ADVERTISEMENT

ಬೆಂಗಳೂರು | ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನಕ್ಕೆ ಹರಿದು ಬಂದ ಜನಸಾಗರ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2023, 18:29 IST
Last Updated 6 ಆಗಸ್ಟ್ 2023, 18:29 IST
ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನ ವೀಕ್ಷಿಸಲು ಭಾನುವಾರ ಬಂದ ಜನ ಸಾಗರ –ಪ್ರಜಾವಾಣಿ ಚಿತ್ರ/ ಎಸ್.ಕೆ.ದಿನೇಶ್
ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನ ವೀಕ್ಷಿಸಲು ಭಾನುವಾರ ಬಂದ ಜನ ಸಾಗರ –ಪ್ರಜಾವಾಣಿ ಚಿತ್ರ/ ಎಸ್.ಕೆ.ದಿನೇಶ್   

ಬೆಂಗಳೂರು: ಸ್ವಾತಂತ್ರ್ಯೋತ್ಸವದ ಅಂಗವಾಗಿ ಲಾಲ್‌ಬಾಗ್‌ನ ಗಾಜಿನ ಮನೆಯಲ್ಲಿ ವಿಧಾನಸೌಧ ನಿರ್ಮಾತೃ ಕೆಂಗಲ್‌ ಹನುಮಂತಯ್ಯ ಸ್ಮರಣಾರ್ಥ ಆಯೋಜಿಸಿರುವ ಫಲಪುಷ್ಪ ಪ್ರದರ್ಶನ ವೀಕ್ಷಿಸಲು ಭಾನುವಾರ ಜನ ಸಾಗರವೇ ಹರಿದು ಬಂದಿತ್ತು.

ರಜೆ ದಿನವಾದ್ದರಿಂದ ಬೆಳಿಗ್ಗೆಯಿಂದಲೇ ಸಾರ್ವಜನಿಕರು ಲಾಲ್‌ಬಾಗ್‌ಗೆ ಆಗಮಿಸಿದ್ದರು. ಉದ್ಯಾನದ ನಾಲ್ಕು ದ್ವಾರಗಳಲ್ಲಿ ಟಿಕೆಟ್‌ ಕೌಂಟರ್‌ಗಳನ್ನು ಹೆಚ್ಚಿಸಲಾಗಿತ್ತು. ನರ್ಸರಿಗಳ ಬಳಿ ಸಸಿಗಳನ್ನು ಖರೀದಿಸುವಲ್ಲಿ, ಮಾರಾಟ ಮಳಿಗೆಗಳ ಬಳಿ ಜನಸಂದಣಿ ಹೆಚ್ಚಾಗಿತ್ತು. ಪ್ರದರ್ಶನದ ವೇಳೆ ಅವ್ಯವಸ್ಥೆಗಳಿಗೆ ಆಸ್ಪದವಾಗದಂತೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಲಾಗಿತ್ತು. ತೋಟಗಾರಿಕೆ ಇಲಾಖೆ ಮತ್ತು ಪೊಲೀಸರು ಜನರನ್ನು ನಿಯಂತ್ರಿಸಲು ಹರಸಾಹಸ ಪಟ್ಟರು.

ಖರೀದಿಗೆ ಮುಗಿಬಿದ್ದ ಜನ

ADVERTISEMENT

ಉದ್ಯಾನದ ಆವರಣದಲ್ಲಿರುವ ಅಧಿಕೃತ ಮಾರಾಟ ಮಳಿಗೆಗಳಲ್ಲಿ ಆಟಿಕೆಗಳು, ಗೃಹ ಉಪಯೋಗಿ, ಆಲಂಕಾರಿಕ ಮತ್ತು ಕರಕುಶಲ ವಸ್ತುಗಳು, ಅಡುಗೆ ಪದಾರ್ಥಗಳು, ಬ್ಯಾಗ್, ಪರ್ಸ್ ಇತ್ಯಾದಿಗಳ ಖರೀದಿಗೆ ಜನ ಮುಗಿಬಿದ್ದಿದ್ದರು. ಗಾಜಿನ ಮನೆಯ ಸುತ್ತಮುತ್ತಲು ಜನಸಂದಣಿ ಹೆಚ್ಚಿತ್ತು.

‘ವಾರಾಂತ್ಯದಲ್ಲಿ ಫಲಪುಷ್ಪ ಪ್ರದರ್ಶನ ವೀಕ್ಷಿಸಲು 67 ಸಾವಿರಕ್ಕಿಂತ ಹೆಚ್ಚು ಜನ ಆಗಮಿಸಿದ್ದರು. ಒಟ್ಟು ₹ 47 ಲಕ್ಷ  ಸಂಗ್ರಹವಾಗಿದೆ’ ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಜಗದೀಶ್ ಮಾಹಿತಿ ನೀಡಿದರು.

ಭಾನುವಾರ ಸಸ್ಯಕಾಶಿಗೆ ಭೇಟಿ ನೀಡಿದವರು

ವಯಸ್ಕರು : 55204

ಪಾಸ್‌ ಪಡೆದವರು : 2500

ಮಕ್ಕಳು : 9345

ಶಾಲಾ ಮಕ್ಕಳು : 500

ಒಟ್ಟು : 67549

ಸಂಗ್ರಹವಾದ ಹಣ : ₹47 ಲಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.