ADVERTISEMENT

ಹಳ್ಳಿಗಳೇ ಕಲಾಜೀವನಕ್ಕೆ ಸ್ಫೂರ್ತಿ: ಡಾ.ವಿ.ಜಿ.ಅಂದಾನಿ ಮನದಾಳದ ಮಾತು

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2019, 19:13 IST
Last Updated 7 ಡಿಸೆಂಬರ್ 2019, 19:13 IST
ಪರಿಷತ್ತಿನ ಅಧ್ಯಕ್ಷ ಡಾ.ಮನು ಬಳಿಗಾರ್ ಅವರು ಡಾ.ವಿ.ಜಿ.ಅಂದಾನಿ ಅವರನ್ನು ಸನ್ಮಾನಿಸಿದರು. ಗೌರವ ಕಾರ್ಯದರ್ಶಿ ರಾಜಶೇಖರ ಹತಗುಂದಿ ಮತ್ತು ಗೌರವ ಕೋಶಾಧ್ಯಕ್ಷ ಪಿ.ಮಲ್ಲಿಕಾರ್ಜುನಪ್ಪ ಇದ್ದರು -ಪ್ರಜಾವಾಣಿ ಚಿತ್ರ
ಪರಿಷತ್ತಿನ ಅಧ್ಯಕ್ಷ ಡಾ.ಮನು ಬಳಿಗಾರ್ ಅವರು ಡಾ.ವಿ.ಜಿ.ಅಂದಾನಿ ಅವರನ್ನು ಸನ್ಮಾನಿಸಿದರು. ಗೌರವ ಕಾರ್ಯದರ್ಶಿ ರಾಜಶೇಖರ ಹತಗುಂದಿ ಮತ್ತು ಗೌರವ ಕೋಶಾಧ್ಯಕ್ಷ ಪಿ.ಮಲ್ಲಿಕಾರ್ಜುನಪ್ಪ ಇದ್ದರು -ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ನಾನು ಬೆಳೆದದ್ದು ಗ್ರಾಮೀಣ ಭಾಗದಲ್ಲಿ. ಅಲ್ಲಿನ ಜೀವನ, ವೈವಿಧ್ಯ ಸಂಸ್ಕೃತಿ ಚಿತ್ರಕಲೆಗೆ ಸ್ಫೂರ್ತಿ’ ಎಂದುಹಿರಿಯ ಚಿತ್ರ ಕಲಾವಿದ ಡಾ.ವಿ.ಜಿ.ಅಂದಾನಿ ಶನಿವಾರ ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ `ಸಾಧಕರೊಡನೆ ಸಂವಾದ' ಕಾರ್ಯಕ್ರಮದಲ್ಲಿ ಮನದಾಳದ ಮಾತುಗಳನ್ನು ಹಂಚಿಕೊಂಡರು.

‘ಪ್ರೌಢಶಾಲೆಯಲ್ಲಿ ಹಸುಗಳ ಬಗ್ಗೆ ಪ್ರಬಂಧ ಬರೆಯಲು ಶಿಕ್ಷಕರು ಸೂಚಿಸಿದ್ದರು. ಆದರೆ, ನಾನು ಹಸುವಿನ ಚಿತ್ರ ಬಿಡಿಸಿ, ಪ್ರಬಂಧ ಎಂದು ನೀಡಿದ್ದೆ. ಶಿಕ್ಷಕರು ನನ್ನ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸಿದರು. ಸಾಹಿತಿಗಳಿಗೆ ಕವನ ಅಭಿವ್ಯಕ್ತಿಯ ಮಾರ್ಗವಾದರೆ, ಗ್ರಾಮೀಣ ಚಿತ್ರಣಗಳೇ ನನ್ನ ಚಿತ್ರಕಲೆಯ ಅಭಿವ್ಯಕ್ತಿ ಮಾರ್ಗವಾಯಿತು’ ಎಂದರು.

ADVERTISEMENT

‘ರವೀಂದ್ರನಾಥ ಠ್ಯಾಗೋರರ ಶಾಂತಿನಿಕೇತನ ನನ್ನ ಮೇಲೆ ಬಹಳ ಪ್ರಭಾವ ಬೀರಿತು. ಹೀಗಾಗಿ ಶಿಕ್ಷಣ ಮುಗಿದ ಬಳಿಕ ಕಲಬುರ್ಗಿಯಲ್ಲಿ ಐಡಿಯಲ್ ಫೈನ್ ಇನ್‌ಸ್ಟಿಟ್ಯೂಟ್ ಪ್ರಾರಂಭಿಸಿದೆ. ಆ ಸಂಸ್ಥೆಯಲ್ಲಿ 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡಿದ್ದಾರೆ. ಅಲ್ಲಿ ಕಲಿತವರು ನೌಕರಿಗಾಗಿ ಅಲೆಯಲಿಲ್ಲ. ಬದಲಿಗೆ ಚಿತ್ರಕಲೆಯೇ ಅವರ ಬದುಕನ್ನು ರೂಪಿಸಿದೆ’ ಎಂದರು.

‘40 ವರ್ಷಗಳ ಹಿಂದೆ ಮುಂಬೈನ ಜಹಂಗೀರ್ ಆರ್ಟ್ ಗ್ಯಾಲರಿಯಲ್ಲಿ ನನ್ನ ಮೊದಲ ಚಿತ್ರಕಲಾ ಪ್ರದರ್ಶನ ಏರ್ಪಡಿಸಲಾಗಿತ್ತು. ಅಲ್ಲಿ ನನ್ನ ಒಂದು ಕಲಾಕೃತಿ ₹ 9 ಸಾವಿರಕ್ಕೆ ಮಾರಾಟವಾಗಿತ್ತು’ ಎಂದು ಸ್ಮರಿಸಿಕೊಂಡರು.

‘ಒಮ್ಮೆ ನಮ್ಮೂರು ಕರಣಗಿಗೆ ಬಂದಿದ್ದ ವೀರೇಂದ್ರ ಪಾಟೀಲರು ತೊಗರಿ, ಜೋಳದ ಸಮೃದ್ಧ ಕೃಷಿಯನ್ನು ಕಂಡು ಗ್ರಾಮಕ್ಕೆ ಹೊನ್ನಕರಣಗಿ' ಎಂದು ಮರುನಾಮಕರಣ ಮಾಡಿದರು’ ಎಂದು ಅವರು ನೆನಪಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.