ಬೆಂಗಳೂರು: ನಗರದ 39ನೇ ಪೊಲೀಸ್ ಕಮಿಷನರ್ ಆಗಿ ಸೀಮಂತ್ ಕುಮಾರ್ ಸಿಂಗ್ ಅವರು ಗುರುವಾರ ಮಧ್ಯರಾತ್ರಿ ಪದಗ್ರಹಣ ಮಾಡಿದ್ದಾರೆ.
ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ಪ್ರಕರಣದ ಹಿನ್ನಲೆಯಲ್ಲಿ ಬಿ.ದಯಾನಂದ ಅವರು ಅಮಾನತುಗೊಂಡಿರುವ ಕಾರಣ ಬ್ಯಾಟನ್ ಹಸ್ತಾಂತರ ಮಾಡಿಲ್ಲ. ಬದಲಾಗಿ ಸೀಮಂತ್ ಕುಮಾರ್ ಅವರು ಕಡತಗಳಿಗೆ ಸಹಿ ಹಾಕಿ ಪ್ರಕ್ರಿಯೆ ಪೂರೈಸಿದರು.
ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಸಂಚಾರ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಎಂ.ಎನ್.ಅನುಚೇತ್ ಸೇರಿದಂತೆ ಹಿರಿಯ ಅಧಿಕಾರಿಗಳು ನೂತನ ಆಯುಕ್ತರನ್ನು ಸ್ವಾಗತಿಸಿದರು.
ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿದ ಸೀಮಂತ್ ಕುಮಾರ್ ಸಿಂಗ್, 'ಮುಖ್ಯಮಂತ್ರಿ ಹಾಗೂ ಗೃಹ ಸಚಿವರ ಆದೇಶದ ಮೇಲೆ ಕಠಿಣ ಪರಿಸ್ಥಿತಿಯಲ್ಲೂ ಅಧಿಕಾರ ಸ್ವೀಕರಿಸಿದ್ದೇನೆ. ಹಿಂದಿನ ಆಯುಕ್ತರೂ ಉತ್ತಮ ಕೆಲಸ ಮಾಡಿದ್ದು, ಅದನ್ನು ಮುಂದುವರೆಸಿಕೊಂಡು ಹೋಗುತ್ತೇನೆ’ ಎಂದು ಹೇಳಿದರು.
ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಅಧಿಕಾರಿಗಳು, ಸಿಬ್ಬಂದಿ ಸಭೆ ನಡೆಸಿದರು. ‘ಸರಿಯಾಗಿ ಕೆಲಸ ಮಾಡಿದರೆ ತೊಂದರೆ ಆಗದು’ ಎಂದು ಸೀಮಂತ್ ಕುಮಾರ್ ಸಿಂಗ್ ಅಭಯ ನೀಡಿದ್ಧಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.