ADVERTISEMENT

ಬೆಂಗಳೂರು: ತ್ಯಾಜ್ಯ ವಿಲೇವಾರಿಗೆ ಕಣ್ಣೂರು ಗ್ರಾ.ಪಂ ತಡೆ

ಆರ್. ಮಂಜುನಾಥ್
Published 13 ಮಾರ್ಚ್ 2025, 0:00 IST
Last Updated 13 ಮಾರ್ಚ್ 2025, 0:00 IST
ಮಿಟ್ಟಗಾನಹಳ್ಳಿ ಭೂಭರ್ತಿ ಪ್ರದೇಶದಲ್ಲಿ ಸಾಲುಗಟ್ಟಿ ನಿಂತಿರುವ ತ್ಯಾಜ್ಯ ತುಂಬಿದ ಕಾಂಪ್ಯಾಕ್ಟರ್‌ಗಳು
ಪ್ರಜಾವಾಣಿ ಚಿತ್ರ: ಎಂ.ಎಸ್.ಮಂಜುನಾಥ್
ಮಿಟ್ಟಗಾನಹಳ್ಳಿ ಭೂಭರ್ತಿ ಪ್ರದೇಶದಲ್ಲಿ ಸಾಲುಗಟ್ಟಿ ನಿಂತಿರುವ ತ್ಯಾಜ್ಯ ತುಂಬಿದ ಕಾಂಪ್ಯಾಕ್ಟರ್‌ಗಳು ಪ್ರಜಾವಾಣಿ ಚಿತ್ರ: ಎಂ.ಎಸ್.ಮಂಜುನಾಥ್   

ಬೆಂಗಳೂರು: ನಗರದ ಹಲವು ಭಾಗಗಳಿಂದ ತ್ಯಾಜ್ಯ ಸಂಗ್ರಹಿಸುವ 300ಕ್ಕೂ ಹೆಚ್ಚು ಕಾಂಪ್ಯಾಕ್ಟರ್‌ಗಳು ಖಾಲಿಯಾಗಿಲ್ಲ. ಮಿಟ್ಟಗಾನಹಳ್ಳಿ ಭೂಭರ್ತಿ ಪ್ರದೇಶದಲ್ಲಿ ಕಾಂಪ್ಯಾಕ್ಟರ್‌ಗಳು ಎರಡು ದಿನಗಳಿಂದ ಸಾಲುಗಟ್ಟಿ ನಿಂತಿರುವುದರಿಂದ, ನಗರದ ರಸ್ತೆಗಳಲ್ಲಿ ತ್ಯಾಜ್ಯ ತುಂಬಿಕೊಳ್ಳುತ್ತಿದೆ.

‘ಅವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿದ್ದು, ಸುತ್ತಮುತ್ತಲಿನ ಪರಿಸರ ಹಾಳಾಗುತ್ತಿದೆ. ದ್ರವತ್ಯಾಜ್ಯ (ಲಿಚೆಟ್‌) ಹೆಚ್ಚಾಗಿ ಹೊರಬರುತ್ತಿದ್ದು, ಸುತ್ತಮುತ್ತಲಿನ ಕೆರೆ, ಕುಂಟೆ, ಬಾವಿಗಳು, ಕೊಳವೆಬಾವಿಗಳೂ ಕಲುಷಿತಗೊಂಡಿದೆ. ದಿನಬಳಕೆಯ ನೀರಿನಲ್ಲಿ ಈ ಕಲ್ಮಶ ಸೇರಿಕೊಂಡು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಆದ್ದರಿಂದ ಅವೈಜ್ಞಾನಿಕ ತ್ಯಾಜ್ಯ ವಿಲೇವಾರಿಯನ್ನು ಸ್ಥಗಿತಗೊಳಿಸಿ’ ಎಂದು ಆಗ್ರಹಿಸಿ ಕಣ್ಣೂರು ಗ್ರಾಮ ಪಂಚಾಯಿತಿ ಸದಸ್ಯರು ಹೋರಾಟ ನಡೆಸುತ್ತಿದ್ದಾರೆ.

‘ಮಿಟ್ಟಗಾನಹಳ್ಳಿ ಗ್ರಾಮದ ಸರ್ಕಾರಿ ಗೋಮಾಳದ ಜಮೀನಿನಲ್ಲಿ ಬಿಬಿಎಂಪಿ ಒಂಬತ್ತು ವರ್ಷದಿಂದ ಕಸ ವಿಲೇವಾರಿ ಮಾಡುತ್ತಿದೆ. ಆದರೆ, ಇಲ್ಲಿನ ಪರಿಸರದ ಬಗ್ಗೆ ಕಾಳಜಿ ವಹಿಸದೆ, ವಿಲೇವಾರಿ ಆರಂಭಿಸುವ ಮೊದಲು ನೀಡಿದ್ದ ಭರವಸೆಯನ್ನು ಈಡೇರಿಸಿಲ್ಲ. ಹೀಗಾಗಿ, ಕಾಂಪ್ಯಾಕ್ಟರ್‌ಗಳಿಂದ ತ್ಯಾಜ್ಯವನ್ನು ಭೂಭರ್ತಿ ಮಾಡಲು ಬಿಡುವುದಿಲ್ಲ’ ಎಂದು ಕಣ್ಣೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್‌. ಅಶೋಕ್‌ ನೇತೃತ್ವದಲ್ಲಿ ಸದಸ್ಯರು ಕಾಂಪ್ಯಾಕ್ಟರ್‌ಗಳು ಸಂಚರಿಸುವ ದಾರಿಗೆ ತಡೆ ಹಾಕಿದ್ದಾರೆ.

ADVERTISEMENT

‘ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತ (ಬಿಎಸ್‌ಡಬ್ಲ್ಯುಎಂಎಲ್‌)ದವರಿಗೆ ಈ ಬಗ್ಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಮಿಟ್ಟಗಾನಹಳ್ಳಿ ಭೂಭರ್ತಿ ಪ್ರದೇಶದಿಂದ ಹರಿಯುವ ದ್ರವತ್ಯಾಜ್ಯದಿಂದ ಬೆಳ್ಳಹಳ್ಳಿ ಕೆರೆ, ಕಣ್ಣೂರು ಕೆರೆ, ಚಿಕ್ಕಗುಬ್ಬಿ ಕೆರೆ, ದೊಡ್ಡ ಗುಬ್ಬಿ ಕೆರೆ ಹಾಗೂ ರಾಂಪುರ ಕೆರೆಗಳು ಮಲಿನಗೊಂಡಿದ್ದು, ಸಾವಿರಾರು ಮೀನುಗಳು ಸಾಯುತ್ತಿವೆ. ಅಂತರ್ಜಲ ಕೂಡ ಕಲುಷಿತಗೊಂಡಿದೆ’ ಎಂದು ದೂರಿರುವ ಅವರು, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೂ ಪತ್ರ ಬರೆದು ಕ್ರಮ ಕೈಗೊಳ್ಳಲು ಮನವಿ ಮಾಡಿದ್ದಾರೆ.

ಮಿಟ್ಟಗಾನಹಳ್ಳಿ ಭೂಭರ್ತಿ ಪ್ರದೇಶದ ಒಳಗೆ ಹಾಗೂ ಮಿಟ್ಟಗಾನಹಳ್ಳಿ, ಬೆಳ್ಳಹಳ್ಳಿ, ಬೆಳ್ಳಹಳ್ಳಿ ಕ್ರಾಸ್‌ವರೆಗೂ ತ್ಯಾಜ್ಯ ತುಂಬಿದ ಕಾಂಪ್ಯಾಕ್ಟರ್‌ಗಳು ಎರಡು ದಿನಗಳಿಂದ ಸಾಲುಗಟ್ಟಿ ನಿಂತಿವೆ. ಸಾಮಾನ್ಯ ದಿನಗಳಲ್ಲೂ ದುರ್ವಾಸನೆಯ ಸಮಸ್ಯೆ ಇದ್ದು, ಈಗ ಕಾಂಪ್ಯಾಕ್ಟರ್‌ಗಳು ನಿಂತಿರುವುದರಿಂದ ದುರ್ವಾಸನೆ ಮತ್ತಷ್ಟು ಹೆಚ್ಚಾಗಿದೆ.

ಮಿಟ್ಟಗಾನಹಳ್ಳಿ ಭೂಭರ್ತಿ ಪ್ರದೇಶಕ್ಕೆ ತ್ಯಾಜ್ಯ ತುಂಬಿದ ವಾಹನಗಳು ಸಂಚರಿಸದಂತೆ ಮಣ್ಣು ಸುರಿದು ಟ್ರ್ಯಾಕ್ಟರ್‌ಗಳನ್ನು ನಿಲ್ಲಿಸಲಾಗಿದೆ ಪ್ರಜಾವಾಣಿ ಚಿತ್ರ: ಎಂ.ಎಸ್.ಮಂಜುನಾಥ್
ಮಿಟ್ಟಗಾನಹಳ್ಳಿ ಭೂಭರ್ತಿ ಪ್ರದೇಶದಲ್ಲಿ ಕಣ್ಣೂರು ಗ್ರಾಮ ಪಂಚಾಯಿತಿ ಸದಸ್ಯರು ಮಂಗಳವಾರ ಪ್ರತಿಭಟನೆ ನಡೆಸಿದರು

ನೀರಿಲ್ಲ ಊಟವಿಲ್ಲ: ಚಾಲಕರು

‘ಮಂಗಳವಾರ ಬೆಳಿಗ್ಗೆಯಿಂದ ತ್ಯಾಜ್ಯ ವಿಲೇವಾರಿ ಮಾಡಲು ಬಿಡುತ್ತಿಲ್ಲ. ಕಾಂಪ್ಯಾಕ್ಟರ್‌ಗಳನ್ನು ರಸ್ತೆಯಲ್ಲೇ ನಿಲ್ಲಿಸಿದ್ದೇವೆ. ಬಿಟ್ಟು ಹೋಗುವಂತೆಯೂ ಇಲ್ಲ ಉಳಿಯುವುದಕ್ಕೂ ಆಗುತ್ತಿಲ್ಲ. ನಿನ್ನೆಯಿಂದ ಊಟ ಮಾಡಲು ಸಾಧ್ಯವಾಗಿಲ್ಲ. ಇದು ನಿರ್ಜನ ಪ್ರದೇಶ. ಊಟ ನೀರು ಸಿಗುವುದಿಲ್ಲ. ಏನಾದರೂ ಬೇಕಾದರೆ ಎರಡು ಕಿ.ಮೀ. ದೂರ ನಡೆದುಕೊಂಡು ಹೋಗಬೇಕು. ಸೋಮವಾರ ರಾತ್ರಿ ಇಲ್ಲಿ ಕಳೆದದ್ದು ಭಯಾನಕವಾಗಿತ್ತು’ ಎಂದು ಕಾಂಪ್ಯಾಕ್ಟರ್‌ಗಳ ಚಾಲಕರು ಅಳಲು ತೋಡಿಕೊಂಡರು. ‘ಮಂಗಳವಾರ ಬೆಳಿಗ್ಗೆ ಬೆಳ್ಳಹಳ್ಳಿ ಕ್ರಾಸ್‌ ಬಳಿ ನಿಂತಿದ್ದೆವು ಸರ್. ಇಂದು (ಮಂಗಳವಾರ) ಬೆಳಿಗ್ಗೆ ಒಂದಷ್ಟು ಕಾಂಪ್ಯಾಕ್ಟರ್‌ಗಳು ಒಳಕ್ಕೆ ಹೋದವು. ಆದರೆ ವೇಯಿಂಗ್‌ ಗೇಟ್‌ನಿಂದ ಮುಂದಕ್ಕೆ ಯಾವುದೇ ಕಾಂಪ್ಯಾಕ್ಟರ್‌ ಬಿಡುತ್ತಿಲ್ಲ’ ಎಂದು ಹೇಳಿದರು. ‘ಮಂಗಳವಾರ ಮುಂಜಾನೆ ಮಿಟ್ಟಗಾನಹಳ್ಳಿ ಭೂಭರ್ತಿ ಪ್ರದೇಶದಲ್ಲಿ ತ್ಯಾಜ್ಯ ವಿಲೇವಾರಿ ಮಾಡಿದ ಸುಮಾರು 25 ಕಾಂಪ್ಯಾಕ್ಟರ್‌ಗಳು ಅಲ್ಲಿಂದ ಹೊರಹೋಗದಂತೆಯೂ ತಡೆಹಾಕಲಾಗಿದೆ. ಕಾಂಪ್ಯಾಕ್ಟರ್‌ ಹೋಗುವ ಹಾಗೂ ಬರುವ ದಾರಿಯನ್ನು ಮುಚ್ಚಲಾಗಿದೆ’ ಎಂದು ಚಾಲಕರು ಹೇಳಿದರು.

ವೈಜ್ಞಾನಿಕ ವಿಲೇವಾರಿಯಾಗದಿದ್ದರೆ ಉಗ್ರ ಹೋರಾಟ: ಅಶೋಕ್‌

‘ಮಿಟ್ಟಗಾನಹಳ್ಳಿ ಭೂಭರ್ತಿ ಪ್ರದೇಶದಲ್ಲಿ ಅವೈಜ್ಞಾನಿಕವಾಗಿ ತ್ಯಾಜ್ಯವನ್ನು ಸುರಿಯಲಾಗುತ್ತಿದೆ. ಪ್ರಾಣಿತ್ಯಾಜ್ಯ ವೈದ್ಯಕೀಯ ತ್ಯಾಜ್ಯ ಕಾರ್ಖಾನೆಗಳ ವಿಷಪೂರಿತ ತ್ಯಾಜ್ಯವನ್ನೂ ಇಲ್ಲಿ ತಂದು ಸುರಿಯುತ್ತಿದ್ದಾರೆ. ತ್ಯಾಜ್ಯದೊಂದಿಗೆ ಶವವೂ ಪತ್ತೆಯಾಗಿತ್ತು. ಈ ಬಗ್ಗೆ ಬಿಎಸ್‌ಡಬ್ಲ್ಯುಎಂಎಲ್‌ ಮುಖ್ಯ ಪ್ರಧಾನ ವ್ಯವಸ್ಥಾಪಕ ಲೋಕೇಶ್‌ ಅವರಿಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ. ವೈಜ್ಞಾನಿಕವಾಗಿ ಕಸವಿಲೇವಾರಿ ಮಾಡದಿದ್ದರಿಂದ ತ್ಯಾಜ್ಯ ವಿಲೇವಾರಿಯನ್ನು ತಡೆಯಲಾಗಿದೆ. ನಮ್ಮೊಂದಿಗೆ ಯಾರೂ ಮಾತುಕತೆಗೆ ಬಂದಿಲ್ಲ. ನಮ್ಮ ಮನವಿಗೆ ಸ್ಪಂದಿಸದಿದ್ದರೆ ಗ್ರಾಮಸ್ಥರು ವಿದ್ಯಾಸಂಸ್ಥೆಗಳ ವತಿಯಿಂದ ಹೋರಾಟ ನಡೆಸಲಾಗುತ್ತದೆ’ ಎಂದು ಕಣ್ಣೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್‌. ಅಶೋಕ್‌ ತಿಳಿಸಿದರು.

ಅನವಶ್ಯಕವಾಗಿ ತೊಂದರೆ: ಲೋಕೇಶ್

‘ಮಿಟ್ಟಗಾನಹಳ್ಳಿಯಲ್ಲಿ ಕಳೆದ ವರ್ಷಗಳಲ್ಲಿ ಹೇಗೆ ಭೂಭರ್ತಿ ಮಾಡಲಾಗುತ್ತಿತ್ತೋ ಅದೇ ರೀತಿ ತ್ಯಾಜ್ಯವನ್ನು ವಿಲೇವಾರಿ ಮಾಡಲಾಗುತ್ತಿದೆ. ಯಾವುದೇ ರೀತಿಯ ವ್ಯತ್ಯಾಸವಾಗಿಲ್ಲ. ಆದರೂ ಕೆಲವರು ಅನವಶ್ಯಕವಾಗಿ ತೊಂದರೆ ನೀಡಿ ಕಾಂಪ್ಯಾಕ್ಟರ್‌ಗಳನ್ನು ತಡೆದಿದ್ದಾರೆ. ಅವರೊಂದಿಗೆ ಮಾತುಕತೆ ನಡೆಸಲಾಗುತ್ತಿದೆ’ ಎಂದು ಬಿಎಸ್‌ಡಬ್ಲ್ಯುಎಂಎಲ್‌ನ ಮುಖ್ಯ ಪ್ರಧಾನ ವ್ಯವಸ್ಥಾಪಕ ಲೋಕೇಶ್‌ ತಿಳಿಸಿದರು. ‘ಭೂಭರ್ತಿ ಪ್ರದೇಶದಲ್ಲಿನ ದ್ರವತ್ಯಾಜ್ಯ (ಲಿಚೆಟ್‌) ಉತ್ಪಾದನೆ ಹೆಚ್ಚಾಗಿ ಕೆರೆಗಳು ಕಲುಷಿತವಾಗಿ ಎಂದು ಹೇಳುತ್ತಿದ್ದಾರೆ. ಆದರೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿರುವ ವರದಿಯಂತೆ ಯಾವುದೇ ರೀತಿಯ ದ್ರವತ್ಯಾಜ್ಯ ಕೆರೆಗಳಿಗೆ ಸೇರುತ್ತಿಲ್ಲ. ನಾವು ವೈಜ್ಞಾನಿಕವಾಗಿಯೇ ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದೇವೆ. ಶವ ಸಿಕ್ಕಿರುವುದು ನಮ್ಮ ಭೂಭರ್ತಿ ಪ್ರದೇಶದಲ್ಲಿ ಅಲ್ಲ. ಕಟ್ಟಡ ತ್ಯಾಜ್ಯ ಸುರಿಯುವ ಕಡೆ. ಅದಕ್ಕೂ ತ್ಯಾಜ್ಯಕ್ಕೂ ಸಂಬಂಧವಿಲ್ಲ ’ ಎಂದರು.

ಆಟೊಗಳಲ್ಲೇ ಉಳಿದ ತ್ಯಾಜ್ಯ

ಮಿಟ್ಟಗಾನಹಳ್ಳಿ ಭೂಭರ್ತಿ ಪ್ರದೇಶಗಳಲ್ಲಿ ತ್ಯಾಜ್ಯ ತುಂಬಿದ ಕಾಂಪ್ಯಾಕ್ಟರ್‌ಗಳನ್ನು ತಡೆಹಿಡಿದಿರುವುದರಿಂದ ನಗರ ಹಲವು ಪ್ರದೇಶಗಳಲ್ಲಿ ಮನೆಗಳಿಂದ ಸಂಗ್ರಹಿಸಿದ ತ್ಯಾಜ್ಯ ಆಟೊಗಳಲ್ಲೇ ಉಳಿದಿದೆ.  ಪ್ರತಿದಿನ ಸುಮಾರು 400 ಕಾಂಪ್ಯಾಕ್ಟರ್‌ ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ತ್ಯಾಜ್ಯವನ್ನು ಮಿಟ್ಟಗಾನಹಳ್ಳಿ ಭೂಭರ್ತಿಯಲ್ಲಿ ವಿಲೇವಾರಿ ಮಾಡುತ್ತಿದ್ದವು. ಮಂಗಳವಾರ ಬುಧವಾರ ಈ ವಿಲೇವಾರಿ ನಡೆದಿಲ್ಲ. ಕಾಂಪ್ಯಾಕ್ಟರ್‌ಗಳು ಹೊರಬಂದಿಲ್ಲ. ಹೀಗಾಗಿ ನಗರದಾದ್ಯಂತ  ಆಟೊಗಳಲ್ಲೇ ತ್ಯಾಜ್ಯ ಉಳಿದಿದ್ದು ರಸ್ತೆಗಳಲ್ಲಿ ದುರ್ವಾಸೆ ಬೀರುತ್ತಿದೆ. ‘ಮಿಟ್ಟಗಾನಹಳ್ಳಿಯಲ್ಲಿ ತ್ಯಾಜ್ಯ ಭೂಭರ್ತಿಯಾಗದ್ದರಿಂದ ನಗರದ ಕೆಲವು ಪ್ರದೇಶಗಳಲ್ಲಿ ಸಮಸ್ಯೆ ಆಗಿದೆ. ಇನ್ನೆರಡು ದಿನ ನಾವು ನಿರ್ವಹಣೆ ಮಾಡಬಹುದು. ಅದರ ನಂತರ ಸಂಕಷ್ಟವಾಗುತ್ತದೆ’ ಎಂದು ಬಿಎಸ್‌ಡಬ್ಲ್ಯುಎಂಎಲ್‌ನ ಮುಖ್ಯ ಪ್ರಧಾನ ವ್ಯವಸ್ಥಾಪಕ ಲೋಕೇಶ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.