ಬೆಂಗಳೂರು: ‘ವೀರರಾಣಿ ಕಿತ್ತೂರು ಚನ್ನಮ್ಮ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವಿಷಯ ಆಧಾರಿತ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನವು ಲಾಲ್‌ಬಾಗ್‌ನಲ್ಲಿ ಆಗಸ್ಟ್ 7ರಿಂದ 18ರವರೆಗೆ ನಡೆಯಲಿದೆ’ ಎಂದು ತೋಟಗಾರಿಕೆ ಇಲಾಖೆಯ ಕಾರ್ಯದರ್ಶಿ ಶಮ್ಲಾ ಇಕ್ಬಾಲ್ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ವರ್ಷ ನಡೆಯುವ ಫಲಪುಷ್ಪ ಪ್ರದರ್ಶನದಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರಿಗೆ ಪುಷ್ಪ ಗೌರವ ಸಲ್ಲಿಸಲು ತಯಾರಿ ಮಾಡಿಕೊಳ್ಳಲಾಗುತ್ತಿದೆ. ರಾಣಿ ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣರ ಜೀವನ, ಸಾಧನೆ, ಹೋರಾಟದ ಹಾದಿಯನ್ನು ಪುಷ್ಪಗಳಲ್ಲಿ ಅನಾವರಣಗೊಳಿಸಲಾಗುತ್ತಿದೆ. ಕಿತ್ತೂರಿನ ಐತಿಹಾಸಿಕ ಕೋಟೆ ಹೂವುಗಳಲ್ಲಿ ಅನಾವರಣಗೊಳ್ಳಲಿದೆ. ಈ ಬಾರಿಯ ಫಲಪುಷ್ಪ ಪ್ರದರ್ಶನಕ್ಕೆ 10 ಲಕ್ಷಕ್ಕೂ ಹೆಚ್ಚು ಜನರು ಭೇಟಿ ನೀಡುವ ನಿರೀಕ್ಷೆ ಇದೆ’ ಎಂದು ಮಾಹಿತಿ ನೀಡಿದರು.
‘ತೋಟಗಾರಿಕೆ ಇಲಾಖೆ ಹಮ್ಮಿಕೊಂಡಿರುವ 218ನೇ ಫಲಪುಷ್ಪ ಪ್ರದರ್ಶನಕ್ಕೆ ವೇದಿಕೆ ಸಜ್ಜುಗೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ (ಆಗಸ್ಟ್ 7) ಬೆಳಿಗ್ಗೆ 10ಕ್ಕೆ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಭಾಗವಹಿಸಲಿದ್ದು, ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಉದಯ್ ಬಿ. ಗರುಡಾಚಾರ್ ಅಧ್ಯಕ್ಷತೆ ವಹಿಸಲಿದ್ದಾರೆ’ ಎಂದು ತಿಳಿಸಿದರು.
ತೋಟಗಾರಿಕೆ ಇಲಾಖೆ ನಿರ್ದೇಶಕ ಡಿ.ಎಸ್. ರಮೇಶ್ ಮಾತನಾಡಿ, ‘ಗಾಜಿನ ಮನೆಯ ಕೇಂದ್ರ ಭಾಗದಲ್ಲಿ ರಾಣಿ ಚನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ಅವರ ಕಾರ್ಯಕ್ಷೇತ್ರವಾಗಿದ್ದ ಕಿತ್ತೂರು ಕೋಟೆ ಮಾದರಿಯು ಪುಷ್ಪಗಳಲ್ಲಿ ಅನಾವರಣಗೊಳ್ಳಲಿದೆ. ಇದು 18 ಅಡಿ ಎತ್ತರ 34 ಅಡಿ ಸುತ್ತಳತೆಯನ್ನು ಹೊಂದಿದೆ. ಒಂದು ಬಾರಿಗೆ ಹಸಿರು, ಬಿಳಿ, ಕಂದು ಹಾಗೂ ಗುಲಾಬಿ ವರ್ಣದ 1.5 ಲಕ್ಷ ಡಚ್ ಗುಲಾಬಿ ಹೂವು, 1.5 ಲಕ್ಷ ಹೈಬ್ರೀಡ್ ಸೇವಂತಿಗೆ ಹಾಗೂ 30 ಸಾವಿರ ಕೋಲ್ಕತ್ತ ಸೇವಂತಿಗೆ ಹೂವುಗಳನ್ನು ಬಳಸಿಕೊಂಡು ಈ ಪರಿಕಲ್ಪನೆ ಸಿದ್ಧಪಡಿಸಲಾಗುತ್ತಿದೆ. ರಾಣಿ ಚನ್ನಮ್ಮ ಅವರು ಕುದುರೆಯ ಮೇಲೆ ಖಡ್ಗ ಹಿಡಿದು ಕುಳಿತಿರುವ ಹಾಗೂ ಸಂಗೊಳ್ಳಿ ರಾಯಣ್ಣ ಅವರು ಖಡ್ಗ ಹಿಡಿದುಕೊಂಡು ನಿಂತಿರುವ ಬೃಹತ್ ಪ್ರತಿಮೆಗಳು ರಾರಾಜಿಸಲಿವೆ’ ಎಂದು ಮಾಹಿತಿ ನೀಡಿದರು.
ಗಾಜಿನ ಮನೆಯ ಕೇಂದ್ರ ಭಾಗದ ಬಲಬದಿಯಲ್ಲಿ ಕೋಟೆ ವಿನ್ಯಾಸ ವರ್ಟಿಕಲ್ ಗಾರ್ಡನ್ ಮಾದರಿ, ರಾಷ್ಟ್ರ ಲಾಂಛನ ಹಾಗೂ ಜಾನಪದ ಕಲಾವಿದರ ಕಲಾಕೃತಿಗಳು ಇರಲಿವೆ. ಎಡಭಾಗದಲ್ಲಿ ಆಲದಮರ, ಅಶ್ವಾರೂಢ ಸಂಗೊಳ್ಳಿ ರಾಯಣ್ಣನ ಪ್ರತಿಮೆ, ರಾಯಣ್ಣ ಹುತಾತ್ಮರಾದ ಸನ್ನಿವೇಶ ಇರಲಿದೆ. ರಾಣಿ ಚನ್ನಮ್ಮನವರ ಐಕ್ಯಸ್ಮಾರಕದ ಪುಷ್ಪ ಮಾದರಿ ಕಣ್ಮನ ಸೆಳೆಯಲಿದೆ. ಹಿಂಭಾಗದಲ್ಲಿ ರಾಣಿ ಅಬ್ಬಕ್ಕ ದೇವಿ, ಚೆನ್ನಾ ಭೈರಾದೇವಿ, ಬೆಳವಡಿ ಮಲ್ಲಮ್ಮ, ಕೆಳದಿ ಚನ್ನಮ್ಮ, ವೀರಮ್ಮಾಜಿ, ಒನಕೆ ಓಬವ್ವನವರ ಪ್ರತಿಮೆಗಳು ಇರಲಿವೆ’ ಎಂದರು.
ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಎಂ. ಜಗದೀಶ್, ಉಪ ನಿರ್ದೇಶಕ ಎಚ್.ಟಿ. ಬಾಲಕೃಷ್ಣ ಸುದ್ದಿಗೋಷ್ಠಿಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.