
ಬೆಂಗಳೂರು: ‘ಭಾಷೆ ಹೆಸರಲ್ಲಿ ಸಂಘರ್ಷಕ್ಕೆ ಇಳಿಯುವ ಬದಲು, ಬದುಕು ಗಟ್ಟಿಯಾಗಲು ಕನ್ನಡಿಗರಿಗೆ ವೃತ್ತಿ ಶಿಕ್ಷಣ, ಉದ್ಯೋಗದಲ್ಲಿ ಒಳ ಮೀಸಲಾತಿ ಪ್ರಮಾಣ ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡಿ’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಸಲಹೆ ನೀಡಿದರು.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಕನ್ನಡ ಕ್ರಿಯಾ ಸಮಿತಿ ಶಾಂತಿನಗರದಲ್ಲಿ ಶುಕ್ರವಾರ ಆಯೋಜಿಸಿದ್ದ 70ನೇ ಕರ್ನಾಟಕ ರಾಜ್ಯೋತ್ಸವದಲ್ಲಿ ಅವರು ಮಾತನಾಡಿದರು.
‘ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದವರಿಗೆ ವೃತ್ತಿ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಶೇ 5ರಷ್ಟು ಮೀಸಲು ನೀಡುವಂತೆ ನಾನು ಅಧ್ಯಕ್ಷನಾಗಿದ್ದಾಗ ಕನ್ನಡ ಅಭಿವೃದ್ದಿ ಪ್ರಾಧಿಕಾರದಿಂದ ಪ್ರಸ್ತಾವ ಸಲ್ಲಿಸಲಾಗಿತ್ತು. ಮುಖ್ಯಮಂತ್ರಿಯಾಗಿದ್ದ ಎಸ್.ಎಂ.ಕೃಷ್ಣ ಅದಕ್ಕೆ ಒಪ್ಪಿಗೆ ನೀಡಿದ್ದರು. ಇದರಿಂದ ಎಷ್ಟೋ ಜನರಿಗೆ ಒಳಿತಾಗಿದೆ. ಈಗಲೂ ಬೇರೆ ವಿಷಯದಲ್ಲಿ ಹೋರಾಡುವ ನಮಗೆ ಇಂತಹ ವಿಷಯವೂ ಮುಖ್ಯವಾಗಬೇಕು’ ಎಂದು ತಿಳಿಸಿದರು.
‘ಸರ್ವಜನಾಂಗದ ಶಾಂತಿಯ ತೋಟ ಎಂದು ನಮ್ಮನ್ನು ಕರೆದುಕೊಂಡರೂ, ತೋಟದಲ್ಲಿ ರಕ್ತ ಮೆತ್ತಿಕೊಂಡಿದೆ. ಜಾತಿಯ ಜೈಲು ಕಟ್ಟಿಕೊಂಡಿದ್ದೇವೆ. ಧರ್ಮದ ದ್ವೇಷದ ದ್ವೀಪದೊಳಗೆ ಬದುಕುವಂತ ಸನ್ನಿವೇಶ ತಂದುಕೊಂಡಿದ್ದೇವೆ. ಸೂಫಿ ಸಂತರು ಹಾಗೂ ತತ್ವಪದಕಾರರ ಪರಂಪರೆ ನಮ್ಮದು. ಅಂತಹ ಪರಂಪರೆಯನ್ನು ಉಳಿಸಿಕೊಳ್ಳುವ ಹೊಣೆಯೂ ಇದೆ’ ಎಂದರು.
‘ಅಳಿದು ಹೋಗುವ 20 ಭಾಷೆಗಳ ಪಟ್ಟಿಯಲ್ಲಿ ಕನ್ನಡವೂ ಇದೆ. ಬೇಗನೇ ಕನ್ನಡ ನಶಿಸಿ ಹೋಗುತ್ತದೆ ಎಂಬ ರೀತಿ ಕೆಲ ವರ್ಷದ ಹಿಂದೆ ಚರ್ಚೆಯಾಯಿತು. ಕಾಲ್ಪನಿಕ ಶತ್ರುವೊಂದನ್ನು ಇಟ್ಟುಕೊಂಡು ಈ ರೀತಿ ಚರ್ಚಿಸುವುದು ನಡೆದುಕೊಂಡೇ ಬಂದಿದೆ. ಜನಗಳ ಭಾಷೆ ಆಗಿರುವುದರಿಂದ ಕನ್ನಡ ಎಂದಿಗೂ ನಾಶ ಆಗುವುದಿಲ್ಲ. ಆದರೆ ಉಳಿಸಿಕೊಳ್ಳುವ ಸವಾಲು ನಮ್ಮ ಮುಂದೆ ಇದ್ದೇ ಇದೆ’ ಎಂದು ಹೇಳಿದರು.
ಬಿಎಂಟಿಸಿ ಮಾಹಿತಿ ಮತ್ತು ತಂತ್ರಜ್ಞಾನ ಸಂಸ್ಥೆಯ ನಿರ್ದೇಶಕಿ ಎಂ.ಶಿಲ್ಪ, ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ನಿರ್ದೇಶಕಿ ಸ್ಮಿತಾ ರೆಡ್ಡಿ, ಕೆಎಸ್‌ಆರ್‌ಟಿಸಿ ಕೇಂದ್ರ ಕನ್ನಡ ಕ್ರಿಯಾ ಸಮಿತಿಯ ಗೌರವ ಅಧ್ಯಕ್ಷ ವ.ಚ.ಚನ್ನೇಗೌಡ, ಅಧ್ಯಕ್ಷ ಕೆ.ಎಸ್.ಪ್ರಭುಸ್ವಾಮಿ ಉಪಸ್ಥಿತರಿದ್ದರು.
ಸಾಹಿತಿ ರಾಜಶೇಖರಯ್ಯ ಮಠಪತಿ ಅವರನ್ನು ಸನ್ಮಾನಿಸಲಾಯಿತು. 51 ವಿದ್ಯಾರ್ಥಿಗಳಿಗೆ ಕನ್ನಡ ವಿದ್ಯಾಶ್ರೀ ಹಾಗೂ 79 ಕಾರ್ಮಿಕರಿಗೆ ಕನ್ನಡಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಇಂಗ್ಲಿಷ್ ಸಂಸ್ಕೃತ ಹಿಂದಿ ಪದಗಳನ್ನು ಕನ್ನಡೀಕರಿಸಿಗೊಂಡು ಜನ ಬಳಸುತ್ತಿದ್ದಾರೆ. ಬಳಕೆಯಿಂದಲೇ ಭಾಷೆ ಉಳಿಯಬಲ್ಲದುಬರಗೂರು ರಾಮಚಂದ್ರಪ್ಪ ಸಾಹಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.