ADVERTISEMENT

ಕೋಗಿಲು ಬಡಾವಣೆ ಒತ್ತುವರಿ ಬಿಜೆಪಿ ಪ್ರಾಯೋಜಿತವೇ: ಕೃಷ್ಣ ಬೈರೇಗೌಡ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2026, 8:25 IST
Last Updated 5 ಜನವರಿ 2026, 8:25 IST
ಕೃಷ್ಣ ಬೈರೇಗೌಡ
ಕೃಷ್ಣ ಬೈರೇಗೌಡ   

ಬೆಂಗಳೂರು: ಕೋಗಿಲು ಬಡಾವಣೆಯಲ್ಲಿ ಒತ್ತುವರಿಯಾಗಿರುವುದು 2021ರಲ್ಲಿ. ಆಗ ಕರ್ನಾಟಕದಲ್ಲಿ ಯಾವ ಸರ್ಕಾರ ಆಡಳಿತದಲ್ಲಿ ಇತ್ತು. ಇದನ್ನು ಬಿಜೆಪಿ ಪ್ರಾಯೋಜಿತ ಒತ್ತುವರಿ ಎಂದು ಕರೆಯಬೇಕೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಪ್ರಶ್ನಿಸಿದ್ದಾರೆ.

ಕಂದಾಯಭವನದಲ್ಲಿ ಸೋಮವಾರ ಸುದ್ದಿ ಗೋಷ್ಠಿ ಯಲ್ಲಿ ಮಾತನಾಡಿದ ಅವರು, ನಾವು ಒತ್ತುವರಿಗೆ ಬೆಂಬಲ ನೀಡಿದ್ದರೆ ತೆರವಿಗೆ ಮುಂದಾಗುತ್ತಿರಲಿಲ್ಲ. ಎರಡು ತಿಂಗಳ ಹಿಂದೆಯೇ ಕೋಗಿಲು ಬಡಾವಣೆಯಲ್ಲಿ 10 ಅನಧಿಕೃತ ಮನೆ ತೆರವು ಮಾಡಿಸಿ ಇತರರೂ ಖಾಲಿ ಮಾಡುವಂತೆ ಸೂಚಿಸಲಾಗಿತ್ತು. ಆದರೂ ತೆರವಿಗೆ ಮುಂದಾಗಿದ್ದರಿಂದ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿದೆ ಎಂದರು.

ಅಲ್ಲಿ ನೆಲೆಸಿರುವ ನಿವಾಸಿಗಳ ಸಮೀಕ್ಷೆ ಮುಗಿದಿದೆ. ವರದಿ ಬಂದ ನಂತರ ಪರ್ಯಾಯ ವ್ಯವಸ್ಥೆಯನ್ನೂ ಅರ್ಹರಿಗೆ ಮಾಡಲಾಗುತ್ತದೆ. ಮುಖ್ಯಮಂತ್ರಿ ಅವರು ಮಾನವೀಯ ನೆಲೆಯಲ್ಲಿ ಇದನ್ನು ನೋಡಿದ್ದಾರೆ. ಇದರಲ್ಲಿ ರಾಜಕೀಯ ಮಾಡುವುದು ಏನಿದೆ. ಕೆಲವರು ನನ್ನ ವಿರುದ್ದ ಕೆಲವು ಕಾರಣಗಳಿಗೆ ಇದನ್ನು ರಾಜಕೀಯ ಅಸ್ತ್ರ ಮಾಡಿಕೊಂಡಿದ್ದಾರೆ. ಇದಕ್ಕೆಲ್ಲ ಜಗ್ಗದೇ ನನ್ನ ಒಳ್ಳೆಯ ಕೆಲಸ ಮುಂದುವರೆಸುವೆ ಎಂದರು.

ADVERTISEMENT

ಬಾಂಗ್ಲಾದೇಶದವರು ಅಲ್ಲಿ ನೆಲೆಸಿದ್ದರು ಎಂದು ಬಿಜೆಪಿ ನಾಯಕರೇ ಹೇಳುತ್ತಿದ್ದಾರೆ. ಹೊರ ದೇಶದವರು ಬಾರದಂತೆ ತಡೆಯುವುದು ಕೇಂದ್ರ ಗೃಹ ಸಚಿವಾಲಯದ ಕರ್ತವ್ಯ. ಅವರು ಬರುವವರೆಗೂ ಕೇಂದ್ರ ಗುಪ್ತಚರ ಇಲಾಖೆ ನಿದ್ದೆ ಮಾಡುತ್ತಿದೆಯಾ. ಇದು ಕೇಂದ್ರ ಗೃಹ ಸಚಿವಾಲಯದ ವೈಫಲ್ಯ, ನಾಲಾಯಕ್ ಎಂದು ಬಿಜೆಪಿಯವರು ಪ್ರತಿಭಟನೆ ನಡೆಸುತ್ತಿದ್ದಾರೆಯೇ ಎಂದು ಕೃಷ್ಣ ಬೈರೇಗೌಡ ಪ್ರಶ್ನಿಸಿದರು.

ಇನ್ಫೋಸಿಸ್ ಗೆ ನೀಡಿದ ಭೂಮಿ ಮಾರಾಟ ದೂರಿನ ಹಿನ್ನೆಲೆಯಲ್ಲಿ ತನಿಖೆ ನಡೆಸಲು ಬೆಂಗಳೂರು ಜಿಲ್ಲಾಧಿಕಾರಿ ಅವರಿಗೆ ಸೂಚನೆ ನೀಡಲಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.