ADVERTISEMENT

ಸಂವಿಧಾನ ದುರ್ಬಲಗೊಳಿಸಲು ಮತ ಕಳವು: ಮುಖ್ಯಮಂತ್ರಿ ಸಿದ್ದರಾಮಯ್ಯ

ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2025, 15:37 IST
Last Updated 15 ಸೆಪ್ಟೆಂಬರ್ 2025, 15:37 IST
<div class="paragraphs"><p>ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮವನ್ನು ಸಚಿವ ಎಚ್.ಸಿ. ಮಹದೇವಪ್ಪ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಕೆ.ಎಚ್. ಮುನಿಯಪ್ಪ ತಮಟೆ ಬಾರಿಸಿ ಉದ್ಘಾಟಿಸಿದರು. ಶಾಸಕ ಎಸ್‌.ಎನ್‌. ನಾರಾಯಣಸ್ವಾಮಿ,&nbsp;ಕರ್ನಾಟಕ ಅಲೆಮಾರಿ ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಉಪಸ್ಥಿತರಿದ್ದರು </p></div>

ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮವನ್ನು ಸಚಿವ ಎಚ್.ಸಿ. ಮಹದೇವಪ್ಪ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಕೆ.ಎಚ್. ಮುನಿಯಪ್ಪ ತಮಟೆ ಬಾರಿಸಿ ಉದ್ಘಾಟಿಸಿದರು. ಶಾಸಕ ಎಸ್‌.ಎನ್‌. ನಾರಾಯಣಸ್ವಾಮಿ, ಕರ್ನಾಟಕ ಅಲೆಮಾರಿ ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಉಪಸ್ಥಿತರಿದ್ದರು

   

-ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಒಬ್ಬ ವ್ಯಕ್ತಿ, ಒಂದು ಮತ, ಒಂದು ಮೌಲ್ಯ’ ಎಂಬ ಎಲ್ಲರಿಗೂ ಸಮಾನವಾದ ಮತದಾನದ ಹಕ್ಕನ್ನು ಸಂವಿಧಾನದ ಮೂಲಕ ಅಂಬೇಡ್ಕರ್‌ ನೀಡಿದ್ದರು. ಮತ ಕಳವಿನ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ದುರ್ಬಲಗೊಳಿಸುವ ಹುನ್ನಾರವನ್ನು ಪಟ್ಟಭದ್ರ ಹಿತಾಸಕ್ತಿಗಳು ಮಾಡುತ್ತಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ADVERTISEMENT

ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಸೋಮವಾರ ನಡೆದ 'ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ’ ಉದ್ಘಾಟಿಸಿ ಅವರು ಮಾತನಾಡಿದರು.

‘ಅಸಮಾನತೆ ಇದ್ದರೆ ಶೋಷಣೆ ಇರುತ್ತದೆ. ಸಮಾನತೆ ಬಂದಾಗ ಶೋಷಣೆ ಇಲ್ಲವಾಗುತ್ತದೆ. ನಮ್ಮ ಸಂವಿಧಾನವು ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತೆಯನ್ನು ಸಾರುತ್ತದೆ. ಸಮಾನ ಹಕ್ಕು, ಸಮಾನ ಅವಕಾಶವನ್ನು ನೀಡುವ ಸಂವಿಧಾನ ಇರಬಾರದು ಎಂದು ಮನುವಾದಿಗಳು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ’ ಎಂದು ಹೇಳಿದರು.

‘1950ರಲ್ಲಿ ಸಂವಿಧಾನ ಜಾರಿಯಾದಾಗಲೂ ಸಂವಿಧಾನವನ್ನು ವಿರೋಧಿಸಿದ್ದರು. ಈಗಲೂ ವಿರೋಧಿಸುವವರು ಇದ್ದಾರೆ. ಅವರ ಆಶಯ ಈಡೇರಬಾರದು. ಮತ ಕಳವು ಮಾಡಲು ಯಾವ ಕಾರಣಕ್ಕೂ ಬಿಡಬಾರದು. ಪ್ರಜಾಪ್ರಭುತ್ವ ದುರ್ಬಲಗೊಳ್ಳದಂತೆ ಕಾಪಾಡಬೇಕು. ಪ್ರಜಾಪ್ರಭುತ್ವದ ರಕ್ಷಣೆಯಾದರೆ ನಮ್ಮ ರಕ್ಷಣೆಯಾಗುತ್ತದೆ’ ಎಂದು ಪ್ರತಿಪಾದಿಸಿದರು.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮಾತನಾಡಿ, ‘ವಿದ್ಯಾರ್ಥಿಗಳಲ್ಲಿ, ಯುವ ಜನರಲ್ಲಿ ನಾಯಕತ್ವ ಗುಣವನ್ನು ಬೆಳೆಸಬೇಕಿದೆ. ಪ್ರಜಾಪ್ರಭುತ್ವದ ಮೌಲ್ಯಗಳ ಬಗ್ಗೆ ಅರಿವು ಮೂಡಿಸಬೇಕಿದೆ. ಮದ್ದುಗುಂಡಿಗಿಂತ ಮತದಾನ ಬಲಾಢ್ಯ ಎನ್ನುವ ಮಾತಿದೆ. ನಾನು, ಸಿದ್ದರಾಮಯ್ಯ ಸೇರಿ ನಾವೆಲ್ಲ ಈ ಸ್ಥಾನದಲ್ಲಿ ಕೂರಲು ಮತದಾನವೇ ಕಾರಣ. ಇಲ್ಲದೇ ಇದ್ದರೆ ರಾಜ ಮಹಾರಾಜರೇ ಇರುತ್ತಿದ್ದರು. ಇಂದು ಅವರೆಲ್ಲ ಮನೆಯಲ್ಲಿ ಕೂರುವಂತೆ ಪ್ರಜಾಪ್ರಭುತ್ವ ವ್ಯವಸ್ಥೆ ಮಾಡಿದೆ’ ಎಂದು ತಿಳಿಸಿದರು.

ಆಹಾರ ಸಚಿವ ಕೆ.ಎಚ್‌. ಮುನಿಯಪ್ಪ, ಬಿಡಿಎ ಅಧ್ಯಕ್ಷ ಎನ್‌.ಎ. ಹ್ಯಾರಿಸ್‌, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್‌ ಅಹಮದ್‌, ಶಾಸಕ ಎಸ್‌.ಎನ್‌. ನಾರಾಯಣಸ್ವಾಮಿ, ಡಾ. ಬಿ.ಆರ್‌. ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಅಧ್ಯಕ್ಷ ಆರ್‌. ಸಂಪತ್‌ರಾಜ್, ಆದಿ ಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್. ಮಂಜುನಾಥ್‌, ಅಲೆಮಾರಿ, ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಉಪಸ್ಥಿತರಿದ್ದರು.

ಬೈಕ್‌ ರ‍್ಯಾಲಿ ವಿವಿಧ ಕಾರ್ಯಕ್ರಮ

‘ನನ್ನ ಮತ ನನ್ನ ಹಕ್ಕು’ ಘೋಷವಾಕ್ಯದೊಂದಿಗೆ ರಾಜ್ಯದಾದ್ಯಂತ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಆಚರಿಸಲಾಯಿತು. ಜಿಲ್ಲಾ ಮಟ್ಟದಲ್ಲಿ ಸೈಕಲ್‌ ರ‍್ಯಾಲಿ ರಾಜ್ಯಮಟ್ಟದಲ್ಲಿ ಬೈಕ್‌ ರ‍್ಯಾಲಿ ಶಾಲಾ ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ ಛಾಯಾಗ್ರಹಣ ಸ್ಪರ್ಧೆ ಭಾಷಣ ಸ್ಫರ್ಧೆ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಬೈಕ್‌ ಚಲಾಯಿಸಿ ಬೈಕ್‌ ರ‍್ಯಾಲಿಗೆ ಹುರುಪು ತುಂಬಿದರು.

ವಿಧಾನಸೌಧದಿಂದ ಆರಂಭಗೊಂಡ ರ‍್ಯಾಲಿ ನಗರದಲ್ಲಿ ಸುತ್ತು ಹಾಕಿ ಮತ್ತೆ ವಿಧಾನಸೌಧದಲ್ಲಿಯೇ ಕೊನೆಗೊಂಡಿತು. ಕ್ರೈಸ್‌ ವತಿಯಿಂದ ಪ್ರತಿಭಾ ಪುರಸ್ಕಾರ ನಡೆಯಿತು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದ ಪರಿಶಿಷ್ಟ ಜಾತಿಯ ನಿರುದ್ಯೋಗಿಗಳಿಗೆ ಎಲೆಕ್ಟ್ರಾನಿಕ್‌ ಮತ್ತು ಡಿಜಿಟಲ್‌ ಉದ್ಯಮ ಸ್ಥಾಪಿಸಲು ಸಹಾಯಧನ ವಿತರಿಸಲಾಯಿತು.

‘ಸರ್ವಾಧಿಕಾರಿ ಆರಾಧನೆ: ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಸವಾಲು’

‘ಸರ್ವಾಧಿಕಾರಿ ಪ್ರವೃತ್ತಿಯು ಸಮಾನತೆಗೆ ಮತ್ತು ಸಾಮಾನ್ಯ ಜನರ ಏಳಿಗೆಯ ಹಿತಕ್ಕೆ ವಿರುದ್ಧವಾಗಿ ಆಡಳಿತ ನೀಡುತ್ತದೆ. ಇದು ಮನುಕುಲದ ಹಿತವನ್ನು ನಾಶ ಮಾಡುತ್ತದೆ ಎಂದು 2007ರಲ್ಲಿ ತಿಳಿಸಿದ ವಿಶ್ವಸಂಸ್ಥೆಯು ಸೆ.15 ಅನ್ನು ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಎಂದು ಘೋಷಿಸಿತು’ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಹೇಳಿದರು.

‘ಭಾರತವು ಬುದ್ಧ ದೇಶ. ಶಾಂತಿ ಸೌಹಾರ್ದ ಸಹಿಷ್ಣುತೆ ಸಹಬಾಳ್ವೆಯ ಚರಿತ್ರೆಯನ್ನು ನಿರ್ಮಾಣ ಮಾಡಿದ ದೇಶ. ಈಗ ಶಾಂತಿ ಸೌಹಾರ್ದ ಸಹಬಾಳ್ವೆ ಸಹಿಷ್ಣುತೆಗೆ ಧಕ್ಕೆ ತರುವವರು ಮತಾಂಧರು ಸರ್ವಾಧಿಕಾರಿ ನಾಯಕತ್ವವನ್ನು ಆರಾಧಿಸುವವರಿಂದ ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಸವಾಲು ಎದುರಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.