ವಿಕ್ಟೋರಿಯಾ ಆಸ್ಪತ್ರೆಯ ಹೊರರೋಗಿ ವಿಭಾಗದ ಆವರಣದಲ್ಲಿ ರೋಗಿಗಳು ಹಾಗೂ ಅವರ ಸಹಾಯಕರು
–ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.
ಬೆಂಗಳೂರು: ಸದಾ ಗಿಜಿಗುಡುವ ಹೊರರೋಗಿಗಳ ವಿಭಾಗ, ಪರೀಕ್ಷೆಗಾಗಿ ಸರದಿಯಲ್ಲಿ ಕಾಯುತ್ತಿರುವ ರೋಗಿಗಳು, ಅತ್ಯಾಧುನಿಕ ಸೌಲಭ್ಯಗಳು, ಹಾಸಿಗೆಗಳ ಕೊರತೆ, ಆವರಣದಲ್ಲಿಯೇ ವಿಶ್ರಾಂತಿ ಪಡೆಯುವ ರೋಗಿಗಳ ಸಹಾಯಕರು...
ಇದು ರಾಜ್ಯದ ಪ್ರತಿಷ್ಠಿತ ಹಾಗೂ ಹಳೆಯ ಆಸ್ಪತ್ರೆಗಳಲ್ಲಿ ಒಂದಾಗಿರುವ ವಿಕ್ಟೋರಿಯಾ ಆಸ್ಪತ್ರೆಯ ಚಿತ್ರಣ. ಆಸ್ಪತ್ರೆಯು ಗುಣಮಟ್ಟದ ಚಿಕಿತ್ಸೆಗೆ ಹೆಸರಾಗಿರುವುದರಿಂದ ಹೊರ ರಾಜ್ಯಗಳಿಂದಲೂ ರೋಗಿಗಳು ಇಲ್ಲಿಗೆ ಬರುತ್ತಾರೆ. ಇದರಿಂದಾಗಿ ವರ್ಷದಿಂದ ವರ್ಷಕ್ಕೆ ರೋಗಿಗಳ ದಟ್ಟಣೆ ಆಸ್ಪತ್ರೆಗಳ ಒಳಗೆ ಹೆಚ್ಚಿದರೆ, ಹೊರಗಡೆ ಅವರಿಗಾಗಿ ಕಾಯುವ ಸಹಾಯಕರ ಸಂಖ್ಯೆಯೂ ಅಧಿಕವಾಗುತ್ತಿದೆ. ಹೆಚ್ಚಿನವರು ಪಾದಚಾರಿ ಮಾರ್ಗ ಹಾಗೂ ಪಾರ್ಕಿಂಗ್ ಸ್ಥಳದಲ್ಲಿಯೇ ಮಲಗುತ್ತಿದ್ದಾರೆ. ಇದರಿಂದಾಗಿ ಆಸ್ಪತ್ರೆಯ ಆವರಣ ಸದಾ ಗಿಜಿಗುಡುತ್ತಿರುತ್ತದೆ. ವೈದ್ಯರು ಹಾಗೂ ಸಿಬ್ಬಂದಿಗೂ ರೋಗಿಗಳು ಮತ್ತು ಅವರ ಸಹಾಯಕರ ನಿರ್ವಹಣೆ ಸವಾಲಾಗಿ ಪರಿಣಮಿಸಿದೆ.
ಆಸ್ಪತ್ರೆಯ ದಾಖಲಾತಿ ಪ್ರಕಾರ 2014ರಲ್ಲಿ 2.18 ಲಕ್ಷ ಹೊಸ ಪ್ರಕರಣಗಳನ್ನು ವೈದ್ಯರು ನೋಡಿದರೆ, ಈಗ ಆ ಸಂಖ್ಯೆ ಮೂರೂವರೆ ಲಕ್ಷ ಸಮೀಪಿಸಿದೆ. ಅದೇ ರೀತಿ, ವಾರ್ಷಿಕ 26,295 ಒಳರೋಗಿಗಳ ಸಂಖ್ಯೆ ಹತ್ತು ವರ್ಷಗಳ ಬಳಿಕ 50 ಸಾವಿರ ಸಮೀಪಿಸಿದೆ. ಶಸ್ತ್ರಚಿಕಿತ್ಸೆಗಳ ಸಂಖ್ಯೆಯೂ ಈ ಅವಧಿಯಲ್ಲಿ ದುಪ್ಪಟ್ಟಾಗಿದೆ. 2014ರಲ್ಲಿ 5,448 ಪ್ರಮುಖ (ಮೇಜರ್) ಶಸ್ತ್ರಚಿಕಿತ್ಸೆ ಹಾಗೂ 18,526 ಸಣ್ಣ (ಮೈನರ್) ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗಿತ್ತು. ಈಗ ಆ ಸಂಖ್ಯೆ ಕ್ರಮವಾಗಿ 10 ಸಾವಿರ ಹಾಗೂ 50 ಸಾವಿರದ ಗಡಿ ಸಮೀಪಿಸಿದೆ.
ವಿಕ್ಟೋರಿಯಾ ಆಸ್ಪತ್ರೆಯು ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಬಿಎಂಸಿಆರ್‌ಐ) ಅಡಿ ಕಾರ್ಯನಿರ್ವಹಿಸುತ್ತಿದ್ದು, ಆರ್ಥೋಪೆಡಿಕ್ಸ್, ಡರ್ಮಟಾಲಜಿ, ಸೈಕಿಯಾಟ್ರಿ, ರೇಡಿಯಾಲಜಿ, ರೇಡಿಯೊಥೆರಪಿ, ಫಿಸಿಯೋಥೆರಪಿ, ನ್ಯೂರಾಲಜಿ, ನ್ಯೂರೋಸರ್ಜರಿ, ಕಾರ್ಡಿಯಾಲಜಿ ಸೇರಿ ವಿವಿಧ ವಿಭಾಗಗಳಿವೆ. ಎಕ್ಸ್–ರೆ, ಸಿ.ಟಿ ಸ್ಕ್ಯಾನ್ ಸೇರಿದಂತೆ ವಿವಿಧ ಪರೀಕ್ಷೆಗಳು ಲಭ್ಯ ಇವೆ.
ಐಸಿಯು ಹಾಸಿಗೆ ಸಮಸ್ಯೆ: ವಿಕ್ಟೋರಿಯಾ ಹಾಗೂ ಅಪಘಾತ ಮತ್ತು ತುರ್ತು ಚಿಕಿತ್ಸಾ ಕೇಂದ್ರದಿಂದ 70 ಐಸಿಯು ಹಾಸಿಗೆಗಳಿವೆ. ಈ ಹಾಸಿಗೆಗಳ ಕೊರತೆಯಿಂದ ಕೆಲ ಸಂದರ್ಭದಲ್ಲಿ ಜಯನಗರ ಸಾರ್ವಜನಿಕ ಆಸ್ಪತ್ರೆ, ಕೆ.ಸಿ. ಜನರಲ್ ಸೇರಿದಂತೆ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿನ ಹಾಸಿಗೆ ಲಭ್ಯತೆಯ ಮಾಹಿತಿ ಪಡೆದು, ಅಲ್ಲಿಗೆ ರೋಗಿಗಳನ್ನು ಶಿಫಾರಸು ಮಾಡಲಾಗುತ್ತಿದೆ. ವೈದ್ಯರು ಬರೆದುಕೊಡುವ ಎಲ್ಲ ಔಷಧಗಳು ಆಸ್ಪತ್ರೆಯಲ್ಲಿ ಲಭ್ಯವಿರದಿರುವುದರಿಂದ ಹೊರಗಡೆ ಪಡೆಯಲು ಸೂಚಿಸಲಾಗುತ್ತಿದೆ. ಇದು ರೋಗಿಗಳ ಅಸಮಾಧಾನಕ್ಕೆ ಕಾರಣವಾಗಿದೆ.
‘ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ದೊರೆಯುತ್ತದೆ. ಆದರೆ, ದಿನವಿಡೀ ಕಾಯಬೇಕಾದ ಪರಿಸ್ಥಿತಿಯಿದೆ. ದೂರದ ಊರುಗಳಿಂದ ಬಂದವರಿಗೆ ಸಮಸ್ಯೆ ಆಗುತ್ತಿದೆ. ವಾರ್ಡ್‌ಗಳಿಗೆ ಬರುವ ಸಿಬ್ಬಂದಿ ಅನಗತ್ಯವಾಗಿ ರೇಗಾಡುತ್ತಾರೆ. ವೈದ್ಯರು ಉತ್ತಮವಾಗಿ ನೋಡುತ್ತಾರೆ’ ಎನ್ನುವುದು ರೋಗಿಗಳ ಹಾಗೂ ಅವರ ಸಹಾಯಕರ ಅಭಿಮತವಾಗಿದೆ.
ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಸಾವಿರ ಹಾಸಿಗೆಗಳ ಕಟ್ಟಡ
ಆಸ್ಪತ್ರೆಗೆ ರಾಜ್ಯದ ವಿವಿಧೆಡೆಯಿಂದ ರೋಗಿಗಳು ಬರುತ್ತಿದ್ದು ಚಿಕಿತ್ಸೆ ವಿಳಂಬವಾಗದಂತೆ ನೋಡಿಕೊಳ್ಳಲಾಗುತ್ತಿದೆ. ಐಸಿಯು ಹಾಸಿಗೆ ಭರ್ತಿಯಾಗಿದ್ದಲ್ಲಿ ಮಾತ್ರ ಬೇರೆ ಆಸ್ಪತ್ರೆಗೆ ಶಿಫಾರಸು ಮಾಡಲಾಗುತ್ತದೆ.–ಡಾ. ದೀಪಕ್ ಎಸ್., ವಿಕ್ಟೋರಿಯಾ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ
ಪ್ರಮುಖ ಸಮಸ್ಯೆಗಳು
ಹೊರರೋಗಿ ವಿಭಾಗದಲ್ಲಿ ದಟ್ಟಣೆಯಿಂದ ವೈದ್ಯರ ಭೇಟಿಗೆ ಅಧಿಕ ಅವಧಿ ಕಾಯಬೇಕಾದ ಸ್ಥಿತಿ
ಐಸಿಯು ಹಾಸಿಗೆ ಕೊರತೆಯಿಂದ ಕೆಲ ಸಂದರ್ಭಗಳಲ್ಲಿ ಬೇರೆ ಆಸ್ಪತ್ರೆಗೆ ಶಿಫಾರಸು ಮಾಡಬೇಕಾದ ಅನಿವಾರ್ಯ
ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಹೆಚ್ಚಿದ್ದರಿಂದ ಸಿಬ್ಬಂದಿಗೆ ಸವಾಲಾದ ನಿರ್ವಹಣೆ
ರೋಗಿಗಳ ಕುಟುಂಬಸ್ಥರು, ಸಂಬಂಧಿಗಳಿಗೆ ಆಸ್ಪತ್ರೆ ಒಳಗಡೆ ಪ್ರವೇಶಕ್ಕೆ ನಿರ್ಬಂಧದಿಂದ ಆವರಣದಲ್ಲೇ ಕಾಯುವಿಕೆ
ಕೆಲ ಔಷಧಗಳು ಲಭ್ಯವಿರದ ಕಾರಣ ಹೊರಗಡೆ ಪಡೆಯುವಂತೆ ಸೂಚನೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.