ADVERTISEMENT

ಕೈದಿಗಳಿಗೆ ವಿಶೇಷ ಆತಿಥ್ಯ ನೀಡಿದ್ದ ವಿಡಿಯೊ ಪ್ರಕರಣ:ರೌಡಿಶೀಟರ್ ಮಂಜುನಾಥ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2025, 23:30 IST
Last Updated 23 ನವೆಂಬರ್ 2025, 23:30 IST
ಮಂಜುನಾಥ್
ಮಂಜುನಾಥ್   

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗೆ ವಿಶೇಷ ಆತಿಥ್ಯ ನೀಡಿದ್ದ ಪ್ರಕರಣದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದ ವಿಡಿಯೊಗಳಿಗೆ ಸಂಬಂಧಿಸಿದಂತೆ ರೌಡಿಶೀಟರ್​ ಮಂಜುನಾಥ್ ಅಲಿಯಾಸ್​​ ಕುದುರೆ ಮಂಜ ಎಂಬಾತನನ್ನು ಪೊಲೀಸರು ಭಾನುವಾರ ವಿಚಾರಣೆ ನಡೆಸಿದರು.

ನಟ ದರ್ಶನ್‌ ಅವರ ಆಪ್ತ ಧನ್ವೀರ್ ಸೇರಿ ಹಲವರ ವಿಚಾರಣೆ ನಡೆಸಿದ ಬೆನ್ನಲ್ಲೇ ವಿಡಿಯೊದಲ್ಲಿ ನೃತ್ಯ ಮಾಡುತ್ತಿದ್ದ ಮಂಜುನಾಥ್ ನನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಮದ್ಯ ಕುಡಿದು ಸಹ ಕೈದಿಗಳ ಜತೆ ಮಂಜುನಾಥ್‌ ನೃತ್ಯ ಮಾಡಿರುವುದು ಹಾಗೂ ವಿಡಿಯೊವನ್ನು ಗುಬ್ಬಚ್ಚಿ ಸೀನ ಮತ್ತು ವಿಲ್ಸನ್‌ ಗಾರ್ಡನ್‌ ನಾಗನಿಗೆ ಹಂಚಿಕೊಂಡಿರುವುದು ತನಿಖೆ ವೇಳೆ ಗೊತ್ತಾಗಿದೆ ಎಂದು ಮೂಲಗಳು ತಿಳಿಸಿವೆ.

ಕೊಲೆ ಸೇರಿ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮಂಜುನಾಥ್, ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದ ಎಂದು ಮೂಲಗಳು ಹೇಳಿವೆ.

ADVERTISEMENT

ನ್ಯಾಯಾಲಯದ ಅನುಮತಿ ಪಡೆದು ಗುಬ್ಬಚ್ಚಿ ಸೀನ ಮತ್ತು ನಾಗ ಅವರ ವಿಚಾರಣೆ ನಡೆಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಈ ಹಿಂದೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ದರ್ಶನ್‌ಗೆ ರಾಜಾತಿಥ್ಯ ನೀಡಿದ ಪ್ರಕರಣದಲ್ಲಿ ಈ ಇಬ್ಬರನ್ನು ಬೆಳಗಾವಿಯ ಹಿಂಡಲಗಾ ಜೈಲಿಗೆ ಸ್ಥಳಾಂತರಿಸಲಾಗಿತ್ತು. ನ್ಯಾಯಾಲಯ ಅನುಮತಿ ನೀಡಿದರೆ ಪರಪ್ಪನ ಅಗ್ರಹಾರ ಠಾಣೆಗೆ ಕರೆತರಲಾಗುವುದು. ಇಲ್ಲವಾದರೆ ಅಲ್ಲಿಗೆ ತೆರಳಿ ವಿಚಾರಣೆ ನಡೆಸಲಾಗುವುದು ಎಂದು ಮೂಲಗಳು ಹೇಳಿವೆ.

ಜೈಲಿನಿಂದ ಬಿಡುಗಡೆಯಾಗಿದ್ದ ಕೈದಿಯಿಂದ ವಿಡಿಯೊ ಹಾಗೂ ಫೋಟೊಗಳನ್ನು ಪಡೆದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿರುವ ಅನುಮಾನದ ಅಡಿ ಧನ್ವೀರ್ ಅವರಿಗೆ ನೋಟಿಸ್ ಜಾರಿ ಮಾಡಿ, ವಿಚಾರಣೆ ನಡೆಸಲಾಗಿತ್ತು.

‘ವಕೀಲರೊಬ್ಬರು ವಿಡಿಯೊಗಳನ್ನು ನನಗೆ ಕಳುಹಿಸಿದ್ದರು. ಆ ವಿಡಿಯೊಗಳನ್ನು ದರ್ಶನ್‌ ಅವರ ಪತ್ನಿ ವಿಜಯಲಕ್ಷ್ಮಿ ಅವರಿಗೆ ಕಳುಹಿಸಿದ್ದೆ. ಯಾವುದೇ ವಿಡಿಯೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ ಲೋಡ್ ಮಾಡಿಲ್ಲ’ ಎಂದು ಧನ್ವೀರ್ ವಿಚಾರಣೆ ವೇಳೆ ತಿಳಿಸಿದ್ದರು ಎಂಬುದು ಗೊತ್ತಾಗಿತ್ತು.

ಮೂವರು ಕೈದಿಗಳ ವಿರುದ್ಧ ಎಫ್ಐಆರ್

ಬೆಂಗಳೂರು: ನಗರ ಕೇಂದ್ರ ಕಾರಾಗೃಹದಲ್ಲಿನ ಕೈದಿಗಳಿಗೆ ವಿಶೇಷ ಸೌಲಭ್ಯ ನೀಡಿರುವ ಆರೋಪ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಮೂರು ಪ್ರಕರಣಗಳು ದಾಖಲಾಗಿವೆ. ಮೊದಲ ಪ್ರಕರಣದಲ್ಲಿ ದೂರುದಾರರಾದ ಇಮಾಮ್ ಸಾಬ್ ಮ್ಯಾಗೇರಿ (ಸದ್ಯ ಅಮಾನತುಗೊಂಡಿರುವ ಕಾರಾಗೃಹ ಅಧೀಕ್ಷಕ) ಅವರು ಉಮೇಶ್ ರೆಡ್ಡಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಅತ್ಯಾಚಾರ ಸರಣಿ ಕೊಲೆಯ ಪಾತಕಿ ಉಮೇಶ್ ರೆಡ್ಡಿ ಜೈಲಿನಲ್ಲಿ ಮೊಬೈಲ್ ಫೋನ್ ಬಳಸಿರುವ ದೃಶ್ಯ ವಿಡಿಯೊದಲ್ಲಿ ದಾಖಲಾಗಿತ್ತು. ಎರಡನೇ ಪ್ರಕರಣದಲ್ಲಿ ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿರುವ ಶಾಹಿದ್ ಖಾನ್ ಅಲಿಯಾಸ್ ಚೋರ್ ಶಾಹಿದ್ ನಿಷೇಧಿತ ವಸ್ತುಗಳ ಬಳಕೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಮೂರನೇ ಪ್ರಕರಣದಲ್ಲಿ ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌) ಭಯೋತ್ಪಾದಕ ಸಂಘಟನೆಯ ಉಗ್ರ ಜುಹಾದ್ ಹಮೀದ್ ಶಕೀಲ್ ಮನ್ನಾ ಸಹ ಮೊಬೈಲ್ ಫೋನ್ ಬಳಸಿದ್ದಾರೆ ಎಂದು ಆರೋಪಿಸಲಾಗಿದೆ.

ನಿಷೇಧಿತ ವಸ್ತುಗಳನ್ನು ಯಾರು ಪೂರೈಸಿದ್ದರು? ‌ಮೂವರಿಗೆ ಯಾರು ಮೊಬೈಲ್‌ ಪೂರೈಸಿದ್ದರು? ವಿಡಿಯೊವನ್ನು ಯಾರು ಚಿತ್ರಿಕೀರಿಸಿದರು ಮತ್ತು ಹೇಗೆ ಸೋರಿಕೆಯಾಯಿತು? ಎಂಬುದರ ಬಗ್ಗೆ ತನಿಖೆ ಮಾಡುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.