ADVERTISEMENT

krishi Mela 2025: ಆಧುನಿಕ ಬೇಸಾಯದ ಭರಪೂರ ಮಾಹಿತಿ

ರೈತರು, ವಿದ್ಯಾರ್ಥಿಗಳು, ನಗರವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2025, 23:07 IST
Last Updated 15 ನವೆಂಬರ್ 2025, 23:07 IST
<div class="paragraphs"><p>ಜಿಕೆವಿಕೆ ಆವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳಕ್ಕೆ ಶನಿವಾರ ಭೇಟಿ ನೀಡಿದ್ದ ಜನಸ್ತೋಮ</p></div>

ಜಿಕೆವಿಕೆ ಆವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳಕ್ಕೆ ಶನಿವಾರ ಭೇಟಿ ನೀಡಿದ್ದ ಜನಸ್ತೋಮ

   

ಪ್ರಜಾವಾಣಿ ಚಿತ್ರಗಳು: ರಂಜು ಪಿ

ಬೆಂಗಳೂರು: ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (ಜಿಕೆವಿಕೆ) ಆವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳಕ್ಕೆ 3ನೇ ದಿನವಾದ ಶನಿವಾರ 15.87 ಲಕ್ಷ ಜನರು ಭೇಟಿ ನೀಡಿದರು.

ADVERTISEMENT

ರೈತರಷ್ಟೇ ಅಲ್ಲದೆ ಸಾರ್ವಜನಿಕರು ಕುಟುಂಬದ ಸದಸ್ಯರು, ಸ್ನೇಹಿತರೊಂದಿಗೆ ಮೇಳಕ್ಕೆ ಭೇಟಿ ನೀಡಿದರು. ಶಾಲಾ–ಕಾಲೇಜು ವಿದ್ಯಾರ್ಥಿಗಳು ಅಲ್ಲಿನ ವಿಶೇಷತೆಗಳನ್ನು ಕಂಡು ಬೆರಗಾದರು. ಕಾಲಿಡಲು ಆಗದಷ್ಟು ದಟ್ಟಣೆಯಿದ್ದರೂ ವೃದ್ಧರು ಉತ್ಸಾಹದಿಂದಲೇ ಸುತ್ತಾಡಿದರು. ಅಲ್ಲಲ್ಲಿ ಆಗಾಗ್ಗೆ ಕೆಲವರು ವಿಶ್ರಾಂತಿ ಪಡೆದರು. ನಂತರ ಮತ್ತೆ ಹುರುಪಿನಿಂದ ಮುನ್ನಡೆದರು.

ರೈತರು, ವಿದ್ಯಾರ್ಥಿಗಳು ಹಾಗೂ ನಗರವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ರೈತರು ಎಲ್ಲ ಮಳಿಗೆಗಳನ್ನು ವೀಕ್ಷಿಸಿ, ಮಾಹಿತಿ ಪಡೆಯುತ್ತಿದ್ದರು. ಕೃಷಿ ಆಸಕ್ತರು ಬೆಳಿಗ್ಗೆಯಿಂದಲೇ ತಂಡೋಪತಂಡವಾಗಿ ಆಗಮಿಸಿ ವಿವಿಧ ಮಳಿಗೆಗಳು, ಪ್ರದರ್ಶನ ತಾಕುಗಳಿಗೆ ಭೇಟಿ ನೀಡಿ ತಮಗೆ ಬೇಕಾದ ಮಾಹಿತಿ ಪಡೆದುಕೊಳ್ಳುವಲ್ಲಿ ನಿರತರಾಗಿದ್ದರು.

ಕೃಷಿ ಕ್ಷೇತ್ರದಲ್ಲಿನ ಸಂಶೋಧನೆಗಳ ಬಗ್ಗೆ ಮಾಹಿತಿ ನೀಡುವ ಮಳಿಗೆಗಳು, ತಾರಸಿ ತೋಟ ನಿರ್ಮಿಸುವುದು, ನಗರ ತೋಟಗಾರಿಕೆ ಹಾಗೂ ಸಿರಿಧಾನ್ಯಗಳಿಂದ ತಯಾರಿಸಿದ ಮೌಲ್ಯವರ್ಧಿತ ಉತ್ಪನ್ನಗಳು ಹಾಗೂ ನರ್ಸರಿ ಬಳಿ ಸಸಿಗಳನ್ನು ಖರೀದಿಸಲು ಸಾವಿರಾರು ಜನ ಸಾಲುಗಟ್ಟಿ ನಿಂತಿದ್ದರು. 

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಆಹಾರ ವಿಜ್ಞಾನ ಮತ್ತು ಪೋಷಣೆ ವಿಭಾಗವು ಬಿಳಿ ರಾಗಿ ಹಾಗೂ ಸ್ಟೀವಿಯಾ ಬಳಸಿ ಸಕ್ಕರೆ ಹಾಗೂ ಮೈದಾ ಇಲ್ಲದೆಯೇ ಬೇಕರಿ ಉತ್ಪನ್ನಗಳಾದ ಬಿಸ್ಕತ್ತು, ಕುಕೀಸ್‌ ಮತ್ತು ರಸ್ಕ್‌ ಸೇರಿದಂತೆ ಹಲವಾರು ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿದ್ದು, ನಗರವಾಸಿಗಳು ಈ ಉತ್ಪನ್ನಗಳ ತಯಾರಿಕೆಯ ಬಗ್ಗೆ ವಿಜ್ಞಾನಿಗಳಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದರು. ಇದರ ಜೊತೆಗೆ ಸ್ವಸಹಾಯ ಸಂಘಗಳು ಸಿರಿಧಾನ್ಯಗಳಿಂದ ತಯಾರಿಸಿದ್ದ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಇತ್ತು. ನವಣೆ, ಬರಗು, ರಾಗಿ ಮೌಲ್ಯವರ್ಧಿತ ಉತ್ಪನ್ನಗಳನ್ನು ನಗರವಾಸಿಗಳು ಖರೀದಿಸಿದರು.

ಜಿಕೆವಿಕೆ ಆವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳದ ಆಧುನಿಕ ಕೃಷಿ ಯಂತ್ರೋಪಕರಣಗಳನ್ನು ಪ್ರದರ್ಶಿಸಿದ ಮಳಿಗೆಗಳಿಗೆ ರೈತರು ಭೇಟಿ ನೀಡಿ ವೀಕ್ಷಿಸಿದರು 

ಕೃಷಿ ಯಂತ್ರೋಪಕರಣ ಮಳಿಗೆಗಳಿಗೆ ರೈತರ ಲಗ್ಗೆ: ಕೃಷಿ ಯಂತ್ರೋಪಕರಣಗಳ ಪ್ರದರ್ಶನ, ಮಾರಾಟ ಮಾಡುವುದಕ್ಕಾಗಿ ಪ್ರತ್ಯೇಕ ಮಳಿಗೆಗಳನ್ನು ನಿರ್ಮಿಸಲಾಗಿದೆ. ಇದರಲ್ಲಿ ಎಲೆಕ್ಟ್ರಿಕ್‌ ಆಧಾರಿತ, ಟ್ರ್ಯಾಕ್ಟರ್, ರೋಟೊವೇಟರ್, ಮೆಕ್ಕೆ ಜೋಳ ರಾಶಿ ಮಾಡುವ ಬೃಹತ್‌ ಯಂತ್ರಗಳು, ಕಳೆ ತೆಗೆಯುವ ಆಧುನಿಕ ಯಂತ್ರಗಳು, ಗಿರಣಿಗಳು, ಸೋಲಾರ್ ಆಧಾರಿತ ಪಂಪ್‌ಸೆಟ್‌ಗಳ ಬಗ್ಗೆ ರೈತರು ಮಾಹಿತಿ ಪಡೆದುಕೊಳ್ಳುತ್ತಿದ್ದರು. 

ತೋಟಗಾರಿಕೆ ಬೆಳೆಗಳಿಗೆ ತಗಲುವ ರೋಗಗಳು ಹಾಗೂ ಹವಾಮಾನ ಅನಿಶ್ಚಿತತೆಯ ಬಗ್ಗೆ ಮಾಹಿತಿ ನೀಡುವ ‘ಇಂಟರ್‌ನೆಟ್‌ ಆಫ್‌ ಥಿಂಗ್ಸ್‌ (ಐಒಟಿ)’ ಎಂಬ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಯಂತ್ರ, ಮೇಳದಲ್ಲಿ ರೈತರ ಗಮನ ಸೆಳೆಯಿತು.

ಕೃಷಿ ಮೇಳದಲ್ಲಿ ಹಲವಾರು ರಾಷ್ಟ್ರೀಯ ಬ್ಯಾಂಕ್‌ಗಳ ಮಳಿಗೆಗಳನ್ನು ತೆರೆಯಲಾಗಿದೆ. ಈ ಬ್ಯಾಂಕ್‌ಗಳಲ್ಲಿ ರೈತರಿಗೆ, ನವೋದ್ಯಮಗಳಿಗೆ ಇರುವ ಸಾಲ ಸೌಲಭ್ಯಗಳ ಕುರಿತು ಸಿಬ್ಬಂದಿ ಮಾಹಿತಿ ಹಂಚಿಕೊಳ್ಳುತ್ತಿದ್ದರು. ರಾಜ್ಯದ ವಿವಿಧ ಪ್ರದೇಶಗಳಿಂದ ಬಂದಿದ್ದ ರೈತರು ಸಾಲ ಸೌಲಭ್ಯಗಳನ್ನು ಪಡೆಯುವ ವಿಧಾನಗಳ ಬಗ್ಗೆ ಮಾಹಿತಿ ಪಡೆದುಕೊಂಡರು.

ಕೃಷಿ ಮೇಳದಲ್ಲಿ ಪ್ರದರ್ಶನ ಹಾಗೂ ಮಾರಾಟಕ್ಕೆ ಇಟ್ಟಿರುವ ಸಸಿಗಗಳನ್ನು ಸಾರ್ವಜನಿಕರು ಖರೀದಿಸಿದರು 
ಶೌಚಾಲಯಗಳ ಕೊರತೆ
ಕೃಷಿ ಮೇಳದಲ್ಲಿ ಸಮರ್ಪಕ ಶೌಚಾಲಯ ವ್ಯವಸ್ಥೆ ಇಲ್ಲದಿರುವ ಕಾರಣ ವೃದ್ಧರು, ಮಹಿಳೆಯರು ಸೇರಿದಂತೆ ಸಾರ್ವಜನಿಕರು ಪರದಾಡಿದರು. ಮೇಳ ನಡೆಯುವ ಆವರಣ ದೂಳುಮಯವಾಗಿತ್ತು. ಸಾರ್ವಜನಿಕರು ಮಾಸ್ಕ್‌ಗಳನ್ನು ಧರಿಸಿ, ಮಳಿಗೆಗಳಿಗೆ ಭೇಟಿ ನೀಡುತ್ತಿದ್ದರು.  

ಪುಂಗನೂರು ಗಿಡ್ಡ ಹಸು ಆಕರ್ಷಣೆ

ಪುಂಗನೂರು ಗಿಡ್ಡ ತಳಿಯ ಚಿಕ್ಕ ಗಾತ್ರದ ಹಸು ಕೃಷಿ ಮೇಳದ ಮತ್ತೊಂದು ಆಕರ್ಷಣೆ ಆಗಿದ್ದು ಕಡಿಮೆ ಎತ್ತರ ಮತ್ತು ಕಡಿಮೆ ತೂಕದ ಕಾರಣದಿಂದ ಇವುಗಳ ಮುಂಭಾಗದಲ್ಲಿ ನಿಂತುಕೊಂಡು ಮಕ್ಕಳು ಮಹಿಳೆಯರು ಫೋಟೊ ತೆಗೆಸಿಕೊಳ್ಳುತ್ತಿದ್ದರು.  ‘ಪಂಗನೂರು ತಳಿಯ ಹಸು ಔಷಧೀಯ ಗುಣ ಇರುವ ಹಾಲನ್ನು ನೀಡುತ್ತದೆ. ತಿರುಪತಿಯ ವೆಂಕಟರಮಣಸ್ವಾಮಿಯ ಮೂರ್ತಿಗೆ ಇದರ ಹಾಲು ಮತ್ತು ತುಪ್ಪದಿಂದ ಅಭಿಷೇಕ ಮಾಡಲಾಗುತ್ತದೆ. ಈ ಹಸುವಿನ ಒಂದು ಲೀಟರ್‌ ಹಾಲಿಗೆ ₹150 ಇದೆ. ಈ ತಳಿಗೆ ಹೆಚ್ಚು ಬೇಡಿಕೆ ಇದ್ದು ಒಂದಕ್ಕೆ ₹3 ಲಕ್ಷ ಬೆಲೆ ಇದೆ’ ಎಂದು ಕೋಲಾರ ಜಿಲ್ಲೆಯ ರೈತ ವೆಂಕಟೇಶಗೌಡ ತಿಳಿಸಿದರು.

ಪಂಗನೂರು ಗಿಡ್ಡ ತಳಿ ಹಸುಗಳು

ಅಂಕಿ ಅಂಶಗಳು

15.87 ಲಕ್ಷ: ಕೃಷಿ ಮೇಳಕ್ಕೆ ಮೂರನೇ ಭೇಟಿ ನೀಡಿದ ಜನರು

15,572 :ರಿಯಾಯಿತಿ ದರದಲ್ಲಿ ಭೋಜನ ಸವಿದವರು

₹1.62 ಕೋಟಿ: ಕೃಷಿ ಮೇಳದಲ್ಲಿ ನಡೆದಿರುವ ಮೂರನೇ ದಿನದ ವಹಿವಾಟು