ADVERTISEMENT

ಗಾಂಧೀಜಿ ಹೆಸರು ಅಳಿಸುವುದು ಅಸಾಧ್ಯ: ನ್ಯಾ.ಎಚ್.ಎನ್.ನಾಗಮೋಹನದಾಸ್

​ಪ್ರಜಾವಾಣಿ ವಾರ್ತೆ
Published 30 ಜನವರಿ 2026, 15:16 IST
Last Updated 30 ಜನವರಿ 2026, 15:16 IST
ಕಾರ್ಯಕ್ರಮದಲ್ಲಿ ಎಚ್.ಎನ್.ನಾಗಮೋಹನದಾಸ್, ಎನ್.ಆರ್. ವಿಶುಕುಮಾರ್‌, ಪಿ.ಜಿ.ಆರ್. ಸಿಂಧ್ಯ ಹಾಗೂ ಬಿ.ಜಿ. ಗುಜ್ಜಾರಪ್ಪ ಸಮಾಲೋಚನೆ ನಡೆಸಿದರು    ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ ಎಚ್.ಎನ್.ನಾಗಮೋಹನದಾಸ್, ಎನ್.ಆರ್. ವಿಶುಕುಮಾರ್‌, ಪಿ.ಜಿ.ಆರ್. ಸಿಂಧ್ಯ ಹಾಗೂ ಬಿ.ಜಿ. ಗುಜ್ಜಾರಪ್ಪ ಸಮಾಲೋಚನೆ ನಡೆಸಿದರು    ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಗಾಂಧೀಜಿ ಅವರು ದೇಶದ ಜನರ ಮೇಲೆ ಅಗಾಧ ಪ್ರಭಾವ ಬೀರಿದ್ದಾರೆ. ಯೋಜನೆಗಳಿಂದ ಅವರ ಹೆಸರನ್ನು ಕೈಬಿಟ್ಟರೂ ಜನರ ಮನಸ್ಸಿನಿಂದ ಅಳಿಸುವುದು ಅಸಾಧ್ಯ’ ಎಂದು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಅಭಿಪ್ರಾಯಪಟ್ಟರು. 

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಕಸ್ತೂರಿ ಬಾ ಗಾಂಧಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಜಂಟಿಯಾಗಿ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸರ್ವೋದಯ ದಿನಾಚರಣೆ ಕಾರ್ಯಕ್ರಮದಲ್ಲಿ ಗಾಂಧೀಜಿ ಅವರಿಗೆ ನುಡಿ ನಮನ ಸಲ್ಲಿಸಿದರು.

‘ಅನಕ್ಷರಸ್ಥ ರೈತರು ಸಹ ಬ್ರಿಟಿಷ್ ಸಾಮ್ರಾಜ್ಯಶಾಹಿ ವಿರುದ್ಧ ಹೋರಾಡುವ ಮನೋಭಾವ ಬೆಳೆಸಿದ್ದ ಪ್ರಭಾವಶಾಲಿ ನಾಯಕ ಗಾಂಧೀಜಿ. ಅವರ ನಿಧನದ ನಂತರ ಮಕ್ಕಳು, ಮೊಮ್ಮಕ್ಕಳಿಗೆ ಅವರ ಹೆಸರಿಟ್ಟು ಬದುಕಿದ ದೇಶ ನಮ್ಮದು. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ಮನರೇಗಾ) ಯೋಜನೆಯ ಹೆಸರನ್ನು, ವಿಬಿ–ಜಿ ರಾಮ್‌ ಜಿ ಯೋಜನೆಯೆಂದು ಬದಲಾಯಿಸಿದರೆ ಗಾಂಧೀಜಿ ಹೆಸರನ್ನು ಅಳಿಸಲು ಸಾಧ್ಯವಿಲ್ಲ. ನನ್ನನ್ನು ಸೇರಿ ಲಕ್ಷಾಂತರ ಜನರ ಹೆಸರಿನಲ್ಲಿಯೇ ಅವರು ಇದ್ದಾರೆ’ ಎಂದು ಹೇಳಿದರು. 

ADVERTISEMENT

ಭಾರತ್ ಸ್ಕೌಟ್ಸ್‌ ಮತ್ತು ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯ, ‘ಗಾಂಧೀಜಿ ಅವರ ಬಗ್ಗೆ ಸಮಪರ್ಕವಾಗಿ ತಿಳಿದುಕೊಳ್ಳದೆ, ಸಾಮಾಜಿಕ ಮಾಧ್ಯಮದಲ್ಲಿ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಗಾಂಧಿ ಎಂದು ಹೆಸರನ್ನು ಇಟ್ಟುಕೊಂಡ ತಕ್ಷಣ ಅವರ ಹಾದಿಯಲ್ಲಿ ಸಾಗಲು ಸಾಧ್ಯವಿಲ್ಲ. ಬದಲಾಗಿ, ಅವರ ವಿಚಾರಧಾರೆಗಳನ್ನು ಅಳವಡಿಸಿಕೊಳ್ಳಬೇಕು. ಮಕ್ಕಳಿಗೆ ಗಾಂಧೀಜಿ ಅವರ ಬಗ್ಗೆ ತಿಳಿಸಬೇಕು’ ಎಂದು ಅಭಿಪ್ರಾಯಪಟ್ಟರು. 

ಕಲಾವಿದ ಬಿ.ಜಿ. ಗುಜ್ಜಾರಪ್ಪ ಅವರು ಗಾಂಧೀಜಿ ರೇಖಾಚಿತ್ರಗಳನ್ನು ರಚಿಸಿದರು. ಕಸ್ತೂರಿ ಬಾ ಗಾಂಧಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ನ ಟ್ರಸ್ಟಿ ಎನ್.ಆರ್. ವಿಶುಕುಮಾರ್, ‘ಸುಧಾ’ ವಾರಪತ್ರಿಕೆಯ ಮುಖ್ಯ ಉಪಸಂಪಾದಕಿ ರಶ್ಮಿ ಎಸ್. ಹಾಗೂ ಆಕಾಶವಾಣಿಯ ಉದ್ಘೋಷಕಿ ಬಿ.ಕೆ. ಸುಮತಿ ಉಪಸ್ಥಿತರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.