ADVERTISEMENT

ರಾಜರಾಜೇಶ್ವರಿ ನಗರ ಕ್ಷೇತ್ರ ಸ್ಥಿತಿ–ಗತಿ| ಮುನಿರತ್ನ ಓಟ ತಡೆಯಲು ‘ಕೈ’ ತಂತ್ರ

ವಿಜಯಕುಮಾರ್ ಎಸ್.ಕೆ.
Published 25 ಜನವರಿ 2023, 20:30 IST
Last Updated 25 ಜನವರಿ 2023, 20:30 IST
ಮುನಿರತ್ನ
ಮುನಿರತ್ನ   

ಬೆಂಗಳೂರು: ಕಾಂಗ್ರೆಸ್‌ ತೆಕ್ಕೆಯಿಂದ ಬಿಜೆಪಿಗೆ ಹೊರಳಿರುವ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಲ್ಲಿ ಈಗ ಪಕ್ಷಕ್ಕಿಂತ, ಶಾಸಕ ಮುನಿರತ್ನ ಹಿಡಿತ ಹೆಚ್ಚಿದೆ. ಉಪ ಚುನಾವಣೆಯಲ್ಲಿ ಸೆಣಸಿ ಸೋತಿರುವ ಕುಸುಮಾ ಹುಮಂತರಾಯಪ್ಪ (ದಿವಂಗತ ಡಿ.ಕೆ.ರವಿ ಪತ್ನಿ) ಈ ಬಾರಿ ಪುಟಿದೇಳುವ ತವಕದಲ್ಲಿದ್ದಾರೆ.

ಜಾಲಹಳ್ಳಿ ವಿಲೇಜ್, ಬಾಹುಬಲಿ ನಗರ, ಮತ್ತಿಕೆರೆ, ಜೆ.ಪಿ.ಪಾರ್ಕ್, ಯಶವಂತಪುರ, ಲಕ್ಷ್ಮಿದೇವಿನಗರ, ಪೀಣ್ಯ, ಲಗ್ಗೆರೆ, ಮಲ್ಲತ್ತಹಳ್ಳಿ, ಕೊಟ್ಟಿಗೆಪಾಳ್ಯ, ಕೆಂಗುಂಟೆ, ಜ್ಞಾನಭಾರತಿ, ರಾಜರಾಜೇಶ್ವರಿನಗರವನ್ನು ಒಳಗೊಂಡ ವಿಶಾಲವಾದ ಕ್ಷೇತ್ರ ಇದು. ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ಹೊಂದಿಕೊಂಡಂತೆ ಇರುವ ಬಡಾವಣೆಗಳೇ ಹೆಚ್ಚಿದ್ದು, ಕಾರ್ಮಿಕ ಸಮುದಾಯವೇ ಹೆಚ್ಚಿನ ಸಂಖ್ಯೆಯಲ್ಲಿ ಈ ಕ್ಷೇತ್ರದ ಮತದಾರರು. ಬೃಹತ್‌ ಸಂಖ್ಯೆಯಲ್ಲಿ ವಲಸಿಗರು ಇರುವ ರಾಜರಾಜೇಶ್ವರಿನಗರದಲ್ಲಿ, ಉಡುಗೊರೆ ರಾಜಕಾರಣ ಪ್ರತಿ ಬಾರಿಯೂ ಜೋರಾಗಿ ಸದ್ದು ಮಾಡುತ್ತದೆ.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಈ ಕ್ಷೇತ್ರದಲ್ಲಿ 2013ರಿಂದ ಈವರೆಗೆ ನಡೆದಿರುವ ಮೂರು ಚುನಾವಣೆಯಲ್ಲಿ ಮುನಿರತ್ನ ಸತತ ಗೆಲುವು ಸಾಧಿಸಿದ್ದಾರೆ. ಅದಕ್ಕೂ ಮುನ್ನ 2008ರಲ್ಲಿ ಬಿಜೆಪಿಯಿಂದ ಎಂ.ಶ್ರೀನಿವಾಸ್ ಗೆದ್ದಿದ್ದರು. 2013 ಮತ್ತು 2018ರಲ್ಲಿ ಕಾಂಗ್ರೆಸ್‌ನಿಂದ ಮುನಿರತ್ನ ಗೆದ್ದಿದ್ದರು. ಜೆಡಿಎಸ್‌–ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಉರುಳಿಸಲು 2019ರಲ್ಲಿ ಬಿಜೆಪಿ ನಡೆಸಿದ ‘ಆಪರೇಷನ್ ಕಮಲ’ದಲ್ಲಿ ರಾಜೀನಾಮೆ ನೀಡಿ ಬಿಜೆಪಿಗೆ ಜಿಗಿದರು.

ADVERTISEMENT

ಹೈಕೋರ್ಟ್‌ನಲ್ಲಿ ತಡೆಯಾಜ್ಞೆ ಇದ್ದಿದ್ದರಿಂದ ಈ ಕ್ಷೇತ್ರದ ಉಪಚುನಾವಣೆ 2020ರ ನವೆಂಬರ್‌ನಲ್ಲಿ ನಡೆಯಿತು. ಕುಸುಮಾ ಅವರು ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರು. ಜೆಡಿಎಸ್‌ನಿಂದ ವಿ.ಕೃಷ್ಣಮೂರ್ತಿ ಕೂಡ ಸ್ಪರ್ಧೆ ಮಾಡಿದ್ದರು. ಕುಸುಮಾ ಅವರು 67 ಸಾವಿರ ಮತಗಳನ್ನು ಪಡೆದರೆ, ಮುನಿರತ್ನ 1.25 ಲಕ್ಷ ಮತಗಳನ್ನು ಪಡೆದು ವಿಜೇತರಾಗಿದ್ದರು. ವಿ.ಕೃಷ್ಣಮೂರ್ತಿ ಅವರಿಗೆ 10 ಸಾವಿರ ಮತಗಳಷ್ಟೇ ದೊರೆತಿದ್ದವು. ಕೆಲ ದಿನಗಳ ಬಳಿಕ ಮುನಿರತ್ನ ಸಚಿವರೂ ಆದರು.

ಮುಂದಿನ ಚುನಾವಣೆಯಲ್ಲಿ ಬಿಜೆಪಿಯಿಂದ ಮುನಿರತ್ನ ಅವರೇ ಸ್ಪರ್ಧೆ ಮಾಡುವ ಸಾಧ್ಯತೆ ಇದೆ. 2018ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ 82 ಸಾವಿರ ಮತಗಳನ್ನು ಪಡೆದಿದ್ದ ತುಳಸಿ ಮುನಿರಾಜುಗೌಡ ಇಲ್ಲಿ ಮತ್ತೆ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಇಲ್ಲಿ ಮುನಿರತ್ನ ಅವರಿಗೆ ಅವಕಾಶ ನೀಡಿದರೆ, ಬೇರೆ ಯಾವುದಾದರೂ ಕ್ಷೇತ್ರದಿಂದ ಸ್ಪರ್ಧೆಗೆ ಅವಕಾಶ ನೀಡುವಂತೆ ಮುನಿರಾಜುಗೌಡ ಬೇಡಿಕೆ ಇಟ್ಟಿದ್ದಾರೆ ಎಂದು ಮೂಲಗಳು ಹೇಳಿವೆ.

ಕಾಂಗ್ರೆಸ್‌ನಿಂದ ಟಿಕೆಟ್ ಬಯಸಿ ಕುಸುಮಾ ಅವರು ಮಾತ್ರ ಅರ್ಜಿ ಸಲ್ಲಿಸಿದ್ದಾರೆ. ಆದ್ದರಿಂದ, ಅವರಿಗೆ ಕಾಂಗ್ರೆಸ್‌ ಟಿಕೆಟ್ ದೊರೆಯುವುದು ಖಚಿತ ಎಂಬ ಮಾತು ಪಕ್ಷದಲ್ಲಿ ಕೇಳಿಬರುತ್ತಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರವೂ ಸೇರಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್‌ ಗೆಲುವಿನ ದಡ ಸೇರಿತ್ತು. ಒಕ್ಕಲಿಗ ಮತದಾರರೇ ಹೆಚ್ಚಿರುವ ಕ್ಷೇತ್ರದಲ್ಲಿ ಕುಸುಮಾ ಅವರನ್ನು ಕಣಕ್ಕಿಳಿಸಿ ಗೆಲುವಿನ ಪತಾಕೆ ಹಾರಿಸಲು ಸಂಸದ ಡಿ.ಕೆ.ಸುರೇಶ್ ಬೆಂಬಲವಾಗಿ ನಿಂತಿದ್ದಾರೆ. ಈ ಬಾರಿಯ ವಿಧಾನಸಭೆ ಚುನಾವಣೆಯನ್ನು ಅವರು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ಇನ್ನು ಜೆಡಿಎಸ್‌ನಿಂದ 2020ರ ಉಪ ಚುನಾವಣೆಯಲ್ಲಿ ಅಭ್ಯರ್ಥಿಯಾಗಿದ್ದ ಕೃಷ್ಣಮೂರ್ತಿ, ಸ್ಥಳೀಯ ಮುಖಂಡ ಗಿರೀಶ್‌ ಗೌಡ ಸೇರಿ ಹಲವು ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ. ಈ ಕ್ಷೇತ್ರದ ಅಭ್ಯರ್ಥಿಯನ್ನು ಜೆಡಿಎಸ್‌ ಇನ್ನೂ ಘೋಷಣೆ ಮಾಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.