ADVERTISEMENT

ಕಿದ್ವಾಯಿಯಲ್ಲಿ ರೋಗಿಗಳಿಗೆ ‘ಹಸಿರು’ ಹೊದಿಕೆ

5 ಎಕರೆ ಪ್ರದೇಶದಲ್ಲಿ ವಿವಿಧ ಜಾತಿಯ ಹೂ–ಹಣ್ಣಿನ ಗಿಡ

ವರುಣ ಹೆಗಡೆ
Published 8 ಮೇ 2019, 19:21 IST
Last Updated 8 ಮೇ 2019, 19:21 IST
ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಹೊರನೋಟ
ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಹೊರನೋಟ   

ಬೆಂಗಳೂರು: ಕ್ಯಾನ್ಸರ್ ರೋಗಿಗಳಿಗೆ ಆಹ್ಲಾದಕರ ವಾತಾವರಣ ನಿರ್ಮಿಸಲು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಆವರಣದಲ್ಲಿ ಐದು ಎಕರೆ ಪ್ರದೇಶದಲ್ಲಿ ಉದ್ಯಾನ ನಿರ್ಮಾಣವಾಗಲಿದೆ.

23 ಎಕರೆ ಪ್ರದೇಶದಲ್ಲಿರುವಕಿದ್ವಾಯಿ ಆಸ್ಪತ್ರೆಗೆ ರಾಜ್ಯದ ವಿವಿಧೆಡೆಯಿಂದಪ್ರತಿನಿತ್ಯ ಸರಾಸರಿ 1,200 ಹೊರರೋಗಿಗಳು ಚಿಕಿತ್ಸೆಗೆ ಬರುತ್ತಾರೆ. ಅದೇ ರೀತಿ, 1,300 ಮಂದಿ ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಂಸ್ಥೆ ಆವರಣದಲ್ಲಿರುವಶಾಂತಿಧಾಮದ ಬಳಿ ಐದು ಎಕರೆ ಖಾಲಿ ಇದ್ದು, ಅಲ್ಲಿ ಗಿಡಗಳನ್ನು ಬೆಳೆಸಲಾಗುತ್ತದೆ.

ಈ ಸಂಬಂಧ ಅ.ನ. ಯಲ್ಲಪ್ಪ ರೆಡ್ಡಿ ನೇತೃತ್ವದ ‘ಬೆಂಗಳೂರು ಎನ್ವಿರಾನ್‌ಮೆಂಟ್ ಟ್ರಸ್ಟ್’ ಜತೆಗೆ ಸಂಸ್ಥೆ ಕೈ ಜೋಡಿಸಿದ್ದು, ಗಿಡಗಳನ್ನು ಟ್ರಸ್ಟ್ಪೂರೈಕೆ ಮಾಡಲಿದೆ.ನೆಲ್ಲಿ, ಬೇವು, ನೇರಳೆ, ಮಾವು, ಸಪೋಟ, ಸೀಬೆಹಣ್ಣು ಸೇರಿದಂತೆ ವಿವಿಧ ಹಣ್ಣು ಹಾಗೂ ಬಹುಪಯೋಗಿ ಗಿಡಗಳನ್ನು ನೆಡಲಾಗುತ್ತದೆ. ಅದೇ ರೀತಿ, ಸಂಪಿಗೆ, ಗುಲಾಬಿ, ದಾಸವಾಳ, ಸೇವಂತಿಗೆ ಸೇರಿದಂತೆ ವಿವಿಧ ಹೂವಿನ ಗಿಡಗಳು ಉದ್ಯಾನದಲ್ಲಿರಲಿದೆ. ಆಸ್ಪತ್ರೆಯ ಮುಂಭಾಗದಲ್ಲಿ ಅಲಂಕಾರಿಕ ಗಿಡಗಳನ್ನು ಬೆಳೆಸಲಾಗುತ್ತದೆ. ಒಟ್ಟು 5 ಸಾವಿರ ಗಿಡಗಳನ್ನು ನೆಡಲಾಗುತ್ತದೆ.

ADVERTISEMENT

’ರೋಗಿಗಳು ಮಾನಸಿಕವಾಗಿ ಕುಗ್ಗಿ, ಆತ್ಮಸ್ಥೈರ್ಯ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಆಸ್ಪತ್ರೆಯಲ್ಲಿ ಮನೆಯ ವಾತಾವರಣ ನಿರ್ಮಿಸಲು ಉದ್ಯಾನ ನಿರ್ಮಿಸುತ್ತಿದ್ದೇವೆ’ ಎಂದು ಸಂಸ್ಥೆಯ ನಿರ್ದೇಶಕ ಡಾ.ಸಿ.ರಾಮಚಂದ್ರ ತಿಳಿಸಿದರು.

‘ರೋಗಿಗಳು ಹಾಗೂ ಅವರ ಸಂಬಂಧಿಗಳು ಉದ್ಯಾನದಲ್ಲಿ ಹೆಜ್ಜೆ ಹಾಕಲು ಅನುಕೂಲವಾಗಲು ಪಾದಚಾರಿ ಪಥವನ್ನು ನಿರ್ಮಿಸಲಾಗುತ್ತದೆ. ಪ್ರಸ್ತುತ ಸಂಸ್ಥೆ ಆವರಣದಲ್ಲಿ ಎರಡು ಕೊಳವೆ ಬಾವಿಗಳಿವೆ. ಗಿಡಗಳಿಗೆ ನೀರು ಪೂರೈಸಲು ಮತ್ತೆ ಎರಡು ಕೊಳವೆಬಾವಿಗಳನ್ನು ಕೊರೆಸಲಾಗುತ್ತದೆ. ಗಿಡಗಳ ನಿರ್ವಹಣೆಗೆ 20 ಸಿಬ್ಬಂದಿ ನೇಮಕ ಮಾಡಲಾಗುತ್ತದೆ’ ಎಂದು ಅವರು ಹೇಳಿದರು.

ಮಕ್ಕಳಿಗೆ ಚಿಟ್ಟೆ ಉದ್ಯಾನ
‘ಕ್ಯಾನ್ಸರ್ ಪೀಡಿತ ಮಕ್ಕಳು ನೋವು ಮರೆತು ಎಲ್ಲರೊಂದಿಗೆ ಆಟವಾಡಬೇಕು. ಕಾಯಿಲೆಯ ನೋವಿನಿಂದ ಹೊರಬರಬೇಕೆಂಬಉದ್ದೇಶದಿಂದ ಪ್ರತ್ಯೇಕ ಚಿಟ್ಟೆ ಉದ್ಯಾನವನ್ನು ಶಾಂತಿಧಾಮದ ಬಳಿಯೇ ಮಾಡಲಾಗುತ್ತದೆ. ಚಿಟ್ಟೆಗಳನ್ನು ಆಕರ್ಷಿಸುವ ಗಿಡಗಳನ್ನು ಈ ಪ್ರದೇಶದಲ್ಲಿ ನೆಡಲಾಗುತ್ತದೆ’ ಎಂದು ಡಾ.ಸಿ.ರಾಮಚಂದ್ರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.