
ಹಂಪ ನಾಗರಾಜಯ್ಯ
ಬೆಂಗಳೂರು: ‘ಕುಪ್ಪಳ್ಳಿಯಲ್ಲಿರುವ ಕುವೆಂಪು ಅವರ ಮನೆ ದಕ್ಷಿಣ ಭಾರತದ ಶಾಂತಿನಿಕೇತನವಾಗಿದೆ’ ಎಂದು ಸಾಹಿತಿ ಹಂ.ಪ. ನಾಗರಾಜಯ್ಯ ಹೇಳಿದರು.
ಟೋಟಲ್ ಕನ್ನಡ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಮಪ್ರಸಾದ್ ಮಿಟ್ಟೂರು ಅವರ ರಸ ಋಷಿಗೆ ಕಾವ್ಯ ನಮನ ಪುಸ್ತಕ ಜನಾರ್ಪಣೆಗೊಳಿಸಿ ಅವರು ಮಾತನಾಡಿದರು.
‘ಪ್ರತಿವರ್ಷ ಕುಪ್ಪಳ್ಳಿಯ ಕವಿಶೈಲಕ್ಕೆ ಸುಮಾರು 2.35 ಲಕ್ಷ ಜನ ಭೇಟಿ ನೀಡುತ್ತಾರೆ. ಕುವೆಂಪು ಅವರ ಕುರಿತು ಹಲವಾರು ಲೇಖನಗಳು, ಬರಹಗಳು, ಸಂಶೋಧನಾ ಪ್ರಬಂಧಗಳು ಪ್ರಕಟವಾಗಿವೆ’ ಎಂದು
ತಿಳಿಸಿದರು.
‘ಕುವೆಂಪು ಅವರು ಮಹಾತ್ಮ ಗಾಂಧೀಜಿ ಅವರನ್ನು ಸುಂದರ ಕವಿತೆಗಳ ಮೂಲಕ ಸಾಕ್ಷಾತ್ಕಾರ ಮಾಡಿದ್ದಾರೆ. ರಾಮಪ್ರಸಾದ್ ಅವರು ಕುವೆಂಪು ಸಮಗ್ರ ಸಾಹಿತ್ಯವನ್ನು ಅಧ್ಯಯನ ಮಾಡಿ, ಅದಕ್ಕೆ ಕವಿತೆಗಳ ರೂಪ ನೀಡಿದ್ದಾರೆ’ ಎಂದು ಹೇಳಿದರು.
ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಬಿ.ಎಲ್. ಶಂಕರ್ ಮಾತನಾಡಿ, ‘ಕುವೆಂಪು ಅವರಂತೆ ನಿಷ್ಠುರ
ವಾಗಿ ಮಾತನಾಡುವ ಲೇಖಕರ ಸಂಖ್ಯೆ ಕಡಿಮೆ ಆಗಿದೆ. ಅವರ ವೈಜ್ಞಾನಿಕ ಚಿಂತನೆ, ವೈಚಾರಿಕ ದೃಷ್ಟಿಕೋನದ ಕಾರಣ ಅವರು ನಮಗೆ ಆಕರ್ಷಣೆ ಆಗಿದ್ದರು. ರಾಮಪ್ರಸಾದ್ ಅವರು
ರಸಋಷಿಗೆ ಕಾವ್ಯ ನಮನ ಸಲ್ಲಿಸಿರುವುದು ಶ್ಲಾಘನೀಯ’ ಎಂದು ತಿಳಿಸಿದರು.
ಬಿ.ಎಂ.ಶ್ರೀ ಪ್ರತಿಷ್ಠಾನದ ಅಧ್ಯಕ್ಷ ಬೈರಮಂಗಲ ರಾಮೇಗೌಡ, ಗಾಯಕಿ ಎಚ್.ಆರ್. ಲೀಲಾವತಿ, ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ವೂಡೇ ಪಿ.ಕೃಷ್ಣ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.