
ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ) ಆಯೋಜಿಸಿರುವ ಕೃಷಿ ಮೇಳದಲ್ಲಿ ಈ ವರ್ಷದ ವಿಶೇಷ ಆಕರ್ಷಣೆಯಾದ ‘ಕೃಷಿ ಪ್ರವಾಸೋದ್ಯಮ’ ತಾಕುವಿನಲ್ಲಿ ರಾಗಿ ಬೀಸುವ ಅನುಭವ ಪಡೆದ ಮಹಿಳೆಯರು
ಪ್ರಜಾವಾಣಿ ಚಿತ್ರ/ ಕೃಷ್ಣ ಕುಮಾರ್ ಪಿ.ಎಸ್.
ಬೆಂಗಳೂರು: ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಜಿಕೆವಿಕೆ ಆವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಕೃಷಿ ಪ್ರವಾಸೋದ್ಯಮ ಮಾದರಿ ಗಮನ ಸೆಳೆಯುತ್ತಿದೆ. ನಗರವಾಸಿಗಳಿಗೆ ಪಾರಂಪರಿಕ ಕೃಷಿ ಪದ್ಧತಿಗಳು, ಕೃಷಿ ಚಟುವಟಿಕೆಗಳು ಮತ್ತು ಗ್ರಾಮೀಣ ಪ್ರದೇಶದ ಕಲೆ, ಸಂಸ್ಕೃತಿ, ಆಹಾರ ಪದ್ಧತಿಗಳನ್ನು ಪರಿಚಯಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
ಮೂರು ಎಕರೆ ಪ್ರದೇಶದ ವ್ಯಾಪ್ತಿಯಲ್ಲಿ ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಈ ಮಾದರಿಯನ್ನು ರೂಪಿಸಲಾಗಿದೆ. ಪಾರಂಪರಿಕ ಬೇಸಾಯ ಪದ್ಧತಿಯ ಚಟುವಟಿಕೆಗಳಾದ ಉಳುಮೆ, ನೇಗಿಲು, ಕೊಯ್ಲು, ಒಕ್ಕಣೆಯನ್ನು ಪ್ರಾಯೋಗಿಕವಾಗಿ ಮಾಡುವ ಹಾಗೂ ನೋಡುವ ಅವಕಾಶ ಒದಗಿಸಲಾಗಿದೆ. ಇದರ ಜೊತೆಗೆ ಎತ್ತಿನ ಗಾಡಿ ಸವಾರಿ ಮಾಡುವುದು, ರಾಗಿ ಬೀಸುವುದು, ಭತ್ತ ಕುಟ್ಟುವುದಕ್ಕೂ ಸಾರ್ವಜನಿಕರಿಗೆ ಮುಕ್ತ ವ್ಯವಸ್ಥೆ ಇದೆ. ಎಣ್ಣೆ ಗಾಣ, ಆಲೆಮನೆ, ಕುಲುಮೆ, ಬುಟ್ಟಿ ಹೆಣೆಯುವಿಕೆ, ಮಡಿಕೆ ತಯಾರಿಸುವುದು, ನೇಗಿಲು ತಯಾರಿಕೆಯಂತಹ ಸಾಂಪ್ರದಾಯಿಕ ಕಸುಬುಗಳನ್ನು ಪರಿಚಯಿಸಲಾಗಿದೆ.
ತಾಕಿನ ಅಂಚುಗಳಲ್ಲಿ ಕಾವಲು ಗೋಪುರಗಳನ್ನು ನಿರ್ಮಿಸಲಾಗಿದೆ. ಸಾರ್ವಜನಿಕರು ಇದರ ಮೇಲೆ ಹತ್ತಿ ನೋಡುವ ಅವಕಾಶ ಕಲ್ಪಿಸಲಾಗಿದೆ. ದೇಸಿ ಹಸುಗಳು, ಮೇಕೆಗಳು ಗಮನ ಸೆಳೆಯುತ್ತಿವೆ. ಈ ಎಲ್ಲಾ ಚಟುವಟಿಕೆಗಳಿಗೆ ಜಾನಪದ ಮೆರುಗು ನೀಡುವ ಉದ್ದೇಶದಿಂದ ರಾಗಿ ಬೀಸುವ ಪದಗಳು, ಒಕ್ಕಣಿ ಪದಗಳು, ಸೋಬಾನೆ ಪದಗಳು, ಭಜನೆಗೆ ಸಂಬಂಧಿಸಿದ ಹಾಡುಗಳನ್ನು ಬ್ಯಾನರ್‌ಗಳಲ್ಲಿ ಬರೆದು ಹಾಕಲಾಗಿದೆ. ಆಸಕ್ತರು ರಾಗಿ ಬೀಸುವ ಜೊತೆಗೆ ರಾಗಿ ಬೀಸುವ ಪದಗಳನ್ನೂ ಹಾಡಬಹುದು.
ಕೃಷಿ ಮೇಳಕ್ಕೆ ಬಂದಿದ್ದ ವಿದ್ಯಾರ್ಥಿಗಳು, ವಿಶೇಷವಾಗಿ ನಗರವಾಸಿಗಳು ಕೃಷಿ ಪ್ರವಾಸೋದ್ಯಮದ ಮಾದರಿಯಲ್ಲಿ ಇರುವ ಕೆರೆಯಲ್ಲಿ ಮೀನು ಹಿಡಿದು ಪುಳಕಿತಗೊಂಡರು. ಕೆಲವರು ಎತ್ತುಗಳನ್ನು ಹಿಡಿದುಕೊಂಡು ಜಮೀನಿನಲ್ಲಿ ನೇಗಿಲು ಹೊಡೆಯುವ ಅನುಭವ ಪಡೆದುಕೊಂಡರು. ವಿದ್ಯಾರ್ಥಿನಿಯರು, ಮಕ್ಕಳು ಜೋಕಾಲಿ ಆಟವಾಡಿ ಸಂಭ್ರಮಿಸಿದರು.
‘ರೈತರು ಬೇಸಾಯದ ಜತೆಗೆ ಕೃಷಿ ಪ್ರವಾಸೋದ್ಯಮದ ಪರಿಕಲ್ಪನೆಯನ್ನು ಅಳವಡಿಸಿಕೊಂಡು ಆದಾಯ ಹೆಚ್ಚಿಸಿಕೊಳ್ಳಬಹುದು. ರೈತರು ತಮ್ಮ ಹೊಲ ಅಥವಾ ತೋಟಗಳಲ್ಲಿ ಕೃಷಿ ಆಸಕ್ತ ಪ್ರವಾಸಿಗರಿಗೆ ಕೃಷಿ ಚಟುವಟಿಕೆಗಳನ್ನು ಪರಿಚಯಿಸುವ ಜೊತೆಗೆ ಆತಿಥ್ಯ, ಊಟ, ತಿಂಡಿ, ವಾಸ್ತವ್ಯಕ್ಕೆ ಇಂತಿಷ್ಟು ಅಂತ ದರ ನಿಗದಿ ಮಾಡಿ ಆದಾಯ ಪಡೆದುಕೊಳ್ಳಬಹುದು’ ಎಂದು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಎಸ್.ವಿ. ಸುರೇಶ ‘ಪ್ರಜಾವಾಣಿ’ಗೆ ತಿಳಿಸಿದರು.
‘ಕೃಷಿ ಸಾಂಪ್ರದಾಯಿಕ ಕಸುಬಾಗದೆ ಉದ್ಯಮವಾಗಿ ಮಾರ್ಪಟ್ಟಿದೆ. ಕೃಷಿ ಚಟುವಟಿಕೆಗಳನ್ನು ವಾಣಿಜ್ಯ ಉದ್ದೇಶದಿಂದ ಪರಿಚಯಿಸಿ ಪೂರಕ ಆದಾಯ ಪಡೆದುಕೊಳ್ಳಲು ಕೃಷಿ ಪ್ರವಾಸೋದ್ಯಮ ಸಹಕಾರಿ ಆಗಿದೆ’ ಎಂದು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.