ADVERTISEMENT

Jakkur Aerodrome: ‘ಎಕ್ಸಿಕ್ಯೂಟಿವ್‌ ಕ್ಲಬ್‌’ಗೆ ಮರುಜೀವ!

‘ರಾಜೀವ್‌ ಗಾಂಧಿ ಏರೋಸ್ಪೋರ್ಟ್‌ ಸೊಸೈಟಿ’ ಸ್ಥಾಪಿಸಲು 2018ರಲ್ಲಿ ಆದೇಶ, 2021ರಲ್ಲಿ ವಾಪಸ್‌

ಆರ್. ಮಂಜುನಾಥ್
Published 19 ಡಿಸೆಂಬರ್ 2025, 0:30 IST
Last Updated 19 ಡಿಸೆಂಬರ್ 2025, 0:30 IST
ಜಕ್ಕೂರು ವೈಮಾನಿಕ ನೆಲೆಯಲ್ಲಿರುವ ರನ್‌ವೇ
ಜಕ್ಕೂರು ವೈಮಾನಿಕ ನೆಲೆಯಲ್ಲಿರುವ ರನ್‌ವೇ   
ಐಎಎಸ್‌–ಐಪಿಎಸ್‌ ಅಧಿಕಾರಿಗಳಿಗಾಗಿ ಕ್ಲಬ್‌ | ಸಾರ್ವಜನಿಕ– ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪನೆ |ಸರ್ಕಾರ ಯೋಜನೆ ಕೈಬಿಟ್ಟ ಮೂರು ವರ್ಷದ ನಂತರ ಮರುಚಾಲನೆ

ಬೆಂಗಳೂರು: ಜಕ್ಕೂರು ವಾಯುನೆಲೆ ಪ್ರದೇಶದ 25 ಎಕರೆ ಭೂಮಿಯನ್ನು ‘ಎಕ್ಸಿಕ್ಯೂಟಿವ್‌ ಕ್ಲಬ್‌’ಗೆ ನೀಡುವ ಸಂಬಂಧ 2018ರಲ್ಲಿ ಹೊರಡಿಸಿದ್ದ ಆದೇಶವನ್ನು ರಾಜ್ಯ ಸರ್ಕಾರ 2021ರಲ್ಲಿ ವಾಪಸ್‌ ಪಡೆದಿತ್ತು. ಆದರೆ, ಈಗ ಆ ಯೋಜನೆಯು ಮತ್ತೊಂದು ರೂಪದಲ್ಲಿ ಮರುಜೀವಪಡೆದುಕೊಂಡಿದೆ.

‘ಎಕ್ಸಿಕ್ಯೂಟಿವ್‌ ಕ್ಲಬ್‌’ ಯೋಜನೆ ರದ್ದಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ 2021ರಲ್ಲಿ ತಿಳಿಸಿತ್ತು. ಆದರೆ, ಈಗ ಜಕ್ಕೂರು ವೈಮಾನಿಕ ತರಬೇತಿ ಶಾಲೆಯನ್ನೇ ಸ್ಥಳಾಂತರಿಸುವ ವಿಷಯ ಚಾಲ್ತಿಗೆ ಬಂದಿದ್ದು ಈ ಸಂಬಂಧ ನವೆಂಬರ್‌ನಿಂದ ಸಭೆಗಳನ್ನು ನಡೆಸಲಾಗುತ್ತಿದೆ.

ಜಕ್ಕೂರು ವಾಯುನೆಲೆಯ 25 ಎಕರೆ ಜಾಗದಲ್ಲಿ ‘ರಾಜೀವ್‌ ಗಾಂಧಿ ಏರೋಸ್ಪೋರ್ಟ್ಸ್‌ ಸೊಸೈಟಿ‘ಯನ್ನು ಸಾಹಸ ಕ್ರೀಡೆಗಳ ಹೆಸರಿನಲ್ಲಿ ಸಾರ್ವಜನಿಕ–ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ಸ್ಥಾಪಿಸಲು 2018ರ ಮಾರ್ಚ್‌ 3ರಂದು ಸಚಿವ ಸಂಪುಟದಲ್ಲಿ ಅನುಮೋದನೆ ನೀಡಲಾಗಿತ್ತು. ಅದರಂತೆ, ಮಾರ್ಚ್‌ 13ರಂದು, ಸೊಸೈಟಿಯ ಆಡಳಿತ ಮಂಡಳಿಯಲ್ಲಿ ಒಂಬತ್ತು ಸದಸ್ಯರು, ಕಾರ್ಯನಿರ್ವಾಹಕ ಸಮಿತಿಯಲ್ಲಿ ಐದು ಸದಸ್ಯರನ್ನು ಒಳಗೊಂಡ ಸಮಿತಿ ರಚಿಸಿ ಆದೇಶ ಹೊರಡಿಸಲಾಗಿತ್ತು.

ADVERTISEMENT

ಜಕ್ಕೂರು ವೈಮಾನಿಕ ತರಬೇತಿ ಶಾಲೆಯನ್ನು ‘ರಾಜೀವ್‌ ಗಾಂಧಿ ಏರೋಸ್ಪೋರ್ಟ್ಸ್‌ ಸೊಸೈಟಿ’ಯನ್ನಾಗಿ ಸ್ಥಾಪಿಸುವ ಉದ್ದೇಶದ 2018ರ ಆದೇಶವನ್ನು, 2021ರ ಸೆಪ್ಟೆಂಬರ್ 4ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಕೈಬಿಡಲಾಗಿದೆ.  ಆದರೆ, ಪಿಪಿಪಿ ಮಾದರಿಯಲ್ಲಿ ವೈಮಾನಿಕ ತರಬೇತಿ ಶಾಲೆಯನ್ನು ಅಭಿವೃದ್ಧಿಗೊಳಿಸಲು ಅನುಮೋದನೆ ನೀಡಲಾಗಿದೆ ಎಂದು 2022ರ ಮಾರ್ಚ್‌ 8ರಂದು ಆಗಿನ ಯುವ ಸಬಲೀಕರಣ, ಕ್ರೀಡಾ ಸಚಿವ ನಾರಾಯಣಗೌಡ ಅವರು ವಿಧಾನಸಭೆಯಲ್ಲಿ ಕೃಷ್ಣಬೈರೇಗೌಡ ಪ್ರಶ್ನೆಗೆ ನೀಡಿದ ಉತ್ತರದಲ್ಲಿ ತಿಳಿಸಿದ್ದರು.

‘ಮೈಸೂರು ಮಹಾರಾಜರ ಕಾಲದಲ್ಲಿ ಸ್ಥಾಪನೆಯಾಗಿರುವ ಜಕ್ಕೂರು ವೈಮಾನಿಕ ಶಾಲೆ ಬಗ್ಗೆ ಹಿಂದಿನ ಸರ್ಕಾರದಲ್ಲಿ ತಪ್ಪಾಗಿದೆ. ಈಗಿರುವ ಟರ್ಫ್‌ ಕ್ಲಬ್‌, ಗಾಲ್ಫ್‌ ಕ್ಲಬ್‌ ಸಾಲದೆಂದು, 100 ಶಾಸಕರು, 100 ಐಎಎಸ್‌–ಐಪಿಎಸ್‌ ಅಧಿಕಾರಿಗಳು, 100 ಸರ್ಕಾರಿ ಅಧಿಕಾರಿಗಳು, 50 ನ್ಯಾಯಮೂರ್ತಿಗಳನ್ನು ಸೇರಿಸಿ ಕ್ಲಬ್‌ ಮಾಡಲು ಸರ್ಕಾರ ತೀರ್ಮಾನಿಸಿತ್ತು. 200 ಎಕರೆ ಭೂಮಿ ಪಿಪಿಪಿ ಅವರ ಕೈಗೆ ಹೋದರೆ ಅಲ್ಲಿ ಅವರು ಏನೇನು ಚಟುವಟಿಕೆ ಮಾಡುತ್ತಾರೆನ್ನುವುದು ಯಾರಿಗೆ ಗೊತ್ತು? ಒಂದು ಬಾರಿ ಖಾಸಗಿಯವರ ಕೈಗೆ ಜಮೀನು ಹೋದರೆ, ನಾಳೆಯ ದಿನ ನಾವೆಲ್ಲರೂ ಹೊರಗಗಡೆ ಉಳಿಯಬೇಕಾಗುತ್ತದೆ. ಇದು ದೊಡ್ಡ ಹಗರಣವೇ ಆಗುತ್ತದೆ. ದಯಮಾಡಿ ಸರ್ಕಾರವೇ ವೈಮಾನಿಕ ಶಾಲೆಯನ್ನು ನಡೆಸಬೇಕು. ಸ್ಥಳೀಯವಾಗಿ ಸಹಕಾರ, ಸಹಾಯವನ್ನು ನಾವು ಮಾಡುತ್ತೇವೆ’ ಎಂದು ಬ್ಯಾಟರಾಯನಪುರ ವಿಧಾನಸಭೆ ಕ್ಷೇತ್ರದ ಶಾಸಕರಾದ ಕೃಷ್ಣಬೈರೇಗೌಡ ಹೇಳಿದ್ದರು. ಇದಕ್ಕೆ, ನಾರಾಯಣಗೌಡ ಅವರು ಸಮ್ಮತಿಸಿ, ಪಿಪಿಪಿ ಯೋಜನೆ ಕೈಬಿಡಲಾಗಿದೆ ಎಂದು ಹೇಳಿದ್ದರು.

ವಿಧಾನಸಭೆಯಲ್ಲಿ ಇಷ್ಟೆಲ್ಲ ಚರ್ಚೆಯಾಗಿ, ಜಕ್ಕೂರು ವೈಮಾನಿಕ ತರಬೇತಿ ಶಾಲೆ ಹಾಗೂ ವಾಯುನೆಲೆಯನ್ನು ಹಾಗೆಯೇ ಉಳಿಸಿಕೊಳ್ಳಲು ನಿರ್ಧಾರವಾದ ಮೂರು ವರ್ಷದ ನಂತರ, ಅದೇ ಇಲಾಖೆಯ ಅಧಿಕಾರಿಗಳು ವೈಮಾನಿಕ ತರಬೇತಿ ಶಾಲೆಯನ್ನು ಮೈಸೂರಿಗೆ ಸ್ಥಳಾಂತರಿಸಲು ಚರ್ಚೆ ಆರಂಭಿಸಿದ್ದಾರೆ. ವೈಮಾನಿಕ ಪ್ರದೇಶವನ್ನೂ ಇತರೆ ಚಟುವಟಿಕೆಗಳಿಗೆ ಬಳಸಿಕೊಳ್ಳಲು ಮುಂದಾಗಿದ್ದಾರೆ.

2022ರಲ್ಲಿ ಸರ್ಕಾರವೇ ತರಬೇತಿ ಶಾಲೆಯನ್ನು ನಡೆಸಬೇಕು ಎಂದು ಒತ್ತಾಯಿಸಿದ್ದ, ಪ್ರಸ್ತುತ ಕಂದಾಯ ಸಚಿವರಾಗಿರುವ ಕೃಷ್ಣಬೈರೇಗೌಡ ಅವರ ಪ್ರತಿಕ್ರಿಯೆ ಪಡೆಯಲು ಸಂಪರ್ಕಿಸಿದಾಗ, ಅವರು ಸ್ಪಂದಿಸಲಿಲ್ಲ.

‘ಸರ್ಕಾರ ಮಾಡಿದ್ದು ತಪ್ಪು ಎಂದು ಹೇಳಿದ್ದ ಕೃಷ್ಣ ಬೈರೇಗೌಡ’

‘ಹಿಂದೆ ಮಾಡಿದ್ದು ತಪ್ಪು ನಮ್ಮ ಸರ್ಕಾರವೇ ಆದರೂ ಅದು ತಪ್ಪು. ಅದನ್ನು ವಾಪಸ್ ತೆಗೆದುಕೊಂಡಿದ್ದಕ್ಕೆ ನಿಮಗೆ ಧನ್ಯವಾದ...’ ಹೀಗೆಂದು 2022ರ ಮಾರ್ಚ್‌ 8ರಂದು ವಿಧಾನಸಭೆಯಲ್ಲಿ ಕೃಷ್ಣ ಬೈರೇಗೌಡ ಹೇಳಿದ್ದರು. ಗಮನ ಸೆಳೆಯುವ ಸೂಚನೆಯಡಿ ‘ವೈಮಾನಿಕ ಮತ್ತು ಇತರೆ ಸಾಹಸ ಕ್ರೀಡೆಗಳ ಹೆಸರಿನಲ್ಲಿ ಹೊಸ ಸೊಸೈಟಿಯನ್ನು ಹುಟ್ಟುಹಾಕಿ ₹500 ಕೋಟಿಗೂ ಹೆಚ್ಚು ಬೆಳಬಾಳುವ 25 ಎಕರೆ ಸರ್ಕಾರಿ ಜಾಗವನ್ನು ‘ಎಕ್ಸಿಕ್ಯೂಟಿವ್ ಕ್ಲಬ್‌’  ಮಾಡಲು ನೀಡಲಾಗುತ್ತಿದೆ. ಜನಸಾಮಾನ್ಯರಿಗೆ ಪ್ರವೇಶ ಇಲ್ಲದಂತೆ ಮಾಡಿ ಕೇವಲ ಅಧಿಕಾರಿಗಳು ರಾಜಕಾರಣಿಗಳು ಶ್ರೀಮಂತರು ನ್ಯಾಯಾಧೀಶರ ಮೋಜಿಗಾಗಿ ಸರ್ಕಾರಿ ಜಾಗವನ್ನು ನೀಡಿ ಸರ್ಕಾರದ  ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ’ ಎಂದು  ಯುವ ಸಬಲೀಕರಣ ಮತ್ತು ಕ್ರಿಡಾ ಇಲಾಖೆ ಸಚಿವ ನಾರಾಯಣಗೌಡ ಅವರನ್ನು ಪ್ರಶ್ನಿಸಿದ್ದರು.

‘ನಿಮ್ಮ ಸರ್ಕಾರವಿದ್ದಾಗಲೇ ಅದನ್ನು ಖಾಸಗಿಯವರಿಗೆ ನೀಡಿದ್ದು ಅದನ್ನು ನಾವು ವಾಪಸ್ ಪಡೆದುಕೊಂಡಿದ್ದೇವೆ’ ಎಂದು ನಾರಾಯಣಗೌಡ ಹೇಳಿದಾಗ ಅದಕ್ಕೆ ಧನ್ಯವಾದ ಸಲ್ಲಿಸಿದ್ದ ಕೃಷ್ಣ ಬೈರೇಗೌಡ ‘25 ಎಕರೆ ಬದಲು 200 ಎಕರೆ ಜಾಗ ಹೋಗುವ ಪರಿಸ್ಥಿತಿಯಾಗಿದೆ. ಬಹುಶಃ ಯಾರು ಕ್ಲಬ್‌ ಮಾಡಬೇಕೆಂದು ಹೊರಟಿದ್ದರೋ ಅವರೇ ಪಿಪಿಪಿಗೆ ಒಂದು ಕಂಪನಿಯನ್ನು ರೆಡಿ ಮಾಡಿ ಈ ರೀತಿ ಕಬ್ಜಾ ತೆಗೆದುಕೊಳ್ಳಲಿಕ್ಕೆ ಹೊರಟಿರಲೂ ಬಹುದು’ ಎಂದು ಆತಂಕ ವ್ಯಕ್ತಪಡಿಸಿದ್ದರು.

‘ಆಸ್ತಿ ಉಳಿಸಿಕೊಳ್ಳಲಾಗುತ್ತದೆ ಎಂದಿದ್ದ ನಾರಾಯಣಗೌಡ’

‘ಜಕ್ಕೂರಿನ ವೈಮಾನಿಕ ತರಬೇತಿ ಶಾಲೆ ದೇಶಕ್ಕೇ ಮೊದಲನೆಯದು. 100 ಮಕ್ಕಳು ಇಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಆರು ವಿಮಾನಗಳನ್ನು ದುರಸ್ತಿ ಮಾಡಿಸಿ ಮಕ್ಕಳಿಗೆ ತರಬೇತಿ ನೀಡಲು ಮುಂದಾಗಿದ್ದೇವೆ. 10 ಎಕರೆ ಭೂಸ್ವಾಧೀನ ಮಾಡಿಕೊಂಡು ರನ್‌ವೇಯನ್ನು 350 ಮೀಟರ್‌ ವಿಸ್ತರಿಸಿ ಆರು ಆಸನ ಮತ್ತು 11 ಆಸನಗಳ ವಿಮಾನಗಳ ಕಾರ್ಯಾಚರಣೆ ಮಾಡಿ ‘ಏರ್‌ ಆಂಬುಲೆನ್ಸ್‌’ ವ್ಯವಸ್ಥೆ ಕಲ್ಪಿಸಿ ಪ್ರವಾಸೋದ್ಯಮಕ್ಕೆ ಶಕ್ತಿ ತುಂಬುವ ಕೆಲಸವನ್ನು ಪಿಪಿಪಿ ಮಾದರಿಯಲ್ಲಿ ಮಾಡಲಾಗುತ್ತದೆ. ಇದರಿಂದ ನಷ್ಟವಾಗುವುದಾದರೆ ಸರ್ಕಾರ ಆಸ್ತಿಯನ್ನು ಉಳಿಸಿಕೊಂಡು ಅದನ್ನು ಅಭಿವೃದ್ಧಿಪಡಿಸಲಾಗುತ್ತದೆ’ ಎಂದು ಕ್ರೀಡಾ ಸಚಿವರಾಗಿದ್ದ ನಾರಾಯಣಗೌಡ ಅವರು 2022ರ ಮಾರ್ಚ್ 8ರಂದು ವಿಧಾನ ಸಭೆಯಲ್ಲಿ ತಿಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.