ADVERTISEMENT

ಲಾಕ್‌ಡೌನ್‌ | ಹೂ ಅರಳಿದೆ, ಮಾರ್ಕೆಟ್ ಮುಚ್ಚಿದೆ

ಲಕ್ಕೂರಿನ ಚೆಂಡು ಹೂವು ಬೆಳೆಗಾರರ ನೋವಿನ ಕಥೆ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2020, 22:14 IST
Last Updated 29 ಏಪ್ರಿಲ್ 2020, 22:14 IST
ಚೆಂಡುಹೂವು ಬೆಳೆಯೊಂದಿಗೆ ಕೆಂಪರಾಜು
ಚೆಂಡುಹೂವು ಬೆಳೆಯೊಂದಿಗೆ ಕೆಂಪರಾಜು   

ಬೆಂಗಳೂರು/ಡಾಬಸ್‌ಪೇಟೆ: ‘ಒಂದು ಸಸಿಗೆ ಮೂರು ರೂಪಾಯಿ. ಒಂದು ಎಕರೆಗೆ ಸುಮಾರು 70 ಸಾವಿರ ಬಂಡವಾಳ ಹಾಕಿದ್ದೀನಿ. ಹೂವು ಅರಳಿವೆ. ಮಾರ್ಕೆಟ್‌ ಇಲ್ಲ. ಕೊರೊನಾ ಸೋಂಕು ವರ್ಷದ ಆದಾಯ ಕಿತ್ಕೊಂಡೈತೆ. ಏನಾದರೂ ಪರಿಹಾರ ಕೊಡ್ಸಿ..’

ಒಂದು ಎಕರೆ ಚೆಂಡು ಹೂವು ಬೆಳೆದು ಮಾರುಕಟ್ಟೆ ಮಾಡಲಾಗದೇ ನಷ್ಟ ಅನುಭವಿಸುತ್ತಿರುವನೆಲಮಂಗಲ ತಾಲ್ಲೂಕಿನ ಸೋಂಪುರ ಹೋಬಳಿಯ ಲಕ್ಕೂರು ಗ್ರಾಮದ ರೈತ ಕೆಂಪರಾಜು ಅವರು ಹೀಗೆ ತಮ್ಮ ನೋವನ್ನು ತೋಡಿಕೊಂಡರು.

ಕೆಂಪರಾಜು ಅವರದ್ದು ಮುಕ್ಕಾಲು ಎಕರೆ ಸ್ವಂತ ಜಮೀನಿದೆ. ಹೂವು, ತರಕಾರಿ ಬೆಳೆಯುವುದಕ್ಕಾಗಿಯೇ ಎರಡು ಎಕರೆ ಜಮೀನನ್ನು ಗುತ್ತಿಗೆ ತಗೊಂಡಿದ್ದಾರೆ. ಒಂದು ಎಕರೆಯಲ್ಲಿ ಟೊಮೆಟೊ, ಇನ್ನೊಂದು ಎಕರೆಯಲ್ಲಿ ‘ಸಿರಿ’ ತಳಿಯ ಚೆಂಡು ಹೂವು ಬೆಳೆದಿದ್ದಾರೆ. ಹೊಲದ ತುಂಬಾ ಹೂವು ಅರಳಿವೆ. ಆದರೆ, ಕೊಯ್ಲು ಮಾಡಿ, ಮಾರಾಟ ಮಾಡೋಣವೆಂದರೆ ಎಲ್ಲೂ ಮಾರುಕಟ್ಟೆ ಇಲ್ಲ.

ADVERTISEMENT

ಇಪ್ಪತ್ತೈದು ವರ್ಷಗಳಿಂದ ಹೂವು ಬೆಳೆಯುತ್ತಿದ್ದಾರೆ. ಪ್ರತಿ ವರ್ಷ ಇದೇ ಸಮಯಕ್ಕೆ ಹೂವು ಕೊಯ್ಲಿಗೆ ಬರುವ ಹಾಗೆ ಹೂವು ಬೆಳೆಯುತ್ತಾರೆ. ‘ಈ ಸಮಯದಲ್ಲಿ ಮದುವೆ, ಸಮಾರಂಭಗಳು ಹೆಚ್ಚು. ಅದರಲ್ಲೂ ಬಸವ ಜಯಂತಿ ದಿನ ಕೊನೆ ಲಗ್ನವಿರುತ್ತದೆ. ಡೆಕೊರೇಷನ್‌ಗೆ ಹೆಚ್ಚು ಹೂವು ಹೋಗುತ್ತಿತ್ತು. ಒಳ್ಳೆ ಬೆಲೆ ಸಿಗೋದು. ಕಳೆದ ವರ್ಷವೂ ಹಿಂಗೆ ರೇಟ್‌ ಸಿಗಲಿಲ್ಲ.ಈ ಬಾರಿ ಹತ್ತು ಸಾವಿರ ಸಸಿ ಹಾಕಿದ್ದೆವು. ಹೂವು ಚೆನ್ನಾಗಿ ಬಂದಿತ್ತು. ಬೆಲೆ ಸಿಕ್ತಿತ್ತು. ಆದರೆ ಮಾರ್ಕೆಟೇ ಇಲ್ಲವಲ್ಲಾ. ಸುಮಾರು ₹70 ಸಾವಿರದಷ್ಟು ಬಂಡವಾಳ ನಷ್ಟವಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು ಕೆಂಪರಾಜು.

ಕೆಂಪರಾಜು ಅವರಿಗೆ ಎಕರೆಗೆ ಕನಿಷ್ಠ 25 ಟನ್‌ ಹೂವು ಸಿಗುತ್ತಿತ್ತಂತೆ. ಮೂರು ದಿನಗಳಿಗೊಮ್ಮೆ ಹೂವು ಅರಳುತ್ತಿತ್ತು. ಹಂತ ಹಂತವಾಗಿ ಕೊಯ್ದು ಮಾರುಕಟ್ಟೆಗೆ ಕಳಿಸುತ್ತಿದ್ದರು. ಒಂದು ಸಾರಿಗೆ 8 ರಿಂದ 10 ಕ್ವಿಂಟಲ್‌ ಸಿಕ್ಕುತ್ತಿತ್ತು. ಕೆ.ಜಿಗೆ ₹40 ರಿಂದ ₹50 ರಷ್ಟು ಬೆಲೆ ಸಿಗುತ್ತಿತ್ತು. ‘ವರ್ಷಕ್ಕೆ ₹2 ಲಕ್ಷವಾದರೂ ಆದಾಯ ಸಿಗುತ್ತಿತ್ತು. ಆದರೆ, ಈಗ ಹಾಕಿದ ಬಂಡವಾಳವೂ ಹುಟ್ಟುತ್ತಿಲ್ಲ’ ಎಂದು ನೊಂದು ನುಡಿದರು ಕೆಂಪರಾಜು.

‘ಮುಂದೆ ಏನ್ಮಾಡ್ತೀರಾ’ ಅಂತ ಕೇಳಿದರೆ, ‘ಇನ್ನೇನು ಮಾಡೋದು ಸರ್. ಸರ್ಕಾರ ಏನಾದರೂ ಪರಿಹಾರ ಕೊಡಬಹುದು ಅಂತ ಇಲ್ಲಿವರೆಗೂ ಉಳಿಸಿಕೊಂಡಿದ್ದೇನೆ. ಸದ್ಯಕ್ಕಂತೂ ಹೂವು ಕೀಳಲ್ಲ. ಹಂಗೆ ರೋಟಾರ್ ಹೊಡೆಸ್ತೀನಿ, ಅಷ್ಟೇ’ ಎಂದರು.

ಡಾಬಸ್‌ಪೇಟೆ ಸಮೀಪವಿರುವ ಸೋಂಪುರ ಹೋಬಳಿಯ ಸುತ್ತ ಮುತ್ತ ಅನೇಕ ರೈತರು ಬಟನ್ಸ್‌, ಚೆಂಡು ಹೂವು, ಸೇವಂತಿಗೆಯಂತಹ ಹೂವುಗಳನ್ನು ಬೆಳೆದಿದ್ದಾರೆ. ಕೆಲವರೆಲ್ಲ ಕೊರೊನಾ ಸೋಂಕು ಶುರುವಾದ ಆರಂಭದಲ್ಲೇ ಹೂವನ್ನು ಮಾರ್ಕೆಟ್‌ ಮಾಡಲಾಗದೇ ಮಣ್ಣಿಗೆ ಸೇರಿಸಿದರಂತೆ. ಆದರೆ, ಕೆಂಪರಾಜು ಅವರು ಬಸವ ಜಯಂತಿ ಹೊತ್ತಿಗೆ ಹೂವು ಕೊಯ್ಲಿಗೆ ಬರಬೇಕೆಂದು ಯೋಚಿಸಿ, ಸ್ವಲ್ಪ ತಡವಾಗಿ ಸಸಿ ಹಾಕಿಸಿದ್ದರು. ಈಗ ಅವರ ಹೂವೂ ಮಾರಾಟವಾಗುತ್ತಿಲ್ಲ.

ಎಲ್ಲರದ್ದೂ ಸಂಕಷ್ಟ
ಲಕ್ಕೂರಿನ ಕೆಂಪರಾಜು ಅವರಂತೆಯೇ ನಿಜಗಲ್‌ ಕೆಂಪೊಹಳ್ಳಿಯ ರೈತರಾದ ಕುಮಟ ರಾಮಯ್ಯ, ನಟರಾಜು ಮತ್ತು ರಮೇಶ್ ಅವರು ತಲಾ 20 ಗುಂಟೆಯಲ್ಲಿ ಚೆಂಡು ಹೂವು ಬೆಳೆದು ಮಾರಲಾಗದೇ ಗಿಡದಲ್ಲೇ ಬಿಟ್ಟಿದ್ದಾರೆ. ಇದೇ ರೈತರು ಬಟನ್ಸ್‌ ಹೂವು ಬೆಳೆದು ಮಾರಾಟ ಮಾಡಲಾಗಿಲ್ಲ. ಲಕ್ಕೂರು, ಬಸವಪಟ್ಟಣ, ಕಮಲಾಪುರ, ಮರಳಕುಂಟೆ, ಹೆಗ್ಗುಂದ, ಬುಗಡಿಹಳ್ಳಿ, ಶಿವಗಂಗೆ ಭಾಗದಲ್ಲಿ ಹೂವಿನ ಜತೆಗೆ, ತರಕಾರಿ ಬೆಳೆದ ರೈತರಿಗೂ ನಷ್ಟವಾಗಿದೆ. ಸರ್ಕಾರ ತಮ್ಮ ನೆರವಿಗೆ ನಿಲ್ಲಬೇಕೆಂಬುದು ರೈತರ ಮನವಿ.

ಲಕ್ಕೂರಿನ ಕೆಂಪರಾಜು ಅವರಂತೆಯೇ ನಿಜಗಲ್‌ ಕೆಂಪೊಹಳ್ಳಿಯ ರೈತರಾದ ಕುಮಟ ರಾಮಯ್ಯ, ನಟರಾಜು ಮತ್ತು ರಮೇಶ್ ಅವರು ತಲಾ 20 ಗುಂಟೆಯಲ್ಲಿ ಚೆಂಡು ಹೂವು ಬೆಳೆದು ಮಾರಲಾಗದೇ ಗಿಡದಲ್ಲೇ ಬಿಟ್ಟಿದ್ದಾರೆ. ಇದೇ ರೈತರು ಬಟನ್ಸ್‌ ಹೂವು ಬೆಳೆದು ಮಾರಾಟ ಮಾಡಲಾಗಿಲ್ಲ. ಲಕ್ಕೂರು, ಬಸವಪಟ್ಟಣ, ಕಮಲಾಪುರ, ಮರಳಕುಂಟೆ, ಹೆಗ್ಗುಂದ, ಬುಗಡಿಹಳ್ಳಿ, ಶಿವಗಂಗೆ ಭಾಗದಲ್ಲಿ ಹೂವಿನ ಜತೆಗೆ, ತರಕಾರಿ ಬೆಳೆದ ರೈತರಿಗೂ ನಷ್ಟವಾಗಿದೆ. ಸರ್ಕಾರ ತಮ್ಮ ನೆರವಿಗೆ ನಿಲ್ಲಬೇಕೆಂಬುದು ರೈತರ ಮನವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.