ಬೆಂಗಳೂರು: ‘ವಿಶ್ವವಿದ್ಯಾಲಯ ಅನುದಾನ ಆಯೋಗವು (ಯುಜಿಸಿ) ಉನ್ನತ ಕಾನೂನು ಶಿಕ್ಷಣವನ್ನು ಕನ್ನಡ ಸೇರಿ ವಿವಿಧ ಪ್ರಾದೇಶಿಕ ಭಾಷೆಗಳಲ್ಲಿಯೂ ನೀಡುವ ವ್ಯವಸ್ಥೆಯನ್ನು ಜಾರಿಗೆ ತರಬೇಕು’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಆಗ್ರಹಿಸಿದ್ದಾರೆ.
ಈ ಕುರಿತಂತೆ ಯುಜಿಸಿ ಅಧ್ಯಕ್ಷರಿಗೆ ಪತ್ರ ಬರೆದಿರುವ ಅವರು, ‘ಪ್ರಸ್ತುತ ಎಲ್‌ಎಲ್‌ಎಂ, ಎಲ್‌ಎಲ್‌ಬಿ ಮತ್ತು ಪಿಎಚ್.ಡಿಯನ್ನು ಆಂಗ್ಲ ಭಾಷೆಯಲ್ಲಿ ಅಭ್ಯಸಿಸುವ ಅವಕಾಶವಿದೆ. ಆಂಗ್ಲ ಭಾಷೆಯ ಮೇಲೆ ಪ್ರಭುತ್ವ ಹೊಂದದ ಪ್ರತಿಭಾನ್ವಿತ ವಿದ್ಯಾರ್ಥಿಗಳು ಅವಕಾಶ ವಂಚಿತರಾಗುತ್ತಿದ್ದಾರೆ. ಯುಜಿಸಿ ತನ್ನ ನಿಯಮಗಳಲ್ಲಿ ತಿದ್ದುಪಡಿ ತರುವ ಮೂಲಕ ಅಸಂಖ್ಯ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಆಗ್ರಹದ ಮೇರೆಗೆ ರಾಜ್ಯದ ಹಲವು ವಿಶ್ವವಿದ್ಯಾಲಯಗಳ ತಾಂತ್ರಿಕ ಶಿಕ್ಷಣ ಬೋಧನೆಯಲ್ಲಿ ಕನ್ನಡ ಪಠ್ಯವನ್ನು ಅಳವಡಿಸಿಕೊಳ್ಳಲಾಗಿದೆ. ಇದೇ ಮಾದರಿಯ ಕ್ರಮವನ್ನು ಯುಜಿಸಿ ಅನುಸರಿಸಬಹುದಾಗಿದೆ’ ಎಂದು ಹೇಳಿದ್ದಾರೆ.
‘ಆಯೋಗವು ಕೂಡಲೇ ಪ್ರಾದೇಶಿಕ ಭಾಷೆಗಳಲ್ಲಿ ಪಠ್ಯ ತಯಾರಿಸಲು ಮುಂದಾಗಬೇಕು. ಈ ಕುರಿತಂತೆ ಸಮಿತಿಯೊಂದನ್ನು ರಚಿಸಿ, ಉನ್ನತ ಕಾನೂನು ಶಿಕ್ಷಣಕ್ಕೆ ನಿಗದಿಪಡಿಸಲಾಗಿರುವ ಆಂಗ್ಲ ಭಾಷೆಯ ಪಠ್ಯಕ್ರಮದ ಭಾಷಾಂತರಕ್ಕೆ ಕ್ರಮವಹಿಸಬೇಕಿರುತ್ತದೆ. ಆಸಕ್ತ ವಿದ್ಯಾರ್ಥಿಗಳಿಗೆ ಪ್ರಾದೇಶಿಕ ಭಾಷೆಯಲ್ಲಿ ಉನ್ನತ ಕಾನೂನು ಶಿಕ್ಷಣ ಮುಂದುವರೆಸುವ ಅವಕಾಶ ದೊರೆತಲ್ಲಿ ಉತ್ತಮ ನ್ಯಾಯದಾನ ವ್ಯವಸ್ಥೆಯನ್ನು ನಿರ್ಮಿಸಲು ಸಾಧ್ಯವಾಗಲಿದೆ. ಈ ರೀತಿಯ ತೀರ್ಮಾನದಿಂದ ಯುಜಿಸಿಯ ದೇಶ ಸೇವೆ ಶಾಶ್ವತವಾಗಿ ಉಳಿಯಲಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.