
ನಗರದಲ್ಲಿ ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ಆಯೋಜಿಸಿದ್ದ ಸಾರ್ವಜನಿಕ ಶಿಕ್ಷಣ ಉಳಿಸಿ ಜನ ಸಮಾವೇಶದಲ್ಲಿ ಅಲ್ಲಮಪ್ರಭು ಬೆಟ್ಟದೂರು, ನಿರಂಜನಾರಾಧ್ಯ, ಮಾವಳ್ಳಿ ಶಂಕರ್, ಎಲ್. ಎನ್. ಮುಕುಂದರಾಜ್ ಮಕ್ಕಳೊಂದಿಗೆ ಮಾತನಾಡಿದರು.
ಪ್ರಜಾವಾಣಿ ಚಿತ್ರ
ಬೆಂಗಳೂರು: ‘ರಾಜ್ಯ ಸರ್ಕಾರವು ಕೆಪಿಎಸ್ ಮ್ಯಾಗ್ನೆಟ್ ಶಾಲೆ ಯೋಜನೆಯಡಿ 40 ಸಾವಿರ ಸರ್ಕಾರಿ ಶಾಲೆಗಳನ್ನು ಮುಚ್ಚಲು ಹೊರಟಿರುವುದು ಶಿಕ್ಷಣ ವ್ಯವಸ್ಥೆ ವಿನಾಶದ ನೀಲನಕ್ಷೆಯಂತಿದೆ. ಈ ಜನವಿರೋಧಿ ಯೋಜನೆ ಕೈಬಿಡಬೇಕು. ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ಆರಂಭಿಸಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಒತ್ತು ನೀಡಬೇಕು’ ಎಂದು ಸಾರ್ವಜನಿಕ ಶಿಕ್ಷಣ ಉಳಿಸಿ ಜನ ಸಮಾವೇಶ ಆಗ್ರಹಿಸಿದೆ.
ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ಗುರುವಾರ ಗಾಂಧಿಭವನದಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ರಾಜ್ಯ ಸರ್ಕಾರದ ಶಿಕ್ಷಣ ಯೋಜನೆಗಳ ಕುರಿತು ಆಕ್ರೋಶ ವ್ಯಕ್ತವಾಯಿತು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ, ‘ವಿಲೀನದ ಹೆಸರಿನಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುವ ಪ್ರಯತ್ನ ನಡೆಸಿರುವುದನ್ನು ಒಪ್ಪಲಾಗದು. ಶಿಕ್ಷಣ ತಜ್ಞರು ನೀಡಿದ ಸೂಚನೆಗಳಿಗೆ ಬೆಲೆಯೇ ಇಲ್ಲದಾಗಿದೆ. ಅವರ ಅಭಿಪ್ರಾಯಗಳನ್ನಾಧರಿಸಿ ಸಾಧಕ–ಬಾಧಕಗಳನ್ನು ಸರ್ಕಾರ ಪರಿಶೀಲಿಸಬೇಕು’ ಎಂದು ಒತ್ತಾಯಿಸಿದರು.
‘ಶಾಲೆ ಉಳಿಸಲು ಬೀದಿಗೆ ಇಳಿಯುವುದಕ್ಕೂ ಹಿಂಜರಿಯಬಾರದು’ ಎಂದು ಹೇಳಿದರು.
ಶಿಕ್ಷಣ ತಜ್ಞ ವಿ.ಪಿ.ನಿರಂಜನಾರಾಧ್ಯ ಮಾತನಾಡಿ, ‘ರಾಜ್ಯ ಸರ್ಕಾರವು ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸುವುದಿಲ್ಲ ಎಂದು ಹೇಳಿ, ರಾಜ್ಯ ಶಿಕ್ಷಣ ನೀತಿ ರೂಪಿಸಲು ಸಮಿತಿ ರಚಿಸಿ ವರದಿಯನ್ನು ಪಡೆದಿದೆ. ಆದರೆ ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳ ಹೆಸರಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿರುವ ಅಂಶಗಳನ್ನೇ ಜಾರಿಗೊಳಿಸಲು ಹೊರಟಿದೆ. ಇನ್ನೊಂದು ಕಡೆ ವರದಿ ಪಡೆದು ಐದು ತಿಂಗಳಾದರೂ ಸಾರ್ವಜನಿಕ ಚರ್ಚೆಗೆ ಏಕೆ ಮುಂದಾಗಿಲ್ಲ’ ಎಂದು ಪ್ರಶ್ನಿಸಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಎ.ಮುರಿಗೆಪ್ಪ ಮಾತನಾಡಿ, ‘ಸರ್ಕಾರಿ ಶಾಲೆ ಬಲಪಡಿಸಬೇಕು. ಮಕ್ಕಳಿಗೆ ಬಸ್ ವ್ಯವಸ್ಥೆ ಕಲ್ಪಿಸಬೇಕು ಎನ್ನುವ ಶಿಫಾರಸುಗಳಿದ್ದರೂ ಅದನ್ನು ಜಾರಿಗೊಳಿಸಿಲ್ಲ’ ಎಂದರು.
ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜ್ ಮಾತನಾಡಿ, ‘ಸಜ್ಜನರು ಮೌನವಹಿಸಿಕೊಂಡಿದ್ದರೆ ದುಷ್ಟರ ಸಂಖ್ಯೆ ಹೆಚ್ಚಿ ಅನಾಹುತಗಳು ಆಗಲಿವೆ. ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಎನ್ನುವ ಪಕ್ಷ ರಾಜಕಾರಣಕ್ಕಿಂತ ಎಲ್ಲಾ ಪಕ್ಷಗಳಲ್ಲೂ ಮನುವಾದ ಇರುವುದರಿಂದಲೇ ವಿಲೀನದ ನೆಪದಲ್ಲಿ ಶಾಲೆಗಳನ್ನು ಮುಚ್ಚಿ ಶಿಕ್ಷಣ ವ್ಯವಸ್ಥೆ ಹಾಳು ಮಾಡುವ ಪ್ರಯತ್ನ ನಡೆಯುತ್ತಿದೆ’ ಎಂದರು.
ಸಮಿತಿ ಸಂಚಾಲಕ ವಿ.ಎನ್.ರಾಜಶೇಖರ್ ಮಾತನಾಡಿದರು. ಸಮಿತಿ ಅಧ್ಯಕ್ಷ ಅಲ್ಲಮಪ್ರಭು ಬೆಟ್ಟದೂರು, ವಿಶ್ರಾಂತ ಕುಲಪತಿ ಎ.ಎಚ್.ರಾಜಾಸಾಬ್, ದಲಿತ ಸಂಘರ್ಷ ಸಮಿತಿಯ ಮಾವಳ್ಳಿ ಶಂಕರ್, ಶಿಕ್ಷಣ ತಜ್ಞರಾದ ಎ.ಆರ್.ವಾಸವಿ, ಫ್ರಾನ್ಸಿಸ್ ಅಸ್ಸಿಸಿ ಅಲ್ಮೇಡಾ, ಸುಭಾಷ್, ರಾಜೇಶ್ ಭಟ್, ಎಸ್.ಜಿ.ಮಹೇಶ್ ಉಪಸ್ಥಿತರಿದ್ದರು.
‘ಸದನದಲ್ಲಿ ಸಿ.ಎಂ ಸ್ಪಷ್ಟನೆ ನೀಡಲಿ’
‘ಕರ್ನಾಟಕದಲ್ಲಿ ಶಾಲೆಗಳನ್ನು ಮುಚ್ಚುವುದಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸದನದಲ್ಲಿ ಹೇಳುತ್ತಾರೆ. ಆದರೆ ಚನ್ನಪಟ್ಟಣದಲ್ಲಿ ಏಳು ಶಾಲೆ ಮುಚ್ಚುವ ಜತೆಗೆ ಪೀಠೋಪಕರಣ ಸ್ಥಳಾಂತರಿಸಲು ಕ್ಷೇತ್ರ ಶಿಕ್ಷಣಾಧಿಕಾರಿ ಆದೇಶಿಸಿದ್ದಾರೆ. ಸರ್ಕಾರಿ ಶಾಲೆಗಳ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದನದಲ್ಲೇ ಸ್ಪಷ್ಟೀಕರಣ ನೀಡಬೇಕು. ಸಚಿವರು ಸುಳ್ಳು ಹೇಳುತ್ತಿರುವುದು ನಿಜವಾದರೆ ಅವರನ್ನು ಸಂಪುಟದಿಂದ ಕೈ ಬಿಡಬೇಕು’ ಎಂದು ವಿ.ಪಿ.ನಿರಂಜನಾರಾಧ್ಯ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.