಿ ಅತ್ಯಾಧುನಿಕ ಉಪನಗರ ಹಾಗೂ ನಾಲ್ಕು ಕಡೆಗಳಲ್ಲಿ ಐಷಾರಾಮಿ ವಿಲ್ಲಾ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ರೂಪುರೇಷೆ ಸಿದ್ಧಪಡಿಸುವಂತೆ ಕರ್ನಾಟಕ ಗೃಹ ಮಂಡಳಿ ಅಧಿಕಾರಿಗಳಿಗೆ ವಸತಿ ಸಚಿವ ಬಿ.ಜೆಡ್‌. ಜಮೀರ್‌ ಅಹಮದ್‌ ಖಾನ್‌ ಬುಧವಾರ ಸೂಚನೆ ನೀಡಿದ್ದಾರೆ.

ಗೃಹ ಮಂಡಳಿಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ‘ಬೆಂಗಳೂರಿನಲ್ಲಿ ವಸತಿ ಸೌಲಭ್ಯಕ್ಕೆ ಬೇಡಿಕೆ ಹೆಚ್ಚುತ್ತಿದೆ. ಅದನ್ನು ಈಡೇರಿಸಲು ಹಾಗೂ ನಗರದ ಮೇಲಿನ ಒತ್ತಡ ಕಡಿಮೆ ಮಾಡಲು ಹೊರ ವಲಯದಲ್ಲಿ ಹೊಸ ವಸತಿ ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕು. ಅಂತರರಾಷ್ಟ್ರೀಯ ಮಟ್ಟದ ಸೌಲಭ್ಯಗಳಿರುವ ಉಪನಗರಗಳು ಮತ್ತು ವಿಲ್ಲಾ ಯೋಜನೆಗಳನ್ನು ಆರಂಭಿಸಲು ತಕ್ಷಣದಿಂದಲೇ ಕಾರ್ಯಪ್ರವೃತ್ತರಾಗಿ’ ಎಂದು ಸೂಚಿಸಿದರು.

ಯೋಜನೆಗಳಿಗೆ ತಕ್ಷಣದಲ್ಲೇ ಸ್ಥಳ ಗುರುತಿಸಬೇಕು. ಭೂಸ್ವಾಧೀನ ಪ್ರಕ್ರಿಯೆಯನ್ನು ತ್ವರಿತವಾಗಿ ಆರಂಭಿಸಲು ಕ್ರಮ ಕೈಗೊಳ್ಳಬೇಕು. ಬಡವರಿಗಾಗಿ ರೂಪಿಸುವ ವಸತಿ ಯೋಜನೆಗಳಲ್ಲಿ ಲಾಭವೇ ಪ್ರಧಾನ ಆಗಬಾರದು. ವಸತಿ ಯೋಜನೆಗಳ ಕಾಮಗಾರಿಗಳಲ್ಲಿ ಗುಣಮಟ್ಟದಲ್ಲಿ ರಾಜಿಗೆ ಅವಕಾಶ ಇರಕೂಡದು ಎಂದು ತಾಕೀತು ಮಾಡಿದರು.

ADVERTISEMENT

ಸಭೆಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಸಚಿವರು, ‘ಪ್ರತಿ ಉಪ ನಗರವನ್ನು ತಲಾ ಎರಡು ಸಾವಿರ ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಲಾಗುವುದು. ಅಲ್ಲಿ ತಲಾ 30,000 ನಿವೇಶನಗಳು ಲಭ್ಯವಾಗಲಿವೆ. ವಿಲ್ಲಾ ಯೋಜನೆಗಳು ತಲಾ 500 ಎಕರೆಯಲ್ಲಿ ಅನುಷ್ಠಾನಕ್ಕೆ ಬರಲಿವೆ. ಈ ಯೋಜನೆಗಳಿಂದ ನಗರದ ಮೇಲಿನ ಒತ್ತಡ ಕಡಿಮೆ ಆಗಬೇಕು ಎಂಬುದು ನಮ್ಮ ಗುರಿ’ ಎಂದರು.

ಮಾಹಿತಿ ಕೊರತೆ:
ಅಧಿಕಾರಿಗಳಿಗೆ ತರಾಟೆ ಅಗತ್ಯ ಮಾಹಿತಿಗಳಿಲ್ಲದೇ ಸಭೆಗೆ ಬಂದಿದ್ದ ಕೆಲವು ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಸಚಿವ ಜಮೀರ್‌ ಅಹಮದ್ ಖಾನ್ ಮುಂದಿನ ವಾರ ಪುನಃ ಪ್ರಗತಿ ಪರಿಶೀಲನೆ ನಡೆಸುವುದಾಗಿ ತಿಳಿಸಿದರು. ‘ಕಾಲಹರಣ ಮಾಡಲು ನಾನು ಇಲ್ಲಿಗೆ ಬಂದಿಲ್ಲ. ಸಭೆಯ ಬಗ್ಗೆ ಅಧಿಕಾರಿಗಳಿಗೆ ಗಂಭೀರತೆ ಇಲ್ಲವೆ? ವಾರದ ಮುಂಚೆಯೇ ಸಭೆ ನಿಗದಿಯಾಗಿದೆ. ಆದರೂ ನಿಮ್ಮ ಬಳಿ ಮಾಹಿತಿ ಇಲ್ಲದಿದ್ದರೆ ಹೇಗೆ’ ಎಂದು ಸಚಿವರು ಅಧಿಕಾರಿಗಳನ್ನು ಪ್ರಶ್ನಿಸಿದರು.

ಉಪನಗರಗಳಲ್ಲಿ 1.50 ಲಕ್ಷ ನಿವೇಶನಗಳು ಹಾಗೂ ವಿಲ್ಲಾ ಯೋಜನೆಗಳಲ್ಲಿ 25 ಸಾವಿರ ಮನೆಗಳು ನಿರ್ಮಾಣವಾಗುತ್ತವೆ. ಮೆಟ್ರೊ ರೈಲು ಸೇವೆಯ ಸಂಪರ್ಕವನ್ನು ಗಮನದಲ್ಲಿ ಇರಿಸಿಕೊಂಡು ಈ ಯೋಜನೆಗಳ ಸ್ಥಳವನ್ನು ಅಂತಿಮಗೊಳಿಸಲಾಗುವುದು ಎಂದು ಹೇಳಿದರು.

ಜಮೀನು ಮಾಲೀಕರೊಂದಿಗೆ ಶೇಕಡ 50:50ರ ಅನುಪಾತದಲ್ಲಿ ಈ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗುವುದು. ಇದರಿಂದಾಗಿ ಗೃಹ ಮಂಡಳಿಗೆ ಭೂಸ್ವಾಧೀನದ ಹೊರೆ ಹೆಚ್ಚಿನ ಪ್ರಮಾಣದಲ್ಲಿ ಬೀಳುವುದಿಲ್ಲ ಎಂದರು.

ವಸತಿ ಇಲಾಖೆ ಕಾರ್ಯದರ್ಶಿ ರವಿಕುಮಾರ್, ಗೃಹ ಮಂಡಳಿ ಆಯುಕ್ತೆ ಕವಿತಾ ಎಸ್. ಮನ್ನಿಕೇರಿ ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.