ಬೆಂಗಳೂರು: ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಸ್ಯಾಂಡಲ್‌ವುಡ್ ನಟಿ ರನ್ಯಾ ರಾವ್ ಅವರಿಗೆ ಸಂಚುಕೋರರ ನಂಟು ಇರುವುದು ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ಅಧಿಕಾರಿಗಳ ತನಿಖೆಯಿಂದ ಬಯಲಾಗಿದೆ.
ನಗರದಲ್ಲೇ ಬೀಡುಬಿಟ್ಟಿರುವ ಡಿಆರ್‌ಐನ ದೆಹಲಿ ಕಚೇರಿಯ ಅಧಿಕಾರಿಗಳು, ಚಿನ್ನ ಕಳ್ಳ ಸಾಗಣೆ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದಾರೆ.
‘ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್ಯಾ ಅವರನ್ನು ಸೋಮವಾರ ರಾತ್ರಿ ವಶಕ್ಕೆ ಪಡೆದುಕೊಂಡು ಕೆಲಕಾಲ ವಿಚಾರಣೆ ನಡೆಸಲಾಗಿತ್ತು. ‘ಚಿನ್ನ ಸಾಗಣೆ ಮಾಡುವಂತೆ ನನ್ನನ್ನು ಬ್ಲ್ಯಾಕ್‌ಮೇಲ್ ಮಾಡಲಾಗಿತ್ತು. ಅನಿವಾರ್ಯವಾಗಿ ಸಾಗಣೆ ಮಾಡುತ್ತಿದ್ದೆ’ ಎಂಬುದಾಗಿ ನಟಿ ಹೇಳಿಕೆ ನೀಡಿದ್ದಾರೆ. ಅವರನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದವರು ಯಾರು? ಚಿನ್ನವನ್ನು ತಂದು ಯಾರಿಗೆ ನೀಡುತ್ತಿದ್ದರು ಎಂಬುದನ್ನು ಪತ್ತೆಹಚ್ಚಲು ತನಿಖೆ ತೀವ್ರಗೊಳಿಸಲಾಗಿದೆ. ವಿಮಾನ ನಿಲ್ದಾಣದಿಂದ ಹೊರಗೆ ಬರಲು ನೆರವು ನೀಡಿದ್ದ ಪೊಲೀಸ್ ಕಾನ್‌ಸ್ಟೆಬಲ್‌ನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ’ ಎಂದು ಮೂಲಗಳು ತಿಳಿಸಿವೆ.
‘ಕರ್ನಾಟಕ ರಾಜ್ಯ ಪೊಲೀಸ್ ವಸತಿ ನಿಗಮದ ಡಿಜಿಪಿ ಕೆ.ರಾಮಚಂದ್ರ ರಾವ್ ಅವರ ಮಲಮಗಳು ರನ್ಯಾ ರಾವ್. ಹೀಗಾಗಿ, ಅವರ ಮೂಲಕ ಚಿನ್ನವನ್ನು ಬೆಂಗಳೂರಿಗೆ ಸಾಗಣೆ ಮಾಡಲು ವರ್ಷದ ಹಿಂದೆಯೇ ಸಂಚುಕೋರರು ಯೋಜನೆ ರೂಪಿಸಿದ್ದರು. ಅದರಂತೆ ಅಜ್ಞಾತ ಸ್ಥಳದಲ್ಲಿ ಭೇಟಿ ಮಾಡಿ ಮನವೊಲಿಸಿದ್ದರು. ಕಮಿಷನ್ ನೀಡುವುದಾಗಿಯೂ ಭರವಸೆ ನೀಡಿದ್ದರು. ನಗರದ ಸಂಚುಕೋರರು, ದುಬೈನ ಮಧ್ಯವರ್ತಿಗಳನ್ನು ಬಳಸಿಕೊಂಡು ಚಿನ್ನವನ್ನು ನಟಿಯ ಮೂಲಕ ತರಿಸುತ್ತಿದ್ದರು. ನಟಿ ತಂದ ಚಿನ್ನದ ಬಿಸ್ಕತ್‌ಗಳನ್ನು ಕರಗಿಸಿ ಆಭರಣ ಮಾಡಿ ಮಾರಾಟ ಮಾಡುತ್ತಿದ್ದರು’ ಎಂದು ಮೂಲಗಳು ಹೇಳಿವೆ.
‘ಒಂದು ಕೆ.ಜಿ ಚಿನ್ನದ ಬಿಸ್ಕತ್‌ಗಳನ್ನು ತಂದರೆ, ₹5ರಿಂದ ₹ 6 ಲಕ್ಷ ಕಮಿಷನ್ ನೀಡುತ್ತಿದ್ದರು. ದುಬೈನಿಂದ ತಂದ ಚಿನ್ನವನ್ನು ಲ್ಯಾವೆಲ್ಲೆ ರಸ್ತೆಯ ನಂದವಾಣಿ ಮ್ಯಾನ್ಶನ್‌ನ ಫ್ಲ್ಯಾಟ್‌ನಲ್ಲಿ ಇಡುತ್ತಿದ್ದರು. ಅಲ್ಲಿಂದ ಚಿನ್ನದ ಬಿಸ್ಕತ್‌ಗಳು ಕಿಂಗ್‌ಪಿನ್‌ಗಳಿಗೆ ತಲುಪಿಸಲಾಗುತ್ತಿತ್ತು. ಆ ಕಿಂಗ್‌ಪಿನ್‌ಗಳನ್ನು ಪತ್ತೆಹಚ್ಚಲು ರನ್ಯಾ ಅವರ ಮೊಬೈಲ್, ಲ್ಯಾಪ್‌ಟಾಪ್ ವಶಕ್ಕೆ ಪಡೆಯಲಾಗಿದೆ’ ಎಂದು ಮೂಲಗಳು ಹೇಳಿವೆ.
ರನ್ಯಾ ಪತಿ ಸೇರಿದಂತೆ ಅವರ ಕುಟುಂಬಸ್ಥರಿಗೂ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುವುದು ಎಂದು ಮೂಲಗಳು ಹೇಳಿವೆ.
ಬೆಳಿಗ್ಗೆ ದುಬೈಗೆ ಸಂಜೆ ವಾಪಸ್!
‘ಕೆ.ರಾಮಚಂದ್ರ ರಾವ್ ಅವರ ಕುಟುಂಬಸ್ಥರು ಹಾಗೂ ಸ್ನೇಹಿತರು ಯಾರೂ ದುಬೈನಲ್ಲಿ ನೆಲಸಿಲ್ಲ. ಆದರೂ ರನ್ಯಾ ಪದೇ ಪದೇ ದುಬೈಗೆ ತೆರಳುತ್ತಿದ್ದರು. ಕೆಲವು ಬಾರಿ ಬೆಳಿಗ್ಗೆ ಬೆಂಗಳೂರು ವಿಮಾನ ನಿಲ್ದಾಣದಿಂದ ಹೊರಟು ರಾತ್ರಿಯೇ ವಾಪಸ್ ಬಂದಿದ್ದರು. ಪ್ರವಾಸಿ ವೀಸಾದ ಅಡಿ ದುಬೈಗೆ ರನ್ಯಾ ಹೋಗಿದ್ದರೂ ಅದೇ ದಿನ ರಾತ್ರಿ ವಾಪಸ್ ಬಂದಿದ್ದರು. ಇದು ಡಿಆರ್‌ಐ ಅಧಿಕಾರಿಗಳಿಗೆ ಅನುಮಾನ ಉಂಟು ಮಾಡಿತ್ತು. ರನ್ಯಾ ಅವರ ವಿಮಾನ ಪ್ರಯಾಣದ ಮೇಲೆ ಅಧಿಕಾರಿಗಳು ಕೆಲವು ದಿನಗಳಿಂದ ಕಣ್ಣಿಟ್ಟಿದ್ದರು’ ಎಂದು ಮೂಲಗಳು ಹೇಳಿವೆ. ‘ಚಿನ್ನವನ್ನು ಸಾಗಣೆ ಮಾಡಲು ಅನುಕೂಲಕರವಾದ ಶೈಲಿಯಲ್ಲಿ ರನ್ಯಾ ಬಟ್ಟೆಯನ್ನು ಹೊಲಿಗೆ ಮಾಡಿಸಿಕೊಂಡು ಧರಿಸುತ್ತಿದ್ದರು’ ಎಂದು ಮೂಲಗಳು ಹೇಳಿವೆ.
ಶಿಷ್ಟಾಚಾರ ಉಲ್ಲಂಘನೆ
‘ಶಿಷ್ಟಾಚಾರದ ಹೆಸರಿನಲ್ಲಿ ನಿಯಮ ಉಲ್ಲಂಘನೆ ಮಾಡಲಾಗಿದ್ದು ವಿಮಾನ ನಿಲ್ದಾಣದ ಭದ್ರತಾ ಅಧಿಕಾರಿಗಳು ರಾಜ್ಯ ಪೊಲೀಸರಿಗೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. ಸಂಬಂಧಿಸಿದವರಿಗೆ ಮಾತ್ರ ವಿಮಾನ ನಿಲ್ದಾಣದಿಂದ ಹೊರಗೆ ಬರುವಾಗ ಭದ್ರತೆ ನೀಡಬೇಕು. ಅಲ್ಲದೇ ಸರ್ಕಾರಿ ವಾಹನವನ್ನು ಒದಗಿಸಬೇಕೆಂದು ಸೂಚನೆ ನೀಡಿದೆ’ ಎಂಬುದು ಗೊತ್ತಾಗಿದೆ. ರನ್ಯಾ ಅವರು ಅಧಿಕಾರಿಯ ಪುತ್ರಿ ಎಂದು ಹೇಳಿಕೊಂಡು ಓಡಾಟ ನಡೆಸುತ್ತಿದ್ದರು. ಅಲ್ಲದೇ ಸರ್ಕಾರಿ ವಾಹನವನ್ನೂ ಬಳಸಿದ್ದರು ಎಂಬುದು ಡಿಆರ್‌ಐ ತನಿಖೆ ವೇಳೆ ಗೊತ್ತಾಗಿದೆ.
ನ್ಯಾಯಾಲಯಕ್ಕೆ ಅರ್ಜಿ
ಬಾಡಿ ವಾರಂಟ್ ಮೇಲೆ ಆರೋಪಿಯನ್ನು ವಶಕ್ಕೆ ಪಡೆಯಲು ಆರ್ಥಿಕ ಅಪರಾಧ ಪ್ರಕರಣಗಳ ವಿಶೇಷ ನ್ಯಾಯಾಲಯಕ್ಕೆ ಡಿಆರ್‌ಐ ಅಧಿಕಾರಿಗಳು ಗುರುವಾರ ಅರ್ಜಿ ಸಲ್ಲಿಸಿದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರು ಶುಕ್ರವಾರ ಆದೇಶ ಪ್ರಕಟಿಸುವುದಾಗಿ ಹೇಳಿದರು. ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಬೇಕಿದೆ. ಜೈಲಿನಲ್ಲಿ ಆರೋಪಿಯಿಂದ ಹೆಚ್ಚಿನ ಮಾಹಿತಿ ಪಡೆಯಲು ಸಾಧ್ಯವಿಲ್ಲ. ಮಾರ್ಚ್ 9ರಿಂದ 11ರವರೆಗೆ ಡಿಆರ್‌ಐ ವಶಕ್ಕೆ ನೀಡುವಂತೆ ತನಿಖಾಧಿಕಾರಿಗಳ ಪರವಾಗಿ ವಕೀಲರು ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.