
ಕಾರ್ಯಕ್ರಮದಲ್ಲಿ ಬಿ.ಎಲ್. ಶಂಕರ್ ಮಾತನಾಡಿದರು. ಕೆ.ವಿ ನಾಗರಾಜಮೂರ್ತಿ, ವನಮಾಲಾ ವಿಶ್ವನಾಥ್, ಎಚ್.ಎಸ್. ಶಿವಪ್ರಕಾಶ್, ಚಿರಂಜೀವಿ ಸಿಂಘ್, ಅಜಯ ಕುಮಾರ ಸಿಂಹ ಉಪಸ್ಥಿತರಿದ್ದರು ಪ್ರಜಾವಾಣಿ ಚಿತ್ರ.
ಬೆಂಗಳೂರು: ಅಜಯ ಕುಮಾರ ಸಿಂಹ ಅವರು ಐಪಿಎಸ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಲೇ ಪ್ರಬುದ್ಧ ಚಿಂತನೆಗಳ ಮೂಲಕ ಕಾವ್ಯಲೋಕ ಕಟ್ಟಿದ್ದಾರೆ ಎಂದು ಕವಿ ನಾಟಕಕಾರ ಎಚ್.ಎಸ್. ಶಿವಪ್ರಕಾಶ್ ತಿಳಿಸಿದರು.
ಅಜಯ ಕುಮಾರ ಸಿಂಹ ಅವರ ಹಿಂದಿ ಕವಿತೆಗಳ ಅನುವಾದ ಕೃತಿ ‘ಹರಿಯಲು ಬಿಡು’ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಭಾರತೀಯ ಕಾವ್ಯ ಪರಂಪರೆಯಲ್ಲಿರುವ ವಚನಕಾರರನ್ನು, ಸೂಫಿಸಂತರನ್ನು ಅರಿತುಕೊಂಡಿರುವ ಸಿಂಹ ಅವರ ಕಾವ್ಯ ಶಕ್ತಿ ದೊಡ್ಡದು. ಎಲ್ಲ ಚಿಂತನೆಗಳನ್ನು ಹುದುಗಿಸಿಕೊಂಡಿರುವ ಅವರು ಕಾವ್ಯದ ಮೂಲಕ ಪ್ರಬುದ್ಧ ಚಿಂತನೆಗಳನ್ನು ಓದುಗರ ಮುಂದಿಟ್ಟಿದ್ದಾರೆ. ತರ್ಜುಮೆ ಮಾಡುವಾಗ ಈ ಕವನಗಳು ನನ್ನವೇ ಏನೋ ಎಂಬಂತೆ ಭಾಸವಾಗುತ್ತಿತ್ತು’ ಎಂದು ಅನುವಾದಕರೂ ಆದ ಶಿವಪ್ರಕಾಶ್ ಹೇಳಿದರು.
ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಡಾ.ಬಿ.ಎಲ್.ಶಂಕರ್ ಮಾತನಾಡಿ, ‘ಸಿಂಹ ಅವರು ಪೊಲೀಸ್ ಅಧಿಕಾರಿಯಾಗಿದ್ದರೂ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ತಮ್ಮ ಬದುಕಿನ ಭಾಗವಾಗಿಸಿಕೊಂಡಿದ್ದಾರೆ. ಅವರ ಸಾಹಿತ್ಯ ರಚನೆ ಕಂಡು ವಿಸ್ಮಯವಾಯಿತು. ಇಂತಹ ಅಧಿಕಾರಿಗಳು ಕರ್ನಾಟಕದಲ್ಲಿ ಇದ್ದರು ಎಂಬುದೇ ನಮ್ಮ ಹೆಮ್ಮೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ, ನಿವೃತ್ತ ಐಎಎಸ್ ಅಧಿಕಾರಿ ಚಿರಂಜೀವಿ ಸಿಂಘ್, ನಿವೃತ್ತ ಐಪಿಎಸ್ ಅಧಿಕಾರಿ ಅಜಯಕುಮಾರ್ ಸಿಂಹ, ಅನುವಾದ ಸಾಹಿತಿ ವನಮಾಲಾ ವಿಶ್ವನಾಥ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.