ADVERTISEMENT

ವಿಮಾನದಲ್ಲಿ ಬರುವ ಸರಗಳ್ಳರ ಸೆರೆ

​ಪ್ರಜಾವಾಣಿ ವಾರ್ತೆ
Published 30 ಜನವರಿ 2019, 20:04 IST
Last Updated 30 ಜನವರಿ 2019, 20:04 IST

ಬೆಂಗಳೂರು: ವಿಮಾನದಲ್ಲಿ ರಾಜಧಾನಿಗೆ ಬಂದು ಮಹಿಳೆಯರಿಂದ ಚಿನ್ನದ ಸರಗಳನ್ನು ದೋಚುತ್ತಿದ್ದ ಇರಾನಿ ಗ್ಯಾಂಗ್‌ನ ಮತ್ತಿಬ್ಬರು ಸದಸ್ಯರು ವಿದ್ಯಾರಣ್ಯಪುರ ಪೊಲೀಸರ ಬಲೆಗೆ ಬಿದ್ದಿದ್ದಾರೆ.

‘ಮಹಮದ್ ಅಲಿ ಹಾಗೂ ಸೈಯದ್ ಕರಾರ್ ಹುಸೈನ್ ಎಂಬುವರನ್ನು ಬಂಧಿಸಿ, ಬೈಕ್ ಹಾಗೂ ₹ 15 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿದ್ದೇವೆ. ಆರೋಪಿಗಳು ಇತ್ತೀಚೆಗೆ ಸಿಂಗಪುರ ಎಕ್ಸ್‌ಪ್ರೆಸ್ ಲೇಔಟ್‌ನಲ್ಲಿ ವಿಜಯಲಕ್ಷ್ಮಿ ಎಂಬುವರಿಂದ 30 ಗ್ರಾಂನ ಚಿನ್ನದ ಸರ ಕಿತ್ತುಕೊಂಡು ಹೋಗಿದ್ದರು’ ಎಂದು ಪೊಲೀಸರು ಹೇಳಿದ್ದಾರೆ.

ಅಲಿ ಹಾಗೂ ಸೈಯದ್ ವಿರುದ್ಧ ಮುಂಬೈ, ಕೋಲ್ಕತ್ತ ಹಾಗೂ ಬೆಂಗಳೂರಿನ ಹಲವು ಠಾಣೆಗಳಲ್ಲಿ ನೂರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಮುಂಬೈನಿಂದ ಬೆಳಿಗ್ಗೆ ವಿಮಾನದಲ್ಲಿ ನಿಲ್ದಾಣಕ್ಕೆ ಬರುತ್ತಿದ್ದ ಆರೋಪಿಗಳು, ಇರಾನಿ ಸಮುದಾಯಕ್ಕೆ ಸೇರಿದ ಯಾವುದಾದರೊಂದು ಪ್ರಾರ್ಥನಾ ಮಂದಿರದಲ್ಲಿ ವಾಸ್ತವ್ಯ ಹೂಡುತ್ತಿದ್ದರು.

ADVERTISEMENT

ಮರುದಿನ ಬೆಳಿಗ್ಗೆ 6 ಗಂಟೆಯಿಂದ 1 ಗಂಟೆವರೆಗೆ ಪ್ರತಿಷ್ಠಿತ ರಸ್ತೆಗಳಲ್ಲಿ ಸುತ್ತಾಡಿ, ಹಲವು ಮಹಿಳೆಯರಿಂದ ಸರಗಳನ್ನು ದೋಚುತ್ತಿದ್ದರು. ಬಳಿಕ ಕೃತ್ಯಕ್ಕೆ ಬಳಸಿದ್ದ ಬೈಕನ್ನು ರೈಲ್ವೆ ನಿಲ್ದಾಣದ ಪಾರ್ಕಿಂಗ್ ಪ್ರದೇಶದಲ್ಲಿ ನಿಲ್ಲಿಸಿ, ಅದೇ ದಿನ ಮುಂಬೈಗೆ ಬಸ್ ಹತ್ತುತ್ತಿದ್ದರು.

ವರ್ಷದ ಹಿಂದೆ ಮುಂಬೈ ಪೊಲೀಸರಿಗೆ ಸಿಕ್ಕಿಬಿದ್ದು ಜೈಲುಪಾಲಾಗಿದ್ದ ಆರೋಪಿಗಳು, ಆರು ತಿಂಗಳ ಹಿಂದೆ ಜಾಮೀನಿನ ಮೇಲೆ ಬಿಡುಗಡೆಯಾಗಿ ಕೃತ್ಯ ಮುಂದುವರಿಸಿದ್ದರು. ಸಂಜಯನಗರ, ಆರ್‌.ಟಿ.ನಗರ, ಸದಾಶಿವನಗರ, ಅನ್ನಪೂರ್ಣೇಶ್ವರಿ ನಗರ, ರಾಮಮೂರ್ತಿ ನಗರ, ವಿದ್ಯಾರಣ್ಯಪುರ, ಬಾಣಸವಾಡಿ ಹಾಗೂ ಯಲಹಂಕ ಠಾಣಾ ವ್ಯಾಪ್ತಿಯಲ್ಲಿ 20 ಮಹಿಳೆಯರಿಂದ ಸರಗಳನ್ನು ಕಿತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.