
ಬೆಂಗಳೂರು: ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಜಿಕೆವಿಕೆ ಆವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳಕ್ಕೆ ಮೊದಲ ದಿನವಾದ ಗುರುವಾರ ರೈತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿದ್ದರು.
ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ರೈತರಿಗಾಗಿ ಈ ಬಾರಿ ಧಾನ್ಯ ಜೋಳ (ಸಿಎನ್‌ಜಿಎಸ್–1), ಸೂರ್ಯಕಾಂತಿ (ಕೆಬಿಎಸ್ಎಚ್–88) ಹರಳು (ಬಿಸಿಎಚ್–162), ಕಪ್ಪು ಅರಿಶಿಣ (ಸಿಎಚ್ಎನ್‌ಬಿಟಿ–1) ಹಾಗೂ ಅರಿಶಿಣ (ಐಐಎಸ್‌ಆರ್ ಪ್ರತಿಭಾ) ಎಂಬ ಐದು ಹೊಸ ತಳಿಗಳನ್ನು ಅಭಿವೃದ್ಧಿಪಡಿಸಿದ್ದು, ಈ ಪ್ರಾತ್ಯಕ್ಷಿಕೆ ತಾಕುಗಳಿಗೆ ರೈತರು, ವಿದ್ಯಾರ್ಥಿಗಳು ಭೇಟಿ ವಿಜ್ಞಾನಿಗಳಿಂದ ಮಾಹಿತಿ ಪಡೆದುಕೊಂಡರು.
ಮೇಳಕ್ಕೆ ವಿವಿಧ ಜಿಲ್ಲೆಗಳಿಂದ ಬಂದಿದ್ದ ಶಾಲಾ–ಕಾಲೇಜಿನ ವಿದ್ಯಾರ್ಥಿಗಳು ಜಿಕೆವಿಕೆ ಆವರಣದಲ್ಲಿ ಬೆಳೆದಿರುವ ಆಕರ್ಷಕ ಸೂರ್ಯಕಾಂತಿಯ ತಾಕುಗಳಲ್ಲಿ ನಿಂತುಕೊಂಡು ಸೆಲ್ಫಿಗೆ ಪೋಸ್ ನೀಡುತ್ತಿದ್ದರೆ, ಇತ್ತ ರೈತರು ಕೃಷಿಯಲ್ಲಿನ ಹೊಸ ತಂತ್ರಜ್ಞಾನದ ಹುಡುಕಾಟದಲ್ಲಿ ನಿರತರಾಗಿದ್ದರು.
ಒಂದೇ ಸೂರಿನಡಿ ಆಲಂಕಾರಿಕ ಮೀನುಗಳ ಪ್ರದರ್ಶನ ಮತ್ತು ಮಾರಾಟ, ಹತ್ತಾರು ತಳಿಗಳ ಹಸು, ದನಗಳು. ಕುರಿ, ಮೇಕೆ ಹಾಗೂ ಕೋಳಿಗಳನ್ನು ನೋಡಲು ಶಾಲಾ–ಕಾಲೇಜಿನ ಮಕ್ಕಳು ಸೇರಿದಂತೆ ಸಾರ್ವಜನಿಕರು ಮುಗಿಬಿದ್ದಿದ್ದರು.
ಫಲಪುಷ್ಪ ಪ್ರದರ್ಶನದಲ್ಲಿ ಬಗೆಬಗೆಯ ಹೂವುಗಳಿಂದ ರೂಪಿಸಿರುವ ಆನೆ, ಕಡವೆ, ಮೀನು, ಟಗರು, ಟ್ರ್ಯಾಕ್ಟರ್ ಆಕರ್ಷಕವಾಗಿವೆ. ಕರ್ನಾಟಕ ಬಾವುಟದ ಹೂವಿನ ಅಲಂಕಾರವು ಗಮನ ಸೆಳೆಯಿತು. ತೋಟಗಾರಿಕೆ ಬೆಳೆಗಳ ಮಾಹಿತಿಯೂ ಈ ವಿಭಾಗದಲ್ಲಿದೆ.
ಜರ್ಮನ್ ಗ್ರೇ ಜೈಂಟ್ ಅಂಗೋರ್ ತಳಿಯ ಮೊಲವನ್ನು ವಿದ್ಯಾರ್ಥಿಗಳು, ಮಕ್ಕಳು ಕುತೂಹಲದಿಂದ ವೀಕ್ಷಿಸಿದರು.
‘ಈ ತಳಿಯ ಮೊಲಗಳು ಜರ್ಮನಿ ದೇಶದ ಶೀತವಲಯದ ವಾತಾವರಣದಲ್ಲಿ ಮಾತ್ರ ಕಂಡು ಬರುತ್ತವೆ. ಇದನ್ನು ಸಾಕಾಣಿಕೆ ಮಾಡಬೇಕಾದರೆ ಶೀತವಲಯದ ವಾತಾವರಣ ನಿರ್ಮಿಸಬೇಕು. ಇದಕ್ಕಾಗಿ ಎ.ಸಿ ಹಾಗೂ ಫ್ಯಾನ್ ಇರಬೇಕು. ಆಹಾರ ಸೇವನೆ ಕಡಿಮೆ ಮಾಡುವುದರಿಂದ ತೂಕವೂ ಕಡಿಮೆ ಇದೆ. ಜರ್ಮಿನಿಯಿಂದ ಭಾರತಕ್ಕೆ ತೆಗೆದುಕೊಂಡು ಬರಲು ₹15 ಸಾವಿರ ವೆಚ್ಚ ಮಾಡಿದ್ದೇನೆ. ₹16 ಸಾವಿರ 18 ಸಾವಿರ ಬೆಲೆ ಬಂದರೆ ಮಾರಾಟ ಮಾಡುತ್ತೇನೆ’ ಎಂದು ರೈತ ಚಂದನ್ ತಿಳಿಸಿದರು.
ಅಂಕಿ ಅಂಶಗಳು
8.51 ಲಕ್ಷ: ಕೃಷಿ ಮೇಳಕ್ಕೆ ಭೇಟಿ ನೀಡಿದ ಜನರು
11,086: ರಿಯಾಯಿತಿ ದರದ ಭೋಜನ ಸವಿದವರು
₹62 ಲಕ್ಷ: ಕೃಷಿ ಮೇಳದಲ್ಲಿ ನಡೆದಿರುವ ವಹಿವಾಟು
ಮೇಳ ಉದ್ಘಾಟಿಸಿದ ಚಲುವರಾಯಸ್ವಾಮಿ
ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ಜಿಕೆವಿಕೆ ಆವರಣದಲ್ಲಿ ಆಯೋಜಿಸಿರುವ ನಾಲ್ಕು ದಿನಗಳ ಕೃಷಿ ಮೇಳವನ್ನು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಗುರುವಾರ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ‘ಲ್ಯಾಬ್ ಟು ಲ್ಯಾಂಡ್ ಘೋಷ ವಾಕ್ಯದಡಿಯಲ್ಲಿ ವಿಜ್ಞಾನಿಗಳ ಶ್ರಮ ಮತ್ತು ರೈತರ ಅನುಭವ ಒಟ್ಟಿಗೆ ಸೇರಿದಾಗ ಕೃಷಿ ಕ್ರಾಂತಿಯಾಗಲಿದೆ. ಇಂತಹ ವೈಶಿಷ್ಟ್ಯಗಳಿಗೆ ಈ ಕೃಷಿ ಮೇಳ ಸಾಕ್ಷಿಯಾಗಿದೆ. ಹವಾಮಾನ ಬದಲಾವಣೆ ನೀರಿನ ಕೊರತೆ ದೊಡ್ಡ ಸವಾಲುಗಳಾಗಿದ್ದು ಇವುಗಳನ್ನು ನಾವು ವೈಜ್ಞಾನಿಕವಾಗಿ ಎದುರಿಸಲು ಸಜ್ಜಾಗಬೇಕು’ ಎಂದು ಕರೆ ನೀಡಿದರು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕೃಷಿ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್. ಸೆಲ್ವಕುಮಾರ್ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಎಸ್.ವಿ. ಸುರೇಶ್ ಕುಲಸಚಿವ ನಾರಾಯಣಸ್ವಾಮಿ ಆಡಳಿತ ಮಂಡಳಿ ಸದಸ್ಯರಾದ ಟಿ.ಕೆ. ಪ್ರಭಾಕರ ಶೆಟ್ಟಿ ಎಚ್.ಎಲ್. ಹರೀಶ್ ಬಿ.ಎಸ್. ಉಲ್ಲಾಸ್ ವೈ.ಎನ್. ಶಿವಲಿಂಗಯ್ಯ ದಿನೇಶ್ ಹಾಗೂ ಎಂ. ಚಂದ್ರೇಗೌಡ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.