ADVERTISEMENT

ಸರ್ಕಾರ ಬೇಡಿಕೆ ಈಡೇರಿಸದಿದ್ದರೆ ಖಾಸಗಿ ಸಾರಿಗೆ ಬಂದ್‌: ಒಕ್ಕೂಟ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2025, 15:56 IST
Last Updated 5 ಮಾರ್ಚ್ 2025, 15:56 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ಬೈಕ್‌ ಟ್ಯಾಕ್ಸಿ ನಿಷೇಧಿಸುವುದೂ ಸೇರಿದಂತೆ ಪ್ರಮುಖ ನಾಲ್ಕು ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲದೇ ಇದ್ದರೆ ಖಾಸಗಿ ಸಾರಿಗೆ ಬಂದ್‌ ಮಾಡಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ ಎಚ್ಚರಿಕೆ ನೀಡಿದೆ.

30 ಬೇಡಿಕೆಗಳನ್ನು ಈಡೇರಿಸಬೇಕು ಎಂದು 2023ರ ನವೆಂಬರ್‌ನಲ್ಲಿ ಬೆಂಗಳೂರು ಬಂದ್‌ ನಡೆಸಿದಾಗ, ಎಲ್ಲ ಬೇಡಿಕೆ ಈಡೇರಿಸುವುದಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಭರವಸೆ ನೀಡಿದ್ದರು. ಸಾರಿಗೆ ಸಚಿವರ ವ್ಯಾಪ್ತಿಗೆ ಬರುವ 24 ಬೇಡಿಕೆಗಳನ್ನು ಈಡೇರಿಸಿದ್ದರು. ಪ್ರಮುಖ ಬೇಡಿಕೆಗಳು ಮುಖ್ಯಮಂತ್ರಿ ಸಚಿವಾಲಯಕ್ಕೆ ಸಂಬಂಧಿಸಿರುವುದರಿಂದ ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ಈಡೇರಿಸುವುದಾಗಿ ಹೇಳಿದ್ದರು. ಆದರೆ, ಈಡೇರಿಕೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಒಕ್ಕೂಟದ ಅಧ್ಯಕ್ಷ ಎಸ್‌. ನಟರಾಜ ಶರ್ಮ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

ಬೈಕ್‌ ಟ್ಯಾಕ್ಸಿ ನಿಷೇಧಿಸಲು ಸುಗ್ರಿವಾಜ್ಞೆ ಹೊರಡಿಸಬೇಕು. ಖಾಸಗಿ ಬಸ್‌ಗಳಿಗೆ ರಸ್ತೆ ತೆರಿಗೆ ಕಡಿಮೆ ಮಾಡಿ, ಬೇರೆ ರಾಜ್ಯಗಳಿಗೆ ವಲಸೆ ಹೋಗುವುದನ್ನು ತಪ್ಪಿಸಬೇಕು. ಅಗ್ರಿಗೇಟರ್ ಕಂಪನಿಗಳ ಮೇಲೆ ಕಠಿಣ ಕ್ರಮ ಜರುಗಿಸಬೇಕು. ಒಂದು ನಗರ ಒಂದು ದರ ಯೋಜನೆಯನ್ನು ಅನುಷ್ಠಾನ ಮಾಡಬೇಕು. ಪೋರ್ಟರ್, ಅಂಕಲ್ ಇನ್ನಿತರ ಗೂಡ್ಸ್‌ ವಾಹನ ಸೇವೆ ನೀಡುತ್ತಿರುವ ಕಂಪನಿಗಳನ್ನು ರಾಜ್ಯ ಸರ್ಕಾರದ ಅಡಿಯಲ್ಲಿ ತಂದು ಪರವಾನಗಿ ನೀಡುವ ವ್ಯವಸ್ಥೆ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.

ಮಾರ್ಚ್‌ 22ರ ಒಳಗೆ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲದೇ ಇದ್ದರೆ ಈ ಬಗ್ಗೆ ಸಭೆ ನಡೆಸಿ ಖಾಸಗಿ ಸಾರಿಗೆ ಬಂದ್‌ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.