ADVERTISEMENT

International Yoga Day 2025: ಬೆಂಗಳೂರು ನಗರದಲ್ಲಿ ಸಂಭ್ರಮದ ಯೋಗಾಭ್ಯಾಸ

​ಪ್ರಜಾವಾಣಿ ವಾರ್ತೆ
Published 21 ಜೂನ್ 2025, 16:24 IST
Last Updated 21 ಜೂನ್ 2025, 16:24 IST
ಅಕ್ಷರ ಯೋಗ ಕೇಂದ್ರ ನಗರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನಗರದ ಜನರೊಂದಿಗೆ ವಿದೇಶಿಗರು ಯೋಗಾಭ್ಯಾಸ ಮಾಡಿದರು
ಅಕ್ಷರ ಯೋಗ ಕೇಂದ್ರ ನಗರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನಗರದ ಜನರೊಂದಿಗೆ ವಿದೇಶಿಗರು ಯೋಗಾಭ್ಯಾಸ ಮಾಡಿದರು   

ಬೆಂಗಳೂರು: ಸೂರ್ಯ ರಶ್ಮಿ ಭೂ ಸ್ಪರ್ಶ ಮಾಡುವ ಮುನ್ನವೇ ಸಿಲಿಕಾನ್ ಸಿಟಿಯ ಹಲವೆಡೆ ‘ಉತ್ತಮ ಆರೋಗ್ಯ’ಕ್ಕಾಗಿ ಜನರು ಶನಿವಾರ ಯೋಗಾಭ್ಯಾಸ ಮಾಡಿದರು. ಯೋಗಪಟುಗಳ ಮಾರ್ಗದರ್ಶನದಲ್ಲಿ ವಿವಿಧ ಆಸನಗಳನ್ನು ಮಾಡುವ ಮೂಲಕ ಸಂಭ್ರಮಿಸಿದರು. 

ಅಂತರರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ವಿವಿಧ ಸಂಘ–ಸಂಸ್ಥೆಗಳು, ಯೋಗ ತರಬೇತಿ ಕೇಂದ್ರಗಳು, ಶಾಲಾ–ಕಾಲೇಜುಗಳು ಸಾಮೂಹಿಕ ಯೋಗಾಸನ ಹಮ್ಮಿಕೊಂಡಿದ್ದವು. ಮುಂಜಾನೆಯೇ ಜನರು ಯೋಗ ಮ್ಯಾಟ್‌ ಹಿಡಿದು ಮೈದಾನ, ಉದ್ಯಾನಗಳಿಗೆ ತೆರಳಿ, ವಿವಿಧ ಆಸನ, ಸೂರ್ಯ ನಮಸ್ಕಾರ, ಪ್ರಾಣಾಯಾಮ ಮಾಡಿದರು. ಯೋಗಪಟುಗಳು ಸೂಕ್ತ ಮಾರ್ಗದರ್ಶನ ನೀಡಿದರು. 

ಆಯುಷ್ ಇಲಾಖೆಯು ವಿಧಾನ ಸೌಧದ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸುಮಾರು ಮೂರು ಸಾವಿರ ಮಂದಿ ಪಾಲ್ಗೊಂಡಿದ್ದರು. ಬೆಳಿಗ್ಗೆ 6 ಗಂಟೆಗೆ ನಗರದ ವಿವಿಧೆಡೆಯಿಂದ ಬಂದ ಯೋಗಾಸಕ್ತರು, 9 ಗಂಟೆವರೆಗೂ ಯೋಗಾಭ್ಯಾಸ ಮಾಡಿದರು.

ADVERTISEMENT

ಬೆಂಗಳೂರು ನಗರ ವಿಶ್ವವಿದ್ಯಾನಿಲಯವು ಸೆಂಟ್ರಲ್ ಕಾಲೇಜಿನ ಆವರಣದಲ್ಲಿರುವ ಗಡಿಯಾರ ಗೋಪುರದ ಬಳಿ ಯೋಗ ದಿನ ಆಚರಿಸಿತು. ಯೋಗಾಭ್ಯಾಸದಲ್ಲಿ ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಪ್ರೊ.ಕೆ.ಆರ್. ಜಲಜಾ, ಕುಲಸಚಿವ ಪ್ರೊ.ಬಿ.ರಮೇಶ್, ಡೀನ್‌ ಪಿ.ಆರ್. ಚೇತನ ಉಪಸ್ಥಿತರಿದ್ದರು.

‘ಪ್ರಾಚೀನ ಕಾಲದಿಂದಲೂ ದೇಶದಲ್ಲಿ ಆಚರಣೆಯಲ್ಲಿರುವ ಯೋಗ ಕಲೆಯು, ಈಗ ವಿಶ್ವದಾದ್ಯಂತ ಪಸರಿಸಿ ಅಪಾರ ಮನ್ನಣೆ ಗಳಿಸಿದೆ. ಆರೋಗ್ಯಕರ ಜೀವನಕ್ಕೆ ಸಹಕಾರಿಯಾದ ಯೋಗಾಭ್ಯಾಸದ ಪ್ರಯೋಜನವನ್ನು ಯುವಜನರು ಪಡೆದುಕೊಳ್ಳಬೇಕು’ ಎಂದು ಪ್ರೊ.ಕೆ.ಆರ್. ಜಲಜಾ ಹೇಳಿದರು. 

ಪಿಇಎಸ್ ವಿಶ್ವವಿದ್ಯಾಲಯದಲ್ಲಿ ಯೋಗ ತರಬೇತುದಾರ ರಾಜೇಶಾಚಾರಿ ಅವರ ಮಾರ್ಗದರ್ಶನದಲ್ಲಿ ಯೋಗಾಭ್ಯಾಸ ನಡೆಯಿತು. ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. 

ಆರ್ಟ್‌ ಆಫ್‌ ಲಿವಿಂಗ್‌ ಕೇಂದ್ರದ ವಿಶಾಲಾಕ್ಷಿ ಮಂಟಪದ ಎದುರು ಸಾಮೂಹಿಕ ಯೋಗಾಭ್ಯಾಸ ಮಾಡಲಾಯಿತು

‘ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯಕ್ಕೆ ಯೋಗ ಸಹಕಾರಿ. ಮನಸ್ಸು ಮತ್ತು ದೇಹವನ್ನು ಪುನರುಜ್ಜೀವನಗೊಳಿಸುತ್ತದೆ’ ಎಂದು ವಿಶ್ವವಿದ್ಯಾಲಯದ ಕುಲಸಚಿವ ಕೆ.ಎಸ್. ಶ್ರೀಧರ್ ಅಭಿಪ್ರಾಯಪಟ್ಟರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ್, ವಿಧಾನಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್.ರವಿಕುಮಾರ್, ಅಂತರರಾಷ್ಟ್ರೀಯ ಯೋಗ ಪಟು ರಾಘವೇಂದ್ರ ಪೈ, ಚಲಚಲಚಿತ್ರ ನಟ ಕೋಮಲ್ ಕುಮಾರ್, ನಟಿ ಸುಧಾರಾಣಿ ಹಾಗೂ ಬಿಜೆಪಿ ಮುಖಂಡರು ಪಾಲ್ಗೊಂಡಿದ್ದರು. 

ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ವತಿಯಿಂದ ಯೋಗ ದಿನ ಆಚರಿಸಲಾಯಿತು

ರೈಲು ಗಾಲಿ ಕಾರ್ಖಾನೆ, ನೈರುತ್ಯ ರೈಲ್ವೆಯ ಬೆಂಗಳೂರು ವಿಭಾಗ ವತಿಯಿಂದ ಬೆಂಗಳೂರಿನ ಅನುಗ್ರಹ ಸಮುದಾಯ ಕೇಂದ್ರದಲ್ಲಿ ಸಾಮೂಹಿಕ ಯೋಗಾಭ್ಯಾಸ ನಡೆಯಿತು. ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ, ಓಂಸೇವಾ ಕೇಂದ್ರ, ಎಸ್. ವ್ಯಾಸ ಸೇರಿ ವಿವಿಧ ಸಂಸ್ಥೆಗಳು ಯೋಗ ದಿನ ಆಚರಿಸಿದವು.

12 ಗಿನ್ನೆಸ್ ವಿಶ್ವದಾಖಲೆ

ಅಕ್ಷರ ಯೋಗ ಕೇಂದ್ರವು 12 ಗಿನ್ನೆಸ್ ವಿಶ್ವದಾಖಲೆಗಳೊಂದಿಗೆ ಯೋಗ ದಿನ ಆಚರಿಸಿತು. ತೈವಾನ್ ಮಲೇಶಿಯಾ ಇಟಲಿ ಅಮೆರಿಕ ಬ್ರಿಟನ್ ದುಬೈ ಸಿಂಗಪುರ ಸೇರಿ 30ಕ್ಕೂ ಅಧಿಕ ದೇಶಗಳಿಂದ ಸುಮಾರು 2500 ಮಂದಿ ಪಾಲ್ಗೊಂಡಿದ್ದರು. ಅಧೋಮುಖ ಶ್ವಾನಾಸನ ಸೇರಿ ವಿವಿಧ ಆಸನಗಳನ್ನು ಮಾಡುವ ಮೂಲಕ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಲಾಯಿತು. ಕೇಂದ್ರದ ಹಿಮಾಲಯ ಸಿದ್ಧಾ ಅಕ್ಷರ್ ಅವರು ಗಿನ್ನೆಸ್ ವಿಶ್ವ ದಾಖಲೆ ಪ್ರತಿನಿಧಿಗಳಿಂದ ಪ್ರಮಾಣ ಪತ್ರ ಸ್ವೀಕರಿಸಿದರು. 

ಆಯುಷ್ ಇಲಾಖೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿಧಾನಸೌಧದ ಮುಂಭಾಗ ಯೋಗ ಪಟುಗಳು ವಿವಿಧ ಆಸನಗಳನ್ನು ಪ್ರದರ್ಶಿಸಿದರು ಪ್ರಜಾವಾಣಿ ಚಿತ್ರ

ಯೋಗ ಸಂಗೀತ ಹಾಗೂ ನೃತ್ಯ

ಅರಮನೆ ಮೈದಾನದಲ್ಲಿ ಲೈಫ್‌ ಎಟರ್ನಲ್‌ ಟ್ರಸ್ಟ್‌ ವತಿಯಿಂದ ಸಹಜ ಯೋಗ ಸಂಗೀತ ಹಾಗೂ ನೃತ್ಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಕೇಂದ್ರ ಸಚಿವ ಪ್ರತಾಪ್‌ರಾವ್ ಜಾಧವ್ ಅವರು ವರ್ಚುವಲ್ ಆಗಿ ಉದ್ಘಾಟಿಸಿದರು. ‘ಯೋಗವು ಕೇವಲ ವ್ಯಾಯಾಮವಲ್ಲ ಇದು ದೇಹ ಮತ್ತು ಆತ್ಮವನ್ನು ಸಮತೋಲನಗೊಳಿಸುವ ದಾರಿ. ಭಾರತದ ಆಧ್ಯಾತ್ಮಿಕ ಪರಂಪರೆ ಮತ್ತು ವಸುದೈವ ಕುಟುಂಬಕಂ ತತ್ವವನ್ನು ಸಾರಿ ಹೇಳುತ್ತದೆ’ ಎಂದು ಪ್ರತಾಪ್‌ರಾವ್ ಜಾಧವ್ ಹೇಳಿದರು.  ಧನ್ವಂತರಿ ಯೋಗ ತಂಡದ ನೇತೃತ್ವದಲ್ಲಿ ಯೋಗ ಕಾರ್ಯಾಗಾರ ನಡೆಯಿತು. ಇದೇ ವೇಳೆ ವಿಶ್ವ ಸಂಗೀತ ದಿನದ ಪ್ರಯುಕ್ತ 20ಕ್ಕೂ ಹೆಚ್ಚು ದೇಶಗಳ 200 ಕಲಾವಿದರು 100ಕ್ಕೂ ಹೆಚ್ಚು ಸಂಗೀತ ವಾದ್ಯಗಳೊಂದಿಗೆ ಸಂಗೀತ ಪ್ರಸ್ತುತಪಡಿಸಿದರು.

20 ಸಾವಿರ ಮಂದಿಯಿಂದ ಯೋಗ

ಆರ್ಟ್ ಆಫ್ ಲಿವಿಂಗ್ ಅಂತರರಾಷ್ಟ್ರೀಯ ಕೇಂದ್ರದಲ್ಲಿ ಶ್ರೀ ಶ್ರೀ ರವಿಶಂಕರ ವಿದ್ಯಾ ಮಂದಿರ ಟ್ರಸ್ಟ್‌ನ 20 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ (ಆನ್‌ಲೈನ್ ವೇದಿಕೆ ನೆರವು) ಯೋಗಾಭ್ಯಾಸ ಮಾಡಿದರು. ಬಳಿಕ ಸಾಮೂಹಿಕ ಧ್ಯಾನ ನಡೆಸಲಾಯಿತು.  ಆರ್ಟ್ ಆಫ್ ಲಿವಿಂಗ್‌ನ ಶ್ರೀ ಶ್ರೀ ಯೋಗ ಶಿಕ್ಷಕರ ನೇತೃತ್ವದಲ್ಲಿ 1500ಕ್ಕೂ ಹೆಚ್ಚು ಸ್ಥಳಗಳಲ್ಲಿ ಯೋಗಾಸನಗಳು ನಡೆದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.