ಬೆಂಗಳೂರು: ಇನ್ನುಮುಂದೆ ಲಾಲ್‌ಬಾಗ್‌ನಲ್ಲಿ ಹಿರಿಯ ನಾಗರಿಕರು ಹಾಗೂ ಮಕ್ಕಳು ಸೇರಿದಂತೆ ಯಾರೂ ನಡೆಯಲು ಆತಂಕಪಡಬೇಕಿಲ್ಲ. ಏಕೆಂದರೆ ಅಲ್ಲಿನ ಎಲ್ಲ ಒಳ ರಸ್ತೆಗಳೂ ಡಾಂಬರಿನ ಮೇಲುಹೊದಿಕೆ ಪಡೆದಿವೆ!
ಹೌದು, ತೋಟಗಾರಿಕೆ ಇಲಾಖೆಯು ಲಾಲ್‌ಬಾಗ್‌ನ ಒಳ ರಸ್ತೆಗಳಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದು, ಬರೋಬ್ಬರಿ 50 ವರ್ಷಗಳ ಬಳಿಕ ರಸ್ತೆಗಳು ಮತ್ತೆ ಡಾಂಬರು ಕಾಣುತ್ತಿವೆ.
ಲಾಲ್‌ಬಾಗ್‌ನಲ್ಲಿ ಒಂದು ವರ್ತುಲ ರಸ್ತೆ ಮತ್ತು 12 ಒಳರಸ್ತೆಗಳು ಸೇರಿದಂತೆ ಒಟ್ಟು 13 ರಸ್ತೆಗಳಿವೆ. ದಶಕಗಳಿಂದ ದುರಸ್ತಿ ಕಾಣದ್ದರಿಂದ ಈ ರಸ್ತೆಗಳು ಕಿತ್ತು ಹೋಗಿ, ಸಾಲು ಸಾಲು ಗುಂಡಿಗಳು ಬಿದ್ದಿದ್ದವು. ನೀರಿನ ಪೈಪ್‌ಲೈನ್‌ಗಾಗಿ ಅವುಗಳನ್ನು ಅಗೆದಿದ್ದರಿಂದ ಸಮಸ್ಯೆ ಮತ್ತಷ್ಟು ಬಿಗಡಾಯಿಸಿತ್ತು. ಮಳೆಗಾಲದಲ್ಲಿ ರಸ್ತೆಗಳ ಗುಂಡಿಗಳಲ್ಲಿ ನೀರು ಸಂಗ್ರಹ ಆಗುತ್ತಿದ್ದರಿಂದ ವಾಯುವಿಹಾರಿಗಳು, ಪ್ರವಾಸಿಗರು ನಡೆಯಲು ತೊಂದರೆ ಅನುಭವಿಸಬೇಕಿತ್ತು.
ಹಿರಿಯ ನಾಗರಿಕರು, ಅಂಗವಿಕಲರು ಹಾಗೂ ಗಣ್ಯರನ್ನು ಉದ್ಯಾನದೊಳಗೆ ಕರೆದೊಯ್ಯುವ ವಿದ್ಯುತ್ ಚಾಲಿತ ವಾಹಗಳಿಗೂ ಹಾನಿ ಉಂಟಾಗುತ್ತಿತ್ತು.
2018ರ ನವೆಂಬರ್‌ನಲ್ಲಿ ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ‘ಜನಸ್ಪಂದನ’ ಕಾರ್ಯಕ್ರಮದಲ್ಲಿ ಲಾಲ್‌ಬಾಗ್‌ನ ರಸ್ತೆಗಳು ಹಾಳಾಗಿರುವ ಕುರಿತು ವಾಯುವಿಹಾರಿಗಳು ಧ್ವನಿ ಎತ್ತಿದ್ದರು. ರಸ್ತೆಗೆ ಡಾಂಬರು ಹಾಕುವಂತೆಯೂ ಆಗ್ರಹಿಸಿದ್ದರು.
‘ರಸ್ತೆ ಅಭಿವೃದ್ಧಿಗೆ ₹5 ಕೋಟಿ ಅನುದಾನ ನೀಡುವಂತೆ ಪಾಲಿಕೆಗೆ ಬೇಡಿಕೆ ಸಲ್ಲಿಸಲಾಗಿದೆ. ಅನುದಾನ ಬಿಡುಗಡೆಯಾದ ಬಳಿಕ ಉದ್ಯಾನದ ಎಲ್ಲಾ ರಸ್ತೆಗಳನ್ನು ಡಾಂಬರೀಕರಣ ಮಾಡಲಾಗುವುದು’ ಎಂದು ತೋಟಗಾರಿಕೆ ಅಧಿಕಾರಿಗಳು ಭರವಸೆ ನೀಡಿದ್ದರು.
ಸದ್ಯತೋಟಗಾರಿಕೆ ಇಲಾಖೆಯ ವತಿಯಿಂದಲೇ ₹2 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಂಡಿದೆ.
ರಸ್ತೆ ಅಗೆತದ ಸಮಸ್ಯೆಗೆ ಪರಿಹಾರ: ಉದ್ಯಾನದ ಒಳ ರಸ್ತೆಗಳನ್ನು ಅಗೆದು ಅದರ ಕೆಳಭಾಗದಲ್ಲಿ ಪೈಪ್‌ಲೈನ್ ಮಾಡಲಾಗಿತ್ತು. ಇದೀಗ ರಸ್ತೆ ಅಗೆಯುವಸಮಸ್ಯೆಗೆ ಶಾಶ್ವತ ಪರಿಹಾರವೊಂದನ್ನು ಕಂಡುಹಿಡಿಯಲಾಗಿದೆ.
‘ರಸ್ತೆ ಕೆಳಭಾಗದಲ್ಲಿ ಯುಟಿಲಿಟಿ ಡಕ್ಟ್‌ಗಳನ್ನು ಅಳವಡಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿಪೈಪ್‌ಲೈನ್ ಹಾಗೂ ಕೇಬಲ್ ಅನ್ನು ಡಕ್ಟ್ ಮೂಲಕವೇ ತೆಗೆದುಕೊಂಡು ಹೋಗಲಾಗುತ್ತದೆ. ಹೀಗಾಗಿ ರಸ್ತೆ ಅಗೆಯುವ ಅಗತ್ಯ ಬರುವುದಿಲ್ಲ. ಸುಮಾರು ವರ್ಷಗಳ ಕಾಲ ರಸ್ತೆಗಳು ಸುಸ್ಥಿತಿಯಲ್ಲಿ ಇರಲಿವೆ’ ಎಂದು ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಎಂ.ಜಗದೀಶ್ ‘ಪ್ರಜಾವಾಣಿ’ಗೆ ತಿಳಿಸಿದರು.
ಮಳೆ ನೀರಿನ ಹರಿಯುವಿಕೆಗೆ ಕಾಲುವೆ:ಮಳೆ ಬಂದಾಗ ನೀರು ಎಲ್ಲೆಂದರಲ್ಲಿಹರಿಯುತ್ತಿದ್ದರಿಂದ ಮಣ್ಣಿನ ಸವಕಳಿ ಉಂಟಾಗುತ್ತಿತ್ತು. ಕಾಲುವೆ ನಿರ್ಮಿಸಲಾಗುತ್ತಿದ್ದು, ಅದರ ಮೂಲಕ ನೀರು ಹರಿದು ಹೋಗುತ್ತದೆ. ಅದೇ ನೀರನ್ನು ತೋಟಕ್ಕೆ ಬಳಸಿಕೊಳ್ಳಲಾಗುತ್ತದೆ. ಇದರಿಂದ ನೀರು ವ್ಯರ್ಥವಾಗುವುದು ತಪ್ಪುವುದರ ಜೊತೆಗೆ ಮಣ್ಣಿನ ಸವಕಳಿಯೂ ತಪ್ಪಲಿದೆ ಎಂದು ಮಾಹಿತಿ ನೀಡಿದರು.
*
50 ವರ್ಷಗಳ ಬಳಿಕ ರಸ್ತೆಗಳಿಗೆ ಡಾಂಬರು ಹಾಕಲಾಗುತ್ತಿದೆ. ಇನ್ನೂ 10 ದಿನಗಳಲ್ಲಿ ಕಾಮಗಾರಿ ಮುಗಿಯಲಿದ್ದು, ವಾಯುವಿಹಾರಿಗಳಿಗೆ ಅನುಕೂಲವಾಗಲಿದೆ.
-ಎಂ.ಜಗದೀಶ್, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.