
ನೆಲಮಂಗಲ: ಉತ್ತರ ತಾಲ್ಲೂಕು ಮಾಕಳಿಯಲ್ಲಿ ಗೋದಾಮುಗಳಿಗೆ ಬೆಂಕಿ ಹೊತ್ತಿಕೊಂಡು ಅಪಾರ ಪ್ರಮಾಣದ ದಾಸ್ತಾನುಗಳು ಸುಟ್ಟು ಕರಕಲಾಗಿವೆ.
ಭಾನುವಾರ ರಜಾ ದಿನವಾದ ಕಾರಣ ಹೆಚ್ಚಿನ ಸಿಬ್ಬಂದಿ ಇರಲಿಲ್ಲ. ಬೆಳಿಗ್ಗೆ 11.30 ರ ಸುಮಾರಿಗೆ ಸುಗಂಧ ದ್ರವ್ಯ ಗೋದಾಮಿನಲ್ಲಿ ಕಾಣಿಸಿಕೊಂಡ ಬೆಂಕಿ ಅಕ್ಕ ಪಕ್ಕದ ಹವಾನಿಯಂತ್ರಕ, ನಾಯಿಗಳಿಗೆ ನೀಡುವ ಸಂಸ್ಕರಿಸಿದ ಆಹಾರ, ಅನಿಲ ಸಿಲಿಂಡರ್‌ಗಳ ಗೋದಾಮಿಗೂ ವ್ಯಾಪಿಸಿದೆ. ಸಿಲಿಂಡರ್‌ಗಳನ್ನು ತಕ್ಷಣ ಸ್ಥಳಾಂತರಿಸಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ.
ಸ್ಥಳಕ್ಕೆ ಬಂದ ಅಗ್ನಿಶಾಮಕದಳದವರು 10ಕ್ಕೂ ಹೆಚ್ಚು ವಾಹನಗಳನ್ನು ಬಳಸಿ ಬೆಂಕಿ ನಂದಿಸಲು ಯಶಸ್ವಿಯಾದರು.
ಬೆಂಕಿಯ ಕೆನ್ನಾಲಗೆ, ದಟ್ಟ ಹೊಗೆಯನ್ನು ಗಮನಿಸಿದ ಅಕ್ಕಪಕ್ಕದ ಗ್ರಾಮಸ್ಥರು, ಸಾರ್ವಜನಿಕರು ಗೋದಾಮಿನ ಬಳಿ ಬಂದಿದ್ದರು.
‘ಸಣ್ಣ ಪ್ರಮಾಣದಲ್ಲಿ ಕಾಣಿಸಿಕೊಂಡ ಬೆಂಕಿಯನ್ನು ಗೋದಾಮಿನಲ್ಲಿ ಅಳವಡಿಸಿರುವ ಅಗ್ನಿಶಾಮಕ ಉಪಕರಣಗಳ ಸಹಾಯದಿಂದ ಸಿಬ್ಬಂದಿ ನಂದಿಸಿದ್ದರೆ ಇಷ್ಟು ದೊಡ್ಡ ಪ್ರಮಾಣದ ಅನಾಹುತ ಸಂಭವಿಸುತ್ತಿರಲಿಲ್ಲ. ಪಕ್ಕದಲ್ಲೇ ಇದ್ದ ಒಟ್ಟು ನಾಲ್ಕು ಗೋದಾಮುಗಳು ಹೊತ್ತಿ ಉರಿದಿವೆ’ ಎಂದು ಪ್ರತ್ಯಕ್ಷದರ್ಶಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.