ADVERTISEMENT

ಕನ್ನಡಿಗರಿಗೆ ಅವಮಾನ: ಜಿಎಸ್ ಸೂಟ್ಸ್‌ ಹೋಟೆಲ್‌ ಪರವಾನಗಿ ರದ್ದು, ಬೀಗ

ವ್ಯವಸ್ಥಾಪಕ ಬಂಧನ, ಮಡಿವಾಳ ಠಾಣೆ ಪೊಲೀಸರಿಂದ ತನಿಖೆ

​ಪ್ರಜಾವಾಣಿ ವಾರ್ತೆ
Published 17 ಮೇ 2025, 15:57 IST
Last Updated 17 ಮೇ 2025, 15:57 IST
<div class="paragraphs"><p>ಜಿಎಸ್ ಸೂಟ್ಸ್‌ನ ಸಿಬ್ಬಂದಿಯನ್ನು ಮಡಿವಾಳ ಠಾಣೆಯ ಪೊಲೀಸರು ವಶಕ್ಕೆ ಪಡೆದುಕೊಂಡರು&nbsp;</p></div>

ಜಿಎಸ್ ಸೂಟ್ಸ್‌ನ ಸಿಬ್ಬಂದಿಯನ್ನು ಮಡಿವಾಳ ಠಾಣೆಯ ಪೊಲೀಸರು ವಶಕ್ಕೆ ಪಡೆದುಕೊಂಡರು 

   

ಬೆಂಗಳೂರು: ಡಿಜಿಟಲ್‌ ಬೋರ್ಡ್‌ನಲ್ಲಿ ಕನ್ನಡಿಗರ ಕುರಿತು ಅವಹೇಳನಕಾರಿ ಬರಹ ಪ್ರಕಟಿಸಿದ್ದ ತಾವರೆಕೆರೆ ಮುಖ್ಯರಸ್ತೆಯಲ್ಲಿ ಇರುವ ಜಿ.ಎಸ್‌. ಸೂಟ್ಸ್‌ ಹೋಟೆಲ್‌ನ ಪರವಾನಗಿಯನ್ನು ಬಿಬಿಎಂಪಿ ರದ್ದುಗೊಳಿಸಿದೆ. 

ಬೋರ್ಡ್‌ನಲ್ಲಿ ಪ್ರಕಟವಾಗಿದ್ದ ಬರಹವು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ಬಳಿಕ ಸ್ಥಳೀಯರು ಲಾಡ್ಜ್ ಎದುರು ಶನಿವಾರ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಹೋಟೆಲ್‌ ಮಾಲೀಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು.       

ADVERTISEMENT

ಆಕ್ರೋಶ ಹೆಚ್ಚಾದ ಬೆನ್ನಲ್ಲೇ ಸ್ಥಳಕ್ಕೆ ಭೇಟಿ ನೀಡಿದ್ದ ಮಡಿವಾಳ ಠಾಣೆಯ ಪೊಲೀಸರು, ಜಿ.ಎಸ್.ಸೂಟ್ಸ್‌ ಹೋಟೆಲ್‌ನ ಸಿಬ್ಬಂದಿ ಮಹಮ್ಮದ್‌, ಅಬ್ದುಲ್‌ ಸಮದ್ ಸೇರಿ ಐವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದರು. ಡಿಜಿಟಲ್‌ ಬೋರ್ಡ್‌, ಕಂಪ್ಯೂಟರ್‌ ಸೇರಿ ಇತರೆ ದಾಖಲೆಗಳನ್ನೂ ವಶಕ್ಕೆ ಪಡೆದುಕೊಂಡರು.

ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್‌) ಸೆಕ್ಷನ್‌ 196( ವೈಷಮ್ಯ ಮೂಡಿಸುವುದು) ಅಡಿ ಪ್ರಕರಣ ದಾಖಸಿಕೊಂಡು ಹೋಟೆಲ್‌ನ ವ್ಯವಸ್ಥಾಪಕನನ್ನು ಬಂಧಿಸಲಾಗಿದೆ. ಉಳಿದವರ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

‘ಹೋಟೆಲ್‌ನ ಪರವಾನಗಿ ರದ್ದುಗೊಳಿಸಿ, ಬೀಗ ಹಾಕಲಾಗಿದೆ’ ಎಂದು ಬಿಬಿಎಂಪಿಯ ಮುಖ್ಯ ಆಯುಕ್ತ ಎಂ.ಮಹೇಶ್ವರ ರಾವ್‌ ತಿಳಿಸಿದರು. 

ತಡರಾತ್ರಿ ಪ್ರಕಟವಾಗಿದ್ದ ಬರಹ: ಹೋಟೆಲ್‌ನ ಹೊರಭಾಗದಲ್ಲಿ ಡಿಜಿಟಲ್‌ ಬೋರ್ಡ್‌ ಅಳವಡಿಸಲಾಗಿತ್ತು. ಅದರಲ್ಲಿ ಶುಕ್ರವಾರ ತಡರಾತ್ರಿ ಕನ್ನಡಿಗರ ಕುರಿತ ಅವಹೇಳನಕಾರಿ ಬರಹವೊಂದು ಪ್ರಕಟವಾಗಿತ್ತು. ಅದನ್ನು ಗಮನಿಸಿದ್ದ ಸ್ಥಳೀಯರೊಬ್ಬರು, ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಮಾಧ್ಯಮ ‘ಎಕ್ಸ್‌’ನಲ್ಲಿ ಹಾಕಿದ್ದರು.

‘ಕೋರಮಂಗಲದ ಕಂಪನಿಯೊಂದು ಡಿಜಿಟಲ್ ಬೋರ್ಡ್ ಸಿದ್ಧ ಪಡಿಸಿಕೊಟ್ಟಿತ್ತು. ಮೇ 8ರ ಬಳಿಕ ಬೋರ್ಡ್‌ನಲ್ಲಿ ಬೇರೆ ಬೇರೆ ವಾಕ್ಯಗಳು ಡಿಸ್‌ ಪ್ಲೇ ಆಗುತ್ತಿದ್ದರಿಂದ ಕಂಪನಿಗೆ ಮಾಹಿತಿ ನೀಡಿದ್ದೆವು. ಕನ್ನಡಿಗರ ಕುರಿತು ಅವಾಚ್ಯ ವಾಕ್ಯ ಹೇಗೆ ಡಿಸ್‌ಪ್ಲೆ ಆಗಿದೆ ಎಂಬುದು ನಮಗೆ ಗೊತ್ತಿಲ್ಲ. ಹ್ಯಾಕ್‌ ಆಗಿರುವ ಸಾಧ್ಯತೆ ಇದೆ ಎಂಬುದಾಗಿ ಹೋಟೆಲ್‌ ಸಿಬ್ಬಂದಿ ವಿಚಾರಣೆಯ ವೇಳೆ ತಿಳಿಸಿದ್ದಾರೆ. ಬೋರ್ಡ್‌ ಸಿದ್ಧಪಡಿಸಿಕೊಟ್ಟವರಿಗೂ ನೋಟಿಸ್‌ ಜಾರಿ ಮಾಡಿ ವಿಚಾರಣೆ ನಡೆಸಲಾಗುವುದು’ ಎಂದು ಪೊಲೀಸರು ಹೇಳಿದರು.

‘ಕನ್ನಡ ಭಾಷೆ ಹಾಗೂ ಕನ್ನಡಿಗರಿಗೆ ಅಪಮಾನವಾದರೆ ಪ್ರಶ್ನೆ ಮಾಡಬೇಕು. ಕನ್ನಡ ಸಂಘಟನೆಗಳೇ ಪ್ರಶ್ನಿಸಬೇಕು ಎಂದು ಕಾಯದೇ ಸ್ಥಳೀಯರು ಕನ್ನಡ ವಿರೋಧಿಗಳ ವಿರುದ್ಧ ಹೋರಾಟ ನಡೆಸಬೇಕು’ ಎಂದು ಸ್ಥಳೀಯ ನಿವಾಸಿ ಶರತ್‌ ಆಗ್ರಹಿಸಿದರು.

‘ಹೋಟೆಲ್‌ ಮಾಲೀಕ ಎಲ್ಲಿಯವರು? ಯಾವಾಗ ಹೋಟೆಲ್‌ ಆರಂಭಿಸಿದ್ದರು ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ. ಪ್ರಾಥಮಿಕ ತನಿಖೆಯಂತೆ ಹೋಟೆಲ್‌ ಮಾಲೀಕ ಹೊರ ರಾಜ್ಯದವರು ಎಂಬುದು ಗೊತ್ತಾಗಿದೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

‘ತಪ್ಪಿತಸ್ಥರ ವಿರುದ್ಧ ಕ್ರಮ ಆಗಬೇಕು. ಜಿಎಸ್ ಸೂಟ್ಸ್ ಹೋಟೆಲ್‌ ಒಂದೇ ಅಲ್ಲ. ಬೇರೆ ಬೇರೆ ಭಾಗದಿಂದ ಬೆಂಗಳೂರಿಗೆ ಬಂದು ಹೋಟೆಲ್‌, ಲಾಡ್ಜ್‌ ತೆರೆದಿರುವ ವ್ಯಕ್ತಿಗಳಿಂದ ಕನ್ನಡಕ್ಕೆ ಅಪಮಾನ ಆಗುತ್ತಿದೆ. ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್‌ ಶೆಟ್ಟಿ ಆಗ್ರಹಿಸಿದರು.

ಹೋಟೆಲ್‌ ಮಾಲೀಕ ಹಾಗೂ ಸಿಬ್ಬಂದಿ ವಿರುದ್ಧ ಮಡಿವಾಳ ಠಾಣೆ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಾಲೀಕ ವಿದೇಶದಲ್ಲಿದ್ದು ನೋಟಿಸ್ ಜಾರಿ ಮಾಡಲಾಗಿದೆ.
-ಸಾರಾ ಫಾತಿಮಾ, ಡಿಸಿಪಿ ಆಗ್ನೇಯ ವಿಭಾಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.