ADVERTISEMENT

ವಿಮೆ ನವೀಕರಣದ ಹೆಸರಿನಲ್ಲಿ ವಂಚನೆ: ವೈಟ್‌ಫೀಲ್ಡ್‌ ಠಾಣೆಯಲ್ಲಿ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2025, 19:02 IST
Last Updated 6 ಸೆಪ್ಟೆಂಬರ್ 2025, 19:02 IST
<div class="paragraphs"><p>ಸೈಬರ್ ಅಪರಾಧ</p></div>

ಸೈಬರ್ ಅಪರಾಧ

   

ಬೆಂಗಳೂರು: ಆರೋಗ್ಯ ವಿಮೆಯನ್ನು ನವೀಕರಣ ಮಾಡಿಕೊಡುವುದಾಗಿ ವ್ಯಕ್ತಿಯೊಬ್ಬರಿಗೆ ₹5.16 ಲಕ್ಷ ವಂಚಿಸಲಾಗಿದ್ದು, ಈ ಸಂಬಂಧ ವೈಟ್‌ಫೀಲ್ಡ್ ಸೈಬರ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಿಗ್ನೇಶ್‌ ರವೀಂದ್ರ ಭಾಯ್‌ ದೇಸಾಯಿ ಅವರು ನೀಡಿರುವ ದೂರು ಆಧರಿಸಿ ಮಾಹಿತಿ ತಂತ್ರಜ್ಞಾನ (ಐ.ಟಿ) ಕಾಯ್ದೆಯ ಸೆಕ್ಷನ್‌ 66ಸಿ, 66ಡಿ ಹಾಗೂ ಭಾರತೀಯ ನ್ಯಾಯ ಸಂಹಿತೆ(ಬಿಎನ್‌ಎಸ್‌) 318(4), 319(2)ರ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

ADVERTISEMENT

ರೋಹಿತ್‌ ಶಿಂಧೆ ಹಾಗೂ ರೋಷನ್‌ ಮುಖರ್ಜಿ ಅವರು ವಂಚಿಸಿದ್ದಾರೆ ಎಂದು ಜಿಗ್ನೇಶ್‌ ರವೀಂದ್ರ ಅವರು ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

‘ಜಿಗ್ನೇಶ್‌ ಅವರು ಆರೋಗ್ಯ ವಿಮೆ ಮಾಡಿಸಿದ್ದರು. ವಿಮೆಯ ಅವಧಿ ಮುಕ್ತಾಯ ಆಗಿದ್ದರಿಂದ ಗ್ರಾಹಕರ ಸೇವಾ ಕೇಂದ್ರಕ್ಕೆ ಕರೆ ಮಾಡಿ, ಮಾಹಿತಿ ನೀಡಿದ್ದರು. ನಂತರ, ಅಪರಿಚಿತರು ಕರೆ ಮಾಡಿ ರೋಹಿತ್‌ ಶಿಂಧೆ ಹಾಗೂ ರೋಷನ್‌ ಮುಖರ್ಜಿ ಎಂದು ಪರಿಚಯಿಸಿಕೊಂಡಿದ್ದರು. ಆರೋಗ್ಯ ವಿಮೆಯನ್ನು ನವೀಕರಣ ಮಾಡಿಕೊಡುವುದಾಗಿ ನಂಬಿಸಿದ್ದರು. ಐವಿಆರ್ ಅರ್ಜಿಯನ್ನು ಭರ್ತಿ ಮಾಡಿ ಕಳುಹಿಸುವಂತೆ ತಿಳಿಸಿದ್ದರು. ವಾಟ್ಸ್‌ಆ್ಯಪ್‌ನಲ್ಲಿ ವಂಚಕರು ಕಳುಹಿಸಿದ್ದ ಅರ್ಜಿಯನ್ನು ಡೌನ್‌ಲೋಡ್‌ ಮಾಡಿಕೊಂಡು ಭರ್ತಿ ಮಾಡಿದ್ದರು. ಅರ್ಜಿಯ ಜತೆಗೆ ಕ್ರೆಡಿಟ್‌ ಕಾರ್ಡ್‌ನಿಂದ ₹33 ಸಾವಿರ ಪ್ರೀಮಿಯಂ ಸಹ ಪಾವತಿಸಿದ್ದರು. ನಂತರ, ದೂರುದಾರರ ಗಮನಕ್ಕೆ ಬಾರದಂತೆ ವಂಚಕರು, ಕ್ರೆಡಿಟ್‌ ಕಾರ್ಡ್‌ನಿಂದ ಹಂತಹಂತವಾಗಿ ₹5.16 ಲಕ್ಷವನ್ನು ವರ್ಗಾವಣೆ ಮಾಡಿಕೊಂಡಿದ್ದರು’ ಎಂದು ಮೂಲಗಳು ಹೇಳಿವೆ.

ಖಾತೆಯಿಂದ ಹಣ ದೋಚಿದರು: ಇನ್ನೊಂದು ಪ್ರಕರಣದಲ್ಲಿ ಕೆ.ಆರ್‌.ಪುರದ ನಿವಾಸಿ ಶೋಭಾ ರಮೇಶ್ ಅವರ ಬ್ಯಾಂಕ್‌ ಖಾತೆಯಿಂದ ಸೈಬರ್ ವಂಚಕರು, ₹5 ಲಕ್ಷ ದೋಚಿದ್ದಾರೆ.

‘ಜನವರಿ 1ರಿಂದ ಆಗಸ್ಟ್‌ 27ರ ವರೆಗೆ ಹಂತಹಂತವಾಗಿ ವಂಚಕರು ಹಣ ದೋಚಿದ್ದಾರೆ. ಇತ್ತೀಚೆಗೆ ಬ್ಯಾಂಕ್‌ಗೆ ತೆರಳಿ, ಪಾಸ್‌ ಬುಕ್‌ ಅನ್ನು ಮುದ್ರಿಸಿದಾಗ ಹಣ ಡ್ರಾ ಮಾಡಿಕೊಂಡಿರುವುದು ಗೊತ್ತಾಯಿತು’ ಎಂದು ಶೋಭಾ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

₹2.44 ಲಕ್ಷ ವಂಚನೆ

ಆನ್‌ಲೈನ್‌ನಲ್ಲಿ ಪೌಷ್ಟಿಕಾಂಶ ಪುಡಿಯನ್ನು (ಪ್ರೊಟೀನ್‌ಯುಕ್ತ ಪೌಡರ್‌) ಬುಕ್‌ ಮಾಡಿದ್ದ ಪಟ್ಟಂದೂರು ಅಗ್ರಹಾರದ ನಿವಾಸಿ ಮಚ್ಚನಿ ಶ್ರೀಹರ್ಷ ಅವರಿಗೆ ₹2.44 ಲಕ್ಷ ವಂಚಿಸಲಾಗಿದ್ದು, ಈ ಸಂಬಂಧ ವೈಟ್‌ಫೀಲ್ಡ್‌ ಸೈಬರ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಚ್ಚನಿ ಶ್ರೀಹರ್ಷ ಅವರು ಆನ್‌ಲೈನ್‌ನಲ್ಲಿ ಪೌಷ್ಟಿಕಾಂಶ ಪುಡಿಯನ್ನು ಆರ್ಡರ್ ಮಾಡಿದ್ದರು. ಎರಡು ದಿನಗಳ ಬಳಿಕ ಅಪರಿಚಿತ ಸಂಖ್ಯೆಯಿಂದ ಕರೆ ಬಂದಿತ್ತು. ‘ನೀವು ಆರ್ಡರ್ ಮಾಡಿರುವ ಪೌಷ್ಟಿಕಾಂಶ ಪುಡಿ ಬರಲು ಇನ್ನೂ 30 ದಿನಗಳ ಬೇಕಿದೆ. ಇಂದೇ ಪುಡಿ ಬೇಕಾದರೆ ಮೊದಲು ಆರ್ಡರ್ ಮಾಡಿರು ವುದನ್ನು ರದ್ದುಪಡಿಸಿ, ಹೊಸದಾಗಿ ಆರ್ಡರ್ ಮಾಡುವಂತೆ ವಂಚಕ ತಿಳಿಸಿದ್ದ. ಆತನ ಮಾತು ನಿಜವೆಂದು ನಂಬಿದ್ದ ದೂರುದಾರ, ₹2,825 ನೀಡಿ ಬುಕ್‌ ಮಾಡಿದ್ದರು. ಮತ್ತೆ ಕರೆ ಮಾಡಿದ್ದ ವಂಚಕ, ನೀವು ಹಾಕಿದ ಹಣಕ್ಕೆ ಪೌಷ್ಟಿಕಾಂಶ ಪುಡಿ ಬರುವುದಿಲ್ಲ. ಇನ್ನೂ ಹೆಚ್ಚಿನ ಹಣ ಹಾಕಬೇಕೆಂದು ತಿಳಿಸಿ ₹2.44 ಲಕ್ಷ ಹಣ ವರ್ಗಾವಣೆ ಮಾಡಿಸಿಕೊಂಡಿದ್ದ’ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.