ADVERTISEMENT

ಬಿಬಿಎಂಪಿ: ಹೆಚ್ಚುವರಿ ತೆರಿಗೆ ಸಂಗ್ರಹಕ್ಕೆ ಸೂಚನೆ

ಬಿಬಿಎಂಪಿ: ಮುಂದಿನ 30 ದಿನಗಳಲ್ಲಿ ₹900 ಕೋಟಿ ಗುರಿ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2024, 0:30 IST
Last Updated 13 ಫೆಬ್ರುವರಿ 2024, 0:30 IST
   

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಎಂಟೂ ವಲಯಗಳಲ್ಲಿ ಹೆಚ್ಚುವರಿಯಾಗಿ ₹157 ಕೋಟಿ ಆಸ್ತಿ ತೆರಿಗೆಯನ್ನು ಒಂದು ವಾರದಲ್ಲಿ ಸಂಗ್ರಹಿಸಬೇಕು ಎಂದು ವಲಯ ಆಯುಕ್ತರಿಗೆ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಸೂಚಿಸಿದ್ದಾರೆ.

ಮುಖ್ಯ ಆಯುಕ್ತರ ಸೂಚನೆಯಂತೆ ಫೆ.19ರೊಳಗೆ ಕನಿಷ್ಠ ಗುರಿಯನ್ನು ನಿಗದಿ ಮಾಡಿ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್‌ ಮೌದ್ಗಿಲ್‌ ಅವರು ವಲಯ ಆಯುಕ್ತರಿಗೆ ‘ಕೈಬರಹ‘ದ ಆದೇಶವನ್ನು ಫೆ.12ರಂದು ಹೊರಡಿಸಿದ್ದಾರೆ.

‘ಎಲ್ಲ ರೀತಿಯಲ್ಲಿಯೂ ತೆರಿಗೆ ಸಂಗ್ರಹಿಸುವತ್ತ ತಮ್ಮ ಗಮನ ಕೇಂದ್ರೀಕೃತವಾಗಿರಬೇಕು. ನಕ್ಷೆ
ಅನುಮೋದನೆಗೊಂಡಿರುವ ಹಾಗೂ ಖಾತಾ ನೀಡಲಾಗಿರುವ ಎಲ್ಲ ಆಸ್ತಿಗಳನ್ನೂ ತೆರಿಗೆ ವ್ಯಾಪ್ತಿಗೆ ತರಬೇಕು. ತೆರಿಗೆ ಪುನರ್‌ವಿಮರ್ಶೆ ಮಾಡಿದ ಎಲ್ಲ ಪ್ರಕರಣಗಳಲ್ಲೂ ಜಪ್ತಿ, ಚರಾಸ್ತಿಗಳನ್ನು ವಶಪಡಿಸಿಕೊಳ್ಳುವ ಮೂಲಕ ತೆರಿಗೆ ಪಾವತಿ ಮಾಡಿಸಿಕೊಳ್ಳಬೇಕು. ಬಾಕಿ ಉಳಿಸಿಕೊಂಡಿರುವವರ ಮೇಲೆ ಕ್ರಮ ಕೈಗೊಳ್ಳಬೇಕು’ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ADVERTISEMENT

‘2023–24ನೇ ಸಾಲಿನಲ್ಲಿ ₹4,500 ಕೋಟಿ ತೆರಿಗೆ ಸಂಗ್ರಹದ ಗುರಿ ಹೊಂದಲಾಗಿದೆ. ಈಗಾಗಲೇ ₹3,600 ಕೋಟಿ ಸಂಗ್ರಹಿಸಲಾಗಿದೆ. ಫೆಬ್ರುವರಿ ಅಂತ್ಯಕ್ಕೆ ₹500 ಕೋಟಿ ಸಂಗ್ರಹವಾಗಲಿದೆ. ಲೋಕಸಭೆ ಚುನಾವಣೆ ಸಮೀಪವಾಗುತ್ತಿರುವ ನಿಟ್ಟಿನಲ್ಲಿ ಮುಂದಿನ 30 ದಿನಗಳಲ್ಲಿ ₹900 ಕೋಟಿ ಸಂಗ್ರಹಿಸಬೇಕಿದೆ. ಹೀಗಾಗಿ ಪ್ರತಿ ವಾರವೂ ಹೆಚ್ಚುವರಿಯಾಗಿ ₹150 ಕೋಟಿಯಷ್ಟು ಹೆಚ್ವುವರಿಯಾಗಿ ತೆರಿಗೆ ಸಂಗ್ರಹಿಸಲು ಸೂಚಿಸಲಾಗಿದೆ’ ಎಂದು ಮುನೀಶ್‌ ಮೌದ್ಗಿಲ್‌ ಅವರು ಮಾಹಿತಿ
ನೀಡಿದರು.

ಮಾನವೀಯತೆ ತೋರಿ: ‘ಚುನಾವಣೆ ಕೆಲಸ, ತೆರಿಗೆ ಪುನರ್‌ ನಿಗದಿ ಸೇರಿದಂತೆ ನಿತ್ಯದ ನಿಗದಿತ ಕೆಲಸಗಳನ್ನೂ ನಿರ್ವಹಿಸುತ್ತಿರುವುದರಿಂದ ಹೆಚ್ಚು ವರಿ ತೆರಿಗೆ ಸಂಗ್ರಹ ಮತ್ತಷ್ಟು ಹೊರೆಯಾಗಲಿದೆ. ಈಗಾಗಲೇ ನಾವೆಲ್ಲ ನಿತ್ಯ ಸುಮಾರು 14 ಗಂಟೆ ಕೆಲಸ ಮಾಡುತ್ತಿದ್ದೇವೆ. ನಮ್ಮ ಮೇಲೂ ಮಾನವೀಯತೆ ತೋರಬೇಕು’ ಎಂದು ಕಂದಾಯ ವಿಭಾಗದ ಸಿಬ್ಬಂದಿ ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.