ADVERTISEMENT

ಕಂಬಳಕ್ಕೆ ನಿಯಮ; ಸರ್ಕಾರದ ವಿವೇಚನೆ: ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2025, 19:22 IST
Last Updated 14 ಅಕ್ಟೋಬರ್ 2025, 19:22 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ರಾಜ್ಯದ ಬೇರೆ ಕಡೆಗಳಲ್ಲಿ ಕಂಬಳ ಆಯೋಜನೆಗೆ ಸಂಬಂಧಿಸಿದಂತೆ ಕಾನೂನು ರೀತ್ಯಾ ರಾಜ್ಯ ಸರ್ಕಾರ ತೀರ್ಮಾನ ಕೈಗೊಳ್ಳಬಹುದು’ ಎಂದು ಹೈಕೋರ್ಟ್‌ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿದೆ.

‘ಪಿಲಿಕುಳ ಜೈವಿಕ ಪಾರ್ಕ್‌ ಸಮೀಪ ಕಂಬಳ ಓಟಕ್ಕೆ ಅವಕಾಶ ನೀಡಬಾರದು ಮತ್ತು ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಹೊರಗೂ ಕಂಬಳ ನಿಷೇಧಿಸಬೇಕು’ ಎಂದು ಕೋರಿ ‘ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್‌ಮೆಂಟ್ ಆಫ್ ಅನಿಮಲ್’ (ಪೆಟಾ) ಸ್ವಯಂ ಸೇವಾ ಸಂಸ್ಥೆ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

‘ಪಿಲಿಕುಳ ನಿಸರ್ಗಧಾಮವು ಜೈವಿಕ ಉದ್ಯಾನವನ ಎಂಬುದಾಗಿ ಮಾಸ್ಟರ್ ಪ್ಲಾನ್ ಯೋಜನೆ ಇದ್ದರೆ ಅಲ್ಲಿ ಕಂಬಳ ಆಯೋಜನೆಗೆ ಅವಕಾಶ ಇರುವುದಿಲ್ಲ. ಜೈವಿಕ ಉದ್ಯಾನವನ್ನು ಹಬ್ಬದ ಮೈದಾನವನ್ನಾಗಿ ಮಾಡಲಾಗದು. ಆದ್ದರಿಂದ, ಪಿಲಿಕುಳಕದ ವಾಸ್ತವ ಸ್ಥಿತಿಗತಿಯ ಬಗ್ಗೆ ಸರ್ಕಾರ ವಿವರಣೆ ನೀಡಬೇಕು. ಬಳಿಕವಷ್ಟೇ ಪಿಲಿಕುಳದಲ್ಲಿ ಕಂಬಳ ಆಯೋಜನೆಯ ವಿಷಯವನ್ನು ಪರಿಶೀಲಿಸಲಾಗುವುದು’ ಎಂದು ನ್ಯಾಯಪೀಠ ಹೇಳಿದೆ.

ADVERTISEMENT

ವಿಚಾರಣೆಯನ್ನು ನವೆಂಬರ್ 11ಕ್ಕೆ ಮುಂದೂಡಲಾಗಿದೆ. ರಾಜ್ಯ ಸರ್ಕಾರದ ಪರ ಅಡ್ವೊಕೇಟ್‌ ಜನರಲ್‌ ಕೆ.ಶಶಿಕಿರಣ ಶೆಟ್ಟಿ ಮತ್ತು ಅರ್ಜಿದಾರ ಪೆಟಾ ಪರ ಪದಾಂಕಿತ ಹಿರಿಯ ವಕೀಲ ಧ್ಯಾನ್ ಚಿನ್ನಪ್ಪ ವಾದ ಮಂಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.