
ಕರ್ನಾಟಕ ರಾಜ್ಯೋತ್ಸವ ಸಮಿತಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿವಿಧ ಕಲಾತಂಡಗಳು ಹೆಜ್ಜೆ ಹಾಕಿದವು
ವ
ಬೆಂಗಳೂರು: ಕನ್ನಡಾಂಬೆ ಭುವನೇಶ್ವರಿಯ ಭಾವಚಿತ್ರದೊಂದಿಗೆ ಅದ್ದೂರಿ ಮೆರವಣಿಗೆ, ಹಳದಿ–ಕೆಂಪು ಬಣ್ಣದ ಕನ್ನಡ ಬಾವುಟಗಳ ಹಾರಾಟ, ಎಲ್ಲೆಲ್ಲೂ ಕನ್ನಡಾಭಿಮಾನ ಹೆಚ್ಚಿಸುವ ಗೀತೆಗಳು–ಜೈಕಾರ...
ನಗರದಲ್ಲಿ ಶನಿವಾರ ಕಂಡು ಬಂದ ದೃಶ್ಯಗಳಿವು. 70ನೇ ಕರ್ನಾಟಕ ರಾಜ್ಯೋತ್ಸವವನ್ನು ಕನ್ನಡಾಭಿಮಾನಿಗಳು ಸಂಭ್ರಮ ಸಡಗರದಿಂದ ಆಚರಿಸಿದರು. ನಗರದ ರಸ್ತೆಗಳು ಹಾಗೂ ಪ್ರಮುಖ ವೃತ್ತಗಳಲ್ಲಿ ಹಳದಿ–ಕೆಂಪು ಬಣ್ಣದ ಧ್ವಜಗಳು ರಾರಾಜಿಸಿದರೆ, ಇದೇ ಬಣ್ಣದ ಶಾಲು ಹೊದ್ದ ಕನ್ನಡ ಕಾರ್ಯಕರ್ತರು ಉತ್ಸಾಹದಿಂದ ನಗರದಲ್ಲಿ ಕನ್ನಡದ ಕಹಳೆ ಮೊಳಗಿಸಿದರು. ವಿವಿಧ ಸಂಘ–ಸಂಸ್ಥೆಗಳು ಹಮ್ಮಿಕೊಂಡಿದ್ದ ಕಾರ್ಯಕ್ರಮಗಳು ಕನ್ನಡದ ಭಾಷೆಯ ಮಹತ್ವ ಸಾರಿದರೆ, ಜಾನಪದ ನೃತ್ಯಗಳು ನಾಡಿನ ಸಾಂಸ್ಕೃತಿಕ ವೈಭವವನ್ನು ಅನಾವರಣ ಮಾಡಿದವು.
ಬಸ್‌ಗಳು, ಕಾರುಗಳು, ಆಟೊ ರಿಕ್ಷಾಗಳು, ದ್ವಿಚಕ್ರ ವಾಹನಗಳು, ಹೋಟೆಲು, ಕಚೇರಿಗಳು, ಆಸ್ಪತ್ರೆಗಳು ಎಲ್ಲೆಲ್ಲೂ ನಾಡು–ನುಡಿಯ ಅಭಿಮಾನದ ಸಂಭ್ರಮ ಮನೆ ಮಾಡಿತ್ತು. ಕಂಠೀರವ ಕ್ರೀಡಾಂಗಣದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನಗರದ ವಿವಿಧ ಶಾಲೆಗಳ ಸಾವಿರಾರೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವೈಭವದ ಮೆರವಣಿಗೆ: ಕರ್ನಾಟಕ ರಾಜ್ಯೋತ್ಸವ ಸಮಿತಿ ಹಮ್ಮಿಕೊಂಡಿದ್ದ ಭುವನೇಶ್ವರಿ ಪೂಜೆ–ಉತ್ಸವವು ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನಡೆಯಿತು. ಮೈಸೂರು ಬ್ಯಾಂಕ್ ವೃತ್ತದ ನೃಪತುಂಗ ಮಂಟಪದಲ್ಲಿ ಭುವನೇಶ್ವರಿ ಹಾಗೂ ಅಣ್ಣಮ್ಮ ದೇವತೆಯ ಈ ಮೆರವಣಿಗೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು.
ಉದ್ಯೋಗ ಮೀಸಲಾತಿ: ಕರ್ನಾಟಕ ರಕ್ಷಣಾ ವೇದಿಕೆಯು (ಕರವೇ) ಗಾಂಧಿನಗರದಲ್ಲಿರುವ ತನ್ನ ಕೇಂದ್ರ ಕಚೇರಿಯಲ್ಲಿ ಧ್ವಜಾರೋಹಣ ನಡೆಸಿದ ಕರವೇ ರಾಜ್ಯ ಘಟಕದ ಅಧ್ಯಕ್ಷ ಟಿ.ಎ. ನಾರಾಯಣಗೌಡ, ‘ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡುವ ಮಸೂದೆಯನ್ನು ಕೂಡಲೇ ಜಾರಿಗೊಳಿಸಬೇಕು. ದ್ವಿಭಾಷಾ ನೀತಿ ಅನುಷ್ಠಾನಗೊಳಿಸಬೇಕು. ಕನ್ನಡ ಪರ ಕಾರ್ಯಕರ್ತರ ಮೇಲಿನ ಮೊಕದ್ದಮೆಗಳನ್ನು ಕೂಡಲೇ ಹಿಂದಕ್ಕೆ ಪಡೆಯಬೇಕು’ ಎಂದು ಆಗ್ರಹಿಸಿದರು.
ಪುಸ್ತಕ ವಿತರಣೆ: ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ‘ಕನ್ನಡದ ಕಲರವ’ ಕಾರ್ಯಕ್ರಮ ನಡೆಸಲಾಯಿತು. ಪರಿಷತ್ತಿನ ಅಧ್ಯಕ್ಷ ಎಂ. ಪ್ರಕಾಶಮೂರ್ತಿ ಅವರು ಕನ್ನಡದ ಪುಸ್ತಕಗಳನ್ನು ಪೊಲೀಸ್ ಠಾಣೆಗೆ ದಾನವಾಗಿ ಹಸ್ತಾಂತರಿಸಿದರು.
ಕರ್ನಾಟಕ ರಾಜ್ಯ ಕೃಷಿ ಮಾರುಕಟ್ಟೆ ಇಲಾಖೆ ಪಿಂಚಣಿದಾರರ ಸಂಘ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬಿ.ಆರ್. ಲಕ್ಷ್ಮಣರಾವ್ ಅವರಿಗೆ ‘ಕನ್ನಡ ಸಿರಿ ಪ್ರಶಸ್ತಿ’ ಹಾಗೂ ಎಂ.ಎನ್. ವೆಂಕಟಸುಬ್ಬರಾವ್ ಮತ್ತು ಎಚ್.ಎನ್. ಗೋಪಾಲ್ ಅವರಿಗೆ ‘ಪ್ರತಿಭಾಶ್ರೀ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
ಪ್ರತಿಮೆಗೆ ಮಾಲಾರ್ಪಣೆ: ಕನ್ನಡ ಗೆಳೆಯರ ಬಳಗವು ಕವಿ ಪ್ರತಿಮೆಗೆ ಮಾಲಾರ್ಪಣೆ–ಕನ್ನಡ ಚಿಂತನೆ ಕಾರ್ಯಕ್ರಮ ನಡೆಸಿತು. ತೀ.ನಂ.ಶ್ರೀ., ಕುವೆಂಪು, ಎಚ್. ನರಸಿಂಹಯ್ಯ ಹಾಗೂ ಬಿ.ಎಂ.ಶ್ರೀ. ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಕನ್ನಡ ಗಣಕ ಪರಿಷತ್ತಿನ ಕಾರ್ಯದರ್ಶಿ ಜಿ.ಎನ್. ನರಸಿಂಹಮೂರ್ತಿ, ಕರ್ನಾಟಕ ವಿಕಾಸ ರಂಗದ ಅಧ್ಯಕ್ಷ ವ.ಚ. ಚನ್ನೇಗೌಡ, ಬಳಗದ ಸಂಚಾಲಕ ರಾ.ನಂ. ಚಂದ್ರಶೇಖರ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳ ಕಲರವ: ಐಟಿಪಿಎಲ್ ರಸ್ತೆಯಲ್ಲಿರುವ ಸಿಎಂಆರ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕೆಂಪು ಮತ್ತು ಹಳದಿ ಬಣ್ಣದ ಹೂಗಳಿಂದ ಅಲಕೃಂತಗೊಂಡ ಭುವನೇಶ್ವರಿಯ ಭಾವಚಿತ್ರಕ್ಕೆ ಉಪ ಪ್ರಾಂಶುಪಾಲ ಬಿ.ನರಸಿಂಹ ಮೂರ್ತಿ ಪೂಜೆ ಸಲ್ಲಿಸಿ, ಧ್ವಜಾರೋಹಣ ನೆರವೇರಿಸಿದರು.
ಅನಿಕೇತನ ಬಿಡುಗಡೆ: ಬೆಂಗಳೂರು ನಗರ ವಿಶ್ವವಿದ್ಯಾಲಯ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ‘ಅನಿಕೇತನ’ ಮಾಸಪತ್ರಿಕೆ ಬಿಡುಗಡೆ ಮಾಡಲಾಯಿತು. ಕುಲಪತಿ ಪ್ರೊ.ರಮೇಶ್ ಬಿ., ‘ಶೀಘ್ರದಲ್ಲೇ ಸೆಂಟ್ರಲ್ ಕಾಲೇಜಿನ ಕನ್ನಡ ಸಂಘದ ಶತಮಾನೋತ್ಸವವನ್ನು ಆಚರಿಸಲಾಗುವುದು’ ಎಂದು ಘೋಷಿಸಿದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬಿಎಂಆರ್‌ಸಿಎಲ್, ಯಶವಂತಪುರದ ರಾಜರಾಜೇಶ್ವರಿ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆ, ಅಖಿಲ ಕರ್ನಾಟಕ ಕನ್ನಡ ಚಳವಳಿ ಕೇಂದ್ರ ಸಮಿತಿಯಿಂದಲೂ ರಾಜ್ಯೋತ್ಸವ ಆಚರಿಸಲಾಯಿತು.
ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ಕಾಯಂ ಶುಶ್ರೂಷಾಧಿಕಾರಿಗಳ ಸಂಘವು ‘ಬೆಂಗಳೂರಿನಲ್ಲಿ ಕನ್ನಡದ ಸ್ಥಿತಿಗತಿ’ ಎಂಬ ವಿಷಯದ ಬಗ್ಗೆ ಶುಶ್ರೂಷಾಧಿಕಾರಿಗಳಿಗೆ ಪ್ರಬಂಧ ಸ್ಪರ್ಧೆ ಹಮ್ಮಿಕೊಂಡಿತ್ತು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆದ ರಾಜ್ಯೋತ್ಸವ ಸಮಾರಂಭದಲ್ಲಿ ಸ್ಪರ್ಧೆಯ ವಿಜೇತರನ್ನು ಘೋಷಿಸಲಾಯಿತು. ಕವಿತಾ ಎಚ್.ಎನ್. ಪ್ರಥಮ ವೀಣಾ ಎಸ್. ದ್ವಿತೀಯ ಪ್ರತಿಭಾ ಕೆ.ಎನ್. ರೂಪಾ ಮತ್ತು ಸುಮಾ ಅವರು ತೃತೀಯ ಬಹುಮಾನಕ್ಕೆ ಭಾಜನರಾದರು. ಸಂಸ್ಥೆಯ ವೈದ್ಯಕೀಯ ಅಧೀಕ್ಷಕ ಡಾ.ದೀಪಕ್ ಸಂಘದ ಅಧ್ಯಕ್ಷ ಅನಂತಕುಮಾರ್ ಉಪಸ್ಥಿತರಿದ್ದರು. ಕಿದ್ವಾಯಿ ಸಂಸ್ಥೆ: ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕ ಡಾ.ಟಿ.ನವೀನ್ ಧ್ವಜಾರೋಹಣ ನೆರವೇರಿಸಿ ‘ಪ್ರತಿ ರೋಗಿಯೊಂದಿಗೆ ಕನ್ನಡದಲ್ಲಿ ಮಾತನಾಡಿ ಪ್ರೀತಿಯಿಂದ ನಡೆದುಕೊಳ್ಳೋಣ’ ಎಂದು ಹೇಳಿದರು. ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಬಿ.ಬಿ.ಸರೋಜಾ ಉಪಸ್ಥಿತರಿದ್ದರು.
ಜಯ ಕರ್ನಾಟಕ ಜನಪರ ವೇದಿಕೆಯು ಎಂ.ಜಿ. ರಸ್ತೆಯಲ್ಲಿ ಅದ್ದೂರಿ ಮೆರವಣಿಗೆ ನಡೆಸಿತು. ಭುವನೇಶ್ವರಿ ದೇವಿಯ ಭಾವಚಿತ್ರವನ್ನು ಹೂವಿನ ಪಲ್ಲಕ್ಕಿ ಮೇಲೆ ಇರಿಸಿ ನಡೆದ ಮೆರಣಿಗೆಯಲ್ಲಿ ಜಾನಪದ ಕಲಾ ತಂಡಗಳು ಹೆಜ್ಜೆ ಹಾಕಿದವು. ನೂರಾರು ಕನ್ನಡ ಪರ ಕಾರ್ಯಕರ್ತರು ಜೈಕಾರ ಕೂಗುತ್ತಾ ಹೆಜ್ಜೆ ಹಾಕಿದರು. ಆಟೊ ರಿಕ್ಷಾಗಳು ಬೃಹತ್ ಕನ್ನಡ ಧ್ವಜಗಳನ್ನು ಹೊತ್ತು ಸಾಗಿದವು. ಚಾಮರಾಜಪೇಟೆ ನಾಡಹಬ್ಬ ಕನ್ನಡ ರಾಜ್ಯೋತ್ಸವ ಸಮಿತಿ ವತಿಯಿಂದ ನಡೆದ ರಾಜ್ಯೋತ್ಸವ ಮೆರವಣಿಗೆಯಲ್ಲಿ ವೀರಗಾಸೆ ಪೂಜಾ ಕುಣಿತ ಸೇರಿ ವಿವಿಧ ಜಾನಪದ ಕಲಾ ತಂಡಗಳು ಪಾಲ್ಗೊಂಡಿದ್ದವು. ಉಮೇಶ್ ಮತ್ತು ತಂಡದಿಂದ ಸಂಜೆ ವಾದ್ಯಗೋಷ್ಠಿ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.