ADVERTISEMENT

ಇಳಯರಾಜ ಸಂಗೀತ ಬದುಕಿಗೆ 50 ವರ್ಷ: ಜ.10ರಂದು ಮ್ಯೂಸಿಕ್‌ ಆನ್‌ ಮೀಲ್ಸ್‌

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2025, 16:15 IST
Last Updated 15 ಡಿಸೆಂಬರ್ 2025, 16:15 IST
ಇಳಯರಾಜ
ಇಳಯರಾಜ   

ಬೆಂಗಳೂರು: ಇಳಯರಾಜ ಅವರ ಸಂಗೀತ ಬದುಕಿನ ಯಾನದ 50 ವರ್ಷ, ಇಸ್ಕಾನ್‌ ಸಂಸ್ಥೆಯ ಅಕ್ಷಯ ಪಾತ್ರ ಫೌಂಡೇಷನ್‌ನ ಚಟುವಟಿಕೆಗಳು ಆರಂಭವಾಗಿ 25 ವರ್ಷವಾದ ನೆನಪಿನಲ್ಲಿ ‘ಮ್ಯೂಸಿಕ್‌ ಆನ್‌ ಮೀಲ್ಸ್‌’ ಸಂಗೀತ ಸಂಜೆಯನ್ನು ನಗರದಲ್ಲಿ ಜನವರಿ 10ರಂದು ಹಮ್ಮಿಕೊಳ್ಳಲಾಗಿದೆ.

ಕರ್ನಾಟಕದಲ್ಲಿ ಮಾತ್ರವಲ್ಲದೇ ದೇಶದ ನಾನಾ ಭಾಗಗಳಲ್ಲಿ ಶಾಲಾ ಮಕ್ಕಳಿಗೆ ಬಿಸಿಯೂಟ ನೀಡುವ ಅಕ್ಷಯಪಾತ್ರ ಚಟುವಟಿಕೆಗೆ ಆರ್ಥಿಕ ಬಲ ತುಂಬುವ ಭಾಗವಾಗಿ ಅಂದು ಸಂಜೆ 7ರಿಂದ 9ರವರೆಗೆ ನಗರದ ತುಮಕೂರು ರಸ್ತೆಯಲ್ಲಿರುವ ಬೆಂಗಳೂರು ಅಂತರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ( ಬಿಐಇಸಿ) ಇಳಯರಾಜ ಹಾಗೂ ಅವರ ತಂಡದವರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

‘ಮಕ್ಕಳಿಗೆ ಪೌಷ್ಟಿಕಾಂಶಭರಿತ ಆಹಾರ ನೀಡುವ ಕಾಯಕದಲ್ಲಿ ನಿರತವಾಗಿರುವ ಇಸ್ಕಾನ್‌ ಸಂಸ್ಥೆ ಈ ಮೂಲಕ ಮಕ್ಕಳು ಶಿಕ್ಷಣ ಪಡೆಯಲು ಪ್ರೇರೇಪಿಸುತ್ತಿದೆ. ಇಂತಹ ಕೆಲಸದ ಬಗ್ಗೆ ನನಗೂ ಅಪಾರ ಅಭಿಮಾನವಿದೆ. ಮ್ಯೂಸಿಕ್ ಆನ್‌ ಮೀಲ್ಸ್ ಎನ್ನುವ ಕಾರ್ಯಕ್ರಮದ ಪ್ರಸ್ತಾವನೆ ಇಟ್ಟಾಗ ತಕ್ಷಣವೇ ಒಪ್ಪಿಗೆ ನೀಡಿದೆ’ ಎಂದು ಬೆಂಗಳೂರು ಇಸ್ಕಾನ್‌ನಲ್ಲಿ ಸೋಮವಾರ ಆಯೋಜನೆಗೊಂಡಿದ್ದ ಮಾಧ್ಯಮ ಸಂವಾದದಲ್ಲಿ ಇಳಯರಾಜ ಹೇಳಿದರು.

ADVERTISEMENT

ಅಕ್ಷಯ ಪಾತ್ರ ಫೌಂಡೇಷನ್‌ ಉಪಾಧ್ಯಕ್ಷ ಚಂಚಲಪತಿದಾಸ‌ ಮಾತನಾಡಿ, ‘ಶಾಲಾ ಮಕ್ಕಳಿಗೆ ಬಿಸಿಯೂಟ ನೀಡುವ  ಪಯಣ 2000ರಲ್ಲಿ ಆರಂಭವಾಯಿತು. ಈಗ 16 ರಾಜ್ಯಗಳಿಗೆ ವಿಸ್ತರಣೆಗೊಂಡು ನಿತ್ಯ 23.5 ಲಕ್ಷ ಮಕ್ಕಳಿಗೆ ಪೌಷ್ಟಿಕಾಂಶ ಭರಿತ ಆಹಾರ ನೀಡಲಾಗುತ್ತಿದೆ. ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಪೋಷಣ್‌ ಯೋಜನೆಯ ಭಾಗವಾಗಿ ಕೆಲಸ ಮಾಡುತ್ತಿರುವ ಹೆಮ್ಮೆಯಿದೆ. ಈಗ ಇಳಯರಾಜ ಅವರ ಜತೆ ವಿಶಿಷ್ಟ ಕಾರ್ಯಕ್ರಮ ಆಯೋಜಿಸುತ್ತಿರುವುದರಿಂದ ಈ ಅಭಿಯಾನಕ್ಕೆ ಬಲ ಬರಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.