ADVERTISEMENT

ಜಿ–20, ಏರ್‌ ಶೋ ಪರಿಣಾಮ: ಬೆಂಗಳೂರು ಹೋಟೆಲ್‌ಗಳಲ್ಲಿ ಕೊಠಡಿಗಳು ಭರ್ತಿ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2023, 5:40 IST
Last Updated 7 ಫೆಬ್ರುವರಿ 2023, 5:40 IST
   

ಬೆಂಗಳೂರು: ಭಾರತ ಇಂಧನ ಸಪ್ತಾಹ, ಜಿ–20 ಸಭೆ ಹಾಗೂ ಏರ್‌ ಶೋ ಪರಿಣಾಮ ಹೊರ ರಾಜ್ಯ ಹಾಗೂ ವಿದೇಶದ ಪ್ರತಿನಿಧಿಗಳ ವಾಸ್ತವ್ಯಕ್ಕೆ ನಗರದ ಹೋಟೆಲ್‌ಗಳಲ್ಲಿನ ಅಂದಾಜು 50 ಸಾವಿರ ಕೊಠಡಿಗಳನ್ನು ಕಾಯ್ದಿರಿಸಲಾಗಿದೆ.

ಸೋಮವಾರದಿಂದ ಆರಂಭ ಗೊಂಡಿರುವ ಭಾರತ ಇಂಧನ ಸಪ್ತಾಹ ಫೆ.8ರ ವರೆಗೆ ನಡೆಯಲಿದೆ. ಫೆ.13ರಿಂದ 17ರ ತನಕ ಏರ್‌ ಶೋ ಆಯೋಜಿಸಲಾಗಿದೆ.

ನಗರದಲ್ಲಿರುವ ಪಂಚತಾರಾ ಹೋಟೆಲ್‌ಗಳ ಕೊಠಡಿಗಳನ್ನು ಪೂರ್ಣ ಪ್ರಮಾಣದಲ್ಲಿ ಕಾಯ್ದಿರಿಸಲಾಗಿದೆ. ತ್ರಿ ಸ್ಟಾರ್‌ ಹೋಟೆಲ್‌ಗಳಲ್ಲಿ ಕೆಲವು ಕೊಠಡಿಗಳು ಮಾತ್ರ ಲಭ್ಯವಿದ್ದು, ಅವುಗಳ ದರವೂ ಹೆಚ್ಚಳವಾಗಿದೆ.

ADVERTISEMENT

‘ಅತಿಗಣ್ಯ ವ್ಯಕ್ತಿಗಳಿಗೆ ವಾಸ್ತವ್ಯ ಕಲ್ಪಿಸಲು ಹೋಟೆಲ್‌ಗಳಲ್ಲಿ ಉಳಿಸಿಕೊಂಡಿದ್ದ ಕೆಲವು ಕೊಠಡಿಗಳೂ ಅಷ್ಟೇ ವೇಗವಾಗಿ ಬುಕ್‌ ಆಗಿವೆ. ಹೀಗಾಗಿ, ಬಹುತೇಕ ಹೋಟೆಲ್‌ಗಳಲ್ಲಿ ಕೊಠಡಿಗಳು ಖಾಲಿ ಇಲ್ಲ. ಫೆ.20ರ ತನಕ ಇದೇ ಪರಿಸ್ಥಿತಿಯಿರುವ ಸಾಧ್ಯತೆಯಿದೆ’ ಎಂದು ಬೃಹತ್‌ ಬೆಂಗಳೂರು ಹೋಟೆಲ್‌ ಅಸೋಸಿಯೇಷನ್‌ ಅಧ್ಯಕ್ಷ ಪಿ.ಸಿ.ರಾವ್‌ ತಿಳಿಸಿದ್ದಾರೆ.

ಪ್ರತಿ ವರ್ಷ ಏರ್‌ ಶೋ ಸೇರಿದಂತೆ ಇತರೆ ಚಟುವಟಿಕೆಯಿಂದ ಕೊಠಡಿಗಳ ಕಾಯ್ದಿರಿಸುವಿಕೆ ಪ್ರಮಾಣ ಹೆಚ್ಚಿರುತ್ತಿತ್ತು. ಆದರೆ, ಈ ವರ್ಷ ಮೂರು ಪ್ರಮುಖ ಕಾರ್ಯಕ್ರಮಗಳು ಆಸುಪಾಸಿನಲ್ಲೇ ನಡೆಯುತ್ತಿರುವ ಪರಿಣಾಮ ಕೊಠಡಿಗಳ ಕಾಯ್ದಿರಿಸುವಿಕೆ ಹೆಚ್ಚಾಗಿದೆ ಎಂದೂ ಹೇಳಿದರು.

‘ಕೇಂದ್ರೀಯ ವಾಣಿಜ್ಯ ಪ್ರದೇಶದಲ್ಲಿರುವ ಪಂಚತಾರಾ ಹೋಟೆಲ್‌ಗಳಲ್ಲಿ ಕೊಠಡಿಗಳು ಖಾಲಿ ಇಲ್ಲ’ ಎಂದು ಪ್ರತಿನಿಧಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.