ADVERTISEMENT

ಧಮ್‌ ಇದ್ದರೆ BJP ಸಂಸದರು ಮೆಟ್ರೊ ಪ್ರಯಾಣ ದರ ಕಡಿಮೆ ಮಾಡಿಸಲಿ: ಪ್ರಿಯಾಂಕ್ ಖರ್ಗೆ

ಮೆಟ್ರೊ ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿದೆ- ಪ್ರಿಯಾಂಕ್ ಖರ್ಗೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2025, 10:26 IST
Last Updated 10 ಫೆಬ್ರುವರಿ 2025, 10:26 IST
<div class="paragraphs"><p>ಪ್ರಿಯಾಂಕ್ ಖರ್ಗೆ</p></div>

ಪ್ರಿಯಾಂಕ್ ಖರ್ಗೆ

   

ಬೆಂಗಳೂರು: ‘ರಾಜ್ಯದ ಬಿಜೆಪಿ ಸಂಸದರಿಗೆ ಧಮ್‌ ಇದ್ದರೆ ‘ನಮ್ಮ ಮೆಟ್ರೊ’ ಪ್ರಯಾಣ ದರ ಕಡಿಮೆ ಮಾಡಲಿ. ಅದನ್ನು ಬಿಟ್ಟು ಪ್ರಯಾಣ ದರ ಹೆಚ್ಚು ಮಾಡಿದಾಗ ರಾಜ್ಯ ಸರ್ಕಾರದ ವಿರುದ್ಧ ಗೂಬೆ ಕೂರಿಸುವುದು, ಕಡಿಮೆ ಮಾಡಿದಾಗ ಕೇಂದ್ರ ಸರ್ಕಾರಕ್ಕೆ ಧನ್ಯವಾದ ಸಲ್ಲಿಸುವುದು ಅಲ್ಲ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಕಿಡಿಕಾರಿದರು.

ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಅವರು, ‘ಮೆಟ್ರೊ ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿದೆ. ಈ ಹಿಂದೆ ಮೆಟ್ರೊ ಪ್ರಯಾಣ ದರ ಏರಿಕೆ ಮಾಡುವುದಿಲ್ಲ ಎಂದಾಗ ಇದೇ ಬಿಜೆಪಿ ಸಂಸದರು ಕೇಂದ್ರ ಸರ್ಕಾರಕ್ಕೆ ಧನ್ಯವಾದ ಹೇಳಿದ್ದರು. ಆದರೆ, ಈಗ ದರ ಏರಿಕೆ ಮಾಡಿದಾಗ ನಾವು (ರಾಜ್ಯ ಸರ್ಕಾರ) ಜವಾಬ್ದಾರಿಯೇ? ಈಗಲೂ ಕೇಂದ್ರ ಸರ್ಕಾರವನ್ನು ಹೋಗಿ ಕೇಳಲಿ’ ಎಂದರು.

ADVERTISEMENT

‘ನಾವು ಬಸ್ ಪ್ರಯಾಣ ದರ ಏರಿಕೆ ಮಾಡಿದಾಗ ಇದೇ ಬಿಜೆಪಿ ನಾಯಕರು ಗುಲಾಬಿ ಹೂ ಹಿಡಿದುಕೊಂಡು ಬಸ್ ನಿಲ್ದಾಣಕ್ಕೆ ಹೋಗಿ ಪ್ರಯಾಣಿಕರ ಬಳಿ ಕ್ಷಮೆ ಕೇಳಿದ್ದರು. ಈಗಲೂ ಬಿಜೆಪಿ ನಾಯಕರು ಮೆಟ್ರೊ ನಿಲ್ದಾಣಕ್ಕೆ ಹೋಗಿ ಪ್ರಧಾನಿ ನರೇಂದ್ರ ಮೋದಿ ಪರವಾಗಿ ಕ್ಷಮೆ ಕೇಳಲಿ. ಬೇಕಿದ್ದರೆ ಗುಲಾಬಿ ಹೂ ನಾವೇ ಖರೀದಿಸಿ ಕೊಡುತ್ತೇವೆ’ ಎಂದೂ ಹೇಳಿದರು.

‘ನಮ್ಮ ಮೆಟ್ರೊ’ ಪ್ರಯಾಣ ದರವನ್ನು ಬಿಎಂಆರ್‌ಸಿಎಲ್‌ ಶೇ 47ರಷ್ಟು ಹೆಚ್ಚಳ ಮಾಡಿರುವುದಕ್ಕೆ ಜನರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.