
ಬೆಂಗಳೂರು: ಭಾರತೀಯ ವಿಜ್ಞಾನ ಸಂಸ್ಥೆಯು (ಐಐಎಸ್‌ಸಿ) ಶಿಕ್ಷಣ ಶುಲ್ಕ ಹೆಚ್ಚಿಸಿರುವುದನ್ನು ಖಂಡಿಸಿ ಎಐಡಿಎಸ್‌ಒ ಸದಸ್ಯರು ಮಲ್ಲೇಶ್ವರದ ಕುವೆಂಪು ಪ್ರತಿಮೆಯ ಬಳಿ ಭಾನುವಾರ ಪ್ರತಿಭಟನೆ ನಡೆಸಿದರು.
2026-27ನೇ ಶೈಕ್ಷಣಿಕ ಸಾಲಿನಿಂದ ಅನ್ವಯವಾಗುವಂತೆ ಪದವಿ ಹಂತದ ‘ಬ್ಯಾಚುಲರ್ ಆಫ್ ಸೈನ್ಸ್ (ಬಿ.ಎಸ್) ಕೋರ್ಸ್’ನ ಶುಲ್ಕವನ್ನು ₹10,000ರಿಂದ ₹80,000ಕ್ಕೆ ಏರಿಕೆ ಮಾಡಿದೆ. ಇದು ಉನ್ನತ ಶಿಕ್ಷಣದ ಲಭ್ಯತೆಯ ಮೇಲಿನ ನೇರ ದಾಳಿಯಾಗಿದೆ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.
ಎಐಡಿಎಸ್‌ಒ ರಾಜ್ಯ ಖಜಾಂಚಿ ಸುಭಾಷ್ ಬಿ.ಜೆ ಮಾತನಾಡಿ, ‘ಶುಲ್ಕ ಹೆಚ್ಚಳವು ಬಡ ಮತ್ತು ಮಧ್ಯಮ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ದೇಶದ ಅತ್ಯುನ್ನತ ವಿಜ್ಞಾನ ಸಂಸ್ಥೆಯ ಬಾಗಿಲನ್ನು ಶಾಶ್ವತವಾಗಿ ಮುಚ್ಚುವಂತೆ ಮಾಡುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.
‘ಈ ಶೈಕ್ಷಣಿಕ ವರ್ಷದಲ್ಲಿ ಸ್ನಾತಕೋತ್ತರ ಮತ್ತು ಪಿಎಚ್.ಡಿ ಕೋರ್ಸ್‌ಗಳ ಶುಲ್ಕವನ್ನು ಪರಿಷ್ಕರಿಸುವ ಸಂಸ್ಥೆಯ ಯೋಜನೆಯು ದೇಶದ ಕೈಗೆಟುಕುವ ಸಂಶೋಧನಾ ವ್ಯವಸ್ಥೆಯನ್ನೇ ಧ್ವಂಸಗೊಳಿಸಲಿದೆ. ಶಿಕ್ಷಣ ಎಂಬುದು ಹಕ್ಕು, ಅದು ಕೇವಲ ಶ್ರೀಮಂತರ ಐಷಾರಾಮಿ ವಸ್ತುವಾಗಬಾರದು’ ಎಂದರು.
‘ಹೆಚ್ಚಿಸಿರುವ ಶುಲ್ಕವನ್ನು ತಕ್ಷಣವೇ ಹಿಂಪಡೆಯಬೇಕು’ ಎಂದು ಒತ್ತಾಯಿಸಿದ ಪ್ರತಿಭಟನಕಾರರು, ವಿದ್ಯಾರ್ಥಿಗಳಿಂದ ಹಣ ವಸೂಲಿ ಮಾಡುವ ಬದಲು ಸಂಶೋಧನಾ ಸಂಸ್ಥೆಗಳಿಗೆ ಹೆಚ್ಚಿನ ಅನುದಾನ ನೀಡುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.
ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್, ಉಪಾಧ್ಯಕ್ಷರಾದ ಅಪೂರ್ವ ಸಿ.ಎಂ. ಮತ್ತು ಚಂದ್ರಕಲಾ, ಜಿಲ್ಲಾ ಕಾರ್ಯದರ್ಶಿ ಕಲ್ಯಾಣ್ ಕುಮಾರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.