
ಬೆಂಗಳೂರು: ‘ಸಂವಿಧಾನದಿಂದಲೇ ಸಂವಿಧಾನ ಮುಗಿಸುವ ಷಡ್ಯಂತ್ರ, ಮೌನದಿಂದಲೇ ಮೀಸಲಾತಿ ಸೌಲಭ್ಯ ಕಿತ್ತುಕೊಳ್ಳುವುದು ಹಾಗೂ ಶೋಷಿತರ ದನಿ ಅಡಗಿಸುವ ಕೆಲಸ ನಡೆಯುತ್ತಿದೆ’ ಎಂದು ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.
ಭಾರತೀಯ ದಲಿತ ಪ್ಯಾಂಥರ್ ಮಂಗಳವಾರ ಆಯೋಜಿಸಿದ್ದ ಭೀಮಾ ಕೋರೆಗಾಂವ್ ವಿಜಯೋತ್ಸವ ಮತ್ತು ದಲಿತರ ಮುಂದಿರುವ ಸವಾಲುಗಳ ಕುರಿತ ವಿಚಾರ ಸಂಕಿರಣದ ಸಾನಿಧ್ಯ ವಹಿಸಿ ಮಾತನಾಡಿದರು.
‘ವರದಿ ಪ್ರಕಾರ, 2024–25ರ ಶೈಕ್ಷಣಿಕ ವರ್ಷದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೊರಗುಳಿದಿರುವ ವಿದ್ಯಾರ್ಥಿಗಳು ಶೇಕಡ 42ರಷ್ಟಿದ್ದಾರೆ. ರಾಜ್ಯದ 7,029 ಹಳ್ಳಿಗಳಲ್ಲಿ ಮೃತದೇಹ ಹೂಳಲು ಜಾಗವಿಲ್ಲ. ಪರಿಸ್ಥಿತಿ ಹೀಗಿರುವಾಗ ಯಾವ ಯುದ್ಧವನ್ನು, ಯಾರ ಜತೆ ಮಾಡಬೇಕು’ ಎಂದು ಪ್ರಶ್ನಿಸಿದರು.
‘ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಬೇಕು. ಭೂಮಿ, ನೀರು, ವಿದ್ಯುತ್, ದುಡಿಮೆ ನಮ್ಮದು. ಇದೆಲ್ಲವನ್ನು ಬಳಸಿಕೊಂಡು ಉದ್ಯೋಗ ಕೊಡದಿದ್ದರೆ ಹೇಗೆ? ಬೇಡುವ ಸಮುದಾಯ ಆಳುವ ಸಮುದಾಯ ಆಗುವುದಿಲ್ಲ. ಅಂಬೇಡ್ಕರ್ ಹೇಳಿದಂತೆ ನೀಡುವ ಸಮುದಾಯ ಆಗಬೇಕು’ ಎಂದು ಕರೆ ನೀಡಿದರು.
ಸಂವಿಧಾನದ ಎಲ್ಲ ಬೇರುಗಳನ್ನು ಕಿತ್ತು ಹಾಕುವ ಕೆಲಸ ನಡೆಯುತ್ತಿದೆ. ಅಂಬೇಡ್ಕರ್ ಅವರ ವಿರುದ್ಧ 32 ಜನರು ಪುಸ್ತಕ ಬರೆದಿದ್ದಾರೆ. ಅವರ ವಿರುದ್ಧ ನಾಟಕ ಮಾಡಿಸಲಾಗುತ್ತಿದೆ. ಮೊದಲು ಗುಲಾಮಗಿರಿಯಿಂದ ಹೊರಬೇಕು ಎಂದರು.
ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಮಾತನಾಡಿ, ‘ದೇಶದಲ್ಲಿ ಪ್ರತಿ 16 ನಿಮಿಷಕ್ಕೆ ದಲಿತರ ಮೇಲೆ ದೌರ್ಜನ್ಯ ನಡೆಯುತ್ತಿದೆ. ನಿತ್ಯ ನಾಲ್ವರು ಮಹಿಳೆಯರ ಮೇಲೆ ಮೇಲ್ಜಾತಿಯವರು ಅತ್ಯಾಚಾರ ಮಾಡುತ್ತಿದ್ದಾರೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯುರೊ ಪ್ರಕಾರ, ದೇಶದಲ್ಲಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಕಡಿಮೆ ಆಗಿಲ್ಲ. ಕೋರೆಗಾಂವ್ ವಿಜಯೋತ್ಸವ ಆಚರಣೆ ಜತೆಗೆ ಆತ್ಮಾವಲೋಕನ ಮಾಡಬೇಕು ಮತ್ತು ಸವಾಲುಗಳನ್ನು ಗುರುತಿಸಬೇಕು’ ಎಂದು ಹೇಳಿದರು.
‘ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಹಾಗೂ ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಆಗ್ರಹಿಸಿ ಹೋರಾಟ ಕೈಗೊಳ್ಳಬೇಕು. ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಸರ್ಕಾರಿ ಉದ್ಯೋಗದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯ ದೊರೆತಿದೆಯೇ ಎಂಬುದನ್ನು ನೋಡಬೇಕು’ ಎಂದರು.
ಇದೇ ವೇಳೆ ಭೀಮಾ ಕೋರೆಗಾಂವ್ ಇತಿಹಾಸವನ್ನು ಪಠ್ಯಪುಸ್ತಕದಲ್ಲಿ ಅಳವಡಿಸುವಂತೆ, ಮರ್ಯಾದೆಗೇಡು ಹತ್ಯೆಯಂತಹ ಹೀನಕೃತ್ಯಗಳ ವಿರುದ್ಧ ಕಠಿಣ ಕಾನೂನು ರೂಪಿಸುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡಲಾಯಿತು.
ಭಾರತೀಯ ದಲಿತ ಪ್ಯಾಂಥರ್ ರಾಜ್ಯ ಘಟಕದ ಅಧ್ಯಕ್ಷ ಮಲ್ಲಪ್ಪ ಹೊಸ್ಮನಿ ಇಂಗನಕಲ್, ಅಣದೂರನ ವರಜ್ಯೋತಿ ಭಂತೇಜಿ, ದಲಿತ ಮುಖಂಡರಾದ ಬಸವರಾಜ್ ಕೌತಾಳ್, ದತ್ತಾತ್ರಯ ಇಕ್ಕಳಕಿ, ಕಲಬುರಗಿ ಮಹಾನಗರ ಪಾಲಿಕೆ ಮೇಯರ್ ವರ್ಷಾ ರಾಜೀವ್ ಜಾನೆ, ರಾಜ್ಯ ಪೊಲೀಸ್ ದೂರು ಪ್ರಾಧಿಕಾರದ ಸದಸ್ಯ ಮೋಹನ್ ಕುಮಾರ್ ದಾನಪ್ಪ, ಅಂಗವಿಕಲರ ಹೋರಾಟ ಸಮಿತಿ ಅಧ್ಯಕ್ಷ ಉಮೇಶ್ ಕುಲಕರ್ಣಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.