ADVERTISEMENT

ಕೃಷಿ ಮೇಳ: ಕೃಷಿ ಬಳಕೆಗೆ ಬಹೂಪಯೋಗಿ ಡ್ರೋನ್‌

ಜಿಕೆವಿಕೆಯ ಕೃಷಿ ಮಾರುಕಟ್ಟೆ ವಿಭಾಗದ ಹಳೆಯ ವಿದ್ಯಾರ್ಥಿಗಳಿಂದ ಆವಿಷ್ಕಾರ

ಖಲೀಲಅಹ್ಮದ ಶೇಖ
Published 4 ನವೆಂಬರ್ 2022, 21:26 IST
Last Updated 4 ನವೆಂಬರ್ 2022, 21:26 IST
ಜಿಕೆವಿಕೆ ಹಳೆಯ ವಿದ್ಯಾರ್ಥಿಗಳು ತಯಾರಿಸಿರುವ ಬಹೂಪಯೋಗಿ ಡ್ರೋನ್ –ಪ್ರಜಾವಾಣಿ ಚಿತ್ರ/ಕೃಷ್ಣಕುಮಾರ್ ಪಿ.ಎಸ್.
ಜಿಕೆವಿಕೆ ಹಳೆಯ ವಿದ್ಯಾರ್ಥಿಗಳು ತಯಾರಿಸಿರುವ ಬಹೂಪಯೋಗಿ ಡ್ರೋನ್ –ಪ್ರಜಾವಾಣಿ ಚಿತ್ರ/ಕೃಷ್ಣಕುಮಾರ್ ಪಿ.ಎಸ್.   

ಬೆಂಗಳೂರು: ಕೃಷಿ ಚಟುವಟಿಕೆಯಲ್ಲಿ ಡ್ರೋನ್‌ಗಳ ಪರಿಣಾಮಕಾರಿ ಬಳಕೆ ಮಾಡುವುದರಿಂದ ರೈತರ ಶ್ರಮ, ಸಮಯದ ಉಳಿತಾಯ, ವೆಚ್ಚವನ್ನು ತಗ್ಗಿಸುವುದು ಸಾಧ್ಯವಿದೆ. ಈ ನಿಟ್ಟಿನಲ್ಲಿ ಜಿಕೆವಿಕೆ ಕೃಷಿ ಮಾರುಕಟ್ಟೆ ವಿಭಾಗದ ಹಳೆಯ ವಿದ್ಯಾರ್ಥಿಗಳು ₹7 ಲಕ್ಷ ಮೌಲ್ಯದ ಬಹೂಪಯೋಗಿ ಡ್ರೋನ್‌ ಆವಿಷ್ಕರಿಸಿದ್ದಾರೆ.

ಜಿಕೆವಿಕೆಯ ಹಳೆಯ ವಿದ್ಯಾರ್ಥಿಗಳಾದ ಹವ್ಯಾಸ್‌ ಮತ್ತು ನಿತಿನ್‌ ಸಿಂಗ್‌ ಅವರು ‘ಬಿಗಿಲ್‌ ಅಗ್ರಿಟೆಕ್‌’ ಎಂಬ ಕಂಪನಿಯನ್ನು ಸ್ಥಾಪಿಸಿ ಈ ಡ್ರೋನ್ ಅಭಿವೃದ್ಧಿಪಡಿಸಿದ್ದಾರೆ.

ಕೃಷಿ ಮೇಳದಲ್ಲಿ ಹಲವಾರು ಕಂಪನಿಗಳ ಡ್ರೋನ್‌ಗಳು ಔಷಧಿ ಸಿಂಪಡಣೆಗೆ ಸೀಮಿತವಾಗಿವೆ. ಆದರೆ, ಹವ್ಯಾಸ್‌ ಹಾಗೂ ನಿತಿನ್ ಆವಿಷ್ಕರಿಸಿರುವ ಡ್ರೋನ್‌ ಮೂಲಕ ಬೆಳೆ ಸಮೀಕ್ಷೆ, ಬೆಳೆಯ ಆರೋಗ್ಯ, ಅಂದಾಜು ಇಳುವರಿ ಪ್ರಮಾಣ, ಆರ್‌ಜಿಬಿ ಥರ್ಮಲ್‌ ಚಿತ್ರಗಳ ಸೆರೆ ಹಿಡಿಯುವುದು, ಬೀಜಗಳ ಪ್ರಸರಣ, ಔಷಧ ಸಿಂಪಡಣೆ ಮತ್ತು 3ಡಿ ಮ್ಯಾಪಿಂಗ್‌ ಮಾಡಬಹುದಾಗಿದೆ.

ADVERTISEMENT

‘ಸಮಯಕ್ಕೆ ಸರಿಯಾಗಿ ಬೆಳೆಗಳಿಗೆ ಔಷಧಿ ಸಿಂಪಡಿಸಲು ಕಾರ್ಮಿಕರು ಸಿಗುವುದಿಲ್ಲ. ಕಾರ್ಮಿಕರ ಕೊರತೆ ನಿವಾರಿಸಲು ಡ್ರೋನ್ ಸಹಕಾರಿಯಾಗಿದೆ. ಕೃಷಿ ಸಂಶೋಧನಾ ಸಂಸ್ಥೆಗಳು, ಅರಣ್ಯ ಇಲಾಖೆ ಮತ್ತು ಕಾರ್ಪೊರೇಟ್‌ ಸಂಸ್ಥೆಗಳಿಗೆ ಇದು ಹೆಚ್ಚು ನೆರವಾಗಲಿದೆ’ ಎಂದು ನಿತಿನ್‌ ಹೇಳಿದರು.

‘ಬೀಗಲ್ ಡ್ರೋನ್‌ನಲ್ಲಿ ಅಳವಡಿಸಲಾಗಿರುವ ಮಲ್ಟಿಸ್ಪೆಕ್ಟ್ರಲ್ ಕ್ಯಾಮೆರಾ ಬಳಸಿ ನಾಲ್ಕು ಎಕರೆ ಭತ್ತದ ಗದ್ದೆಯ ಚಿತ್ರವನ್ನು ಸೆರೆಹಿಡಿಯಲಿದೆ. ಬೆಳೆಯ ಯಾವ ಭಾಗ ಕೀಟಬಾಧೆಗೆ ಒಳಪಟ್ಟಿದೆ, ಎಲ್ಲಿ ಪೋಷಕಾಂಶಗಳ ಕೊರತೆ ಇದೆ, ಯಾವ ಭಾಗ ಉತ್ತಮವಾಗಿದೆ ಎಂಬುದನ್ನು ನಿಖರವಾಗಿ ತಿಳಿಸುವ ತಂತ್ರಜ್ಞಾನವನ್ನು ಅಳವಡಿಸಲಾಗಿದೆ’ ಎಂದು ಹವ್ಯಾಸ್‌ ಮಾಹಿತಿ ನೀಡಿದರು.

‘20ಕ್ಕೂ ಹೆಚ್ಚು ನಿಮಿಷ ಹಾರಬಲ್ಲ ಡ್ರೋನ್‌ ಅನ್ನು ರಿಮೋಟ್‌ ಮೂಲಕ ನಿಯಂತ್ರಣ ಮಾಡಬಹುದು. ಸಣ್ಣ ಡ್ರೋನ್‌ 5 ಕಿ.ಮೀ, ದೊಡ್ಡ ಡ್ರೋನ್‌ 2 ಕಿ.ಮೀ. ದೂರ ಹಾಗೂ 20 ಮೀಟರ್‌ ಎತ್ತರದಲ್ಲಿ ಹಾರಾಡುತ್ತದೆ. ಒಂದು ದಿನಕ್ಕೆ 1,000ಕ್ಕೂ ಹೆಚ್ಚು ಬೀಜಗಳನ್ನು ಬಿತ್ತನೆ ಮಾಡಬಹುದು. ಬಿತ್ತಿರುವ ಬೀಜಗಳಲ್ಲಿ ಎಷ್ಟು ಮೊಳಕೆಯೊಡೆದು ಬೆಳೆದಿವೆ ಎನ್ನುವುದನ್ನೂ ನೋಡಬಹುದು’ ಎಂದು ತಿಳಿಸಿದರು.

ಈ ಡ್ರೋನ್‌ ತಂಬಾಕು, ಅಡಿಕೆ, ಬಾಳೆಹಣ್ಣು, ಸೂರ್ಯಕಾಂತಿ, ಭತ್ತ, ಕಬ್ಬು, ಹತ್ತಿ, ಮೆಕ್ಕೆಜೋಳ, ಟೊಮೆಟೊ, ದಾಳಿಂಬೆ, ಶುಂಠಿ, ಮೆಣಸಿನಕಾಯಿ, ಮಾವಿನಹಣ್ಣು, ಅರಣ್ಯಗಳಲ್ಲಿ ಬೀಜಗಳ ಪ್ರಸರಣ ಮಾಡುವುದು ಮತ್ತು ರೇಷ್ಮೆ ಬೆಳೆಗಳಿಗೆ ಔಷಧಿ ಸಿಂಪಡಣೆಗೆ ಸಹಕಾರಿಯಾಗಲಿದೆ. ಇದರ ಮೂಲಕ ಔಷಧಿ ಸಿಂಪಡಣೆ ಮಾಡಿದರೆ ಬೆಳೆಗಳ ಕಾಲಿನಡಿಗೆ ಸಿಲುಕಿ ಹಾಳಾಗುವುದು ತಪ್ಪುತ್ತದೆ. ಸಮಯದ ಉಳಿತಾಯದ ಜೊತೆಗೆ ವೆಚ್ಚವೂ ಕಡಿಮೆಯಾಗುತ್ತದೆ. ಒಂದು ಎಕರೆಗೆ ₹650 ಬಾಡಿಗೆ ಪಡೆದುಕೊಳ್ಳುತ್ತೇವೆ ಎಂದು ನಿತೀನ್ ತಿಳಿಸಿದರು

‘ಗ್ರಾಮ ಸಮೀಕ್ಷೆ, ಕ್ಷೇತ್ರ
ಅಧ್ಯಯನಕ್ಕೆ ಸಹಕಾರಿ’

‘ಈಗಾಗಲೇ ಪ್ರಾಯೋಗಿಕವಾಗಿ 800 ಎಕರೆ ಪ್ರದೇಶದ ಗ್ರಾಮವನ್ನು ಈ ಡ್ರೋನ್ ಬಳಸಿ ಸ್ಕ್ಯಾನ್ ಮಾಡಲಾಗಿದೆ. ಗ್ರಾಮದಲ್ಲಿ ಬೆಳೆದ ವಿವಿಧ ಬೆಳೆಗಳನ್ನು ನಿಖರವಾಗಿ ಗುರುತಿಸಿ ಮ್ಯಾಪಿಂಗ್‌ ಮಾಡಿದ್ದು, ವಿವಿಧ ಹಂತಗಳಲ್ಲಿ ಬೆಳೆದು ನಿಂತಿರುವ ಬೆಳೆಗಳ ಮಾಹಿತಿಯನ್ನು ಕೇವಲ ಆರು ದಿನಗಳಲ್ಲಿ ಶೇ 95ರಷ್ಟು ನಿಖರತೆಯೊಂದಿಗೆ ಪೂರ್ಣಗೊಳಿಸಲಾಗಿದೆ. ಇದು ಗ್ರಾಮದ ಸಮೀಕ್ಷೆ ಮತ್ತು ಕ್ಷೇತ್ರದ ಅಧ್ಯಯನ ಮಾಡಲು ಸಹಕಾರಿಯಾಗಿದೆ’ ಎಂದು ಹವ್ಯಾಸ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.