ADVERTISEMENT

ಬೆಂಗಳೂರಿಂದ ಧಾರವಾಡಕ್ಕೆ ಬೈಕ್ ಸವಾರಿ: ಔಷಧ ತಲುಪಿಸಿದ ಕಾನ್‌ಸ್ಟೆಬಲ್‌ಗೆ ಪ್ರಶಂಸೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2020, 4:09 IST
Last Updated 18 ಏಪ್ರಿಲ್ 2020, 4:09 IST
ಹೆಡ್‌ ಕಾನ್‌ಸ್ಟೆಬಲ್ ಕುಮಾರಸ್ವಾಮಿ ಅವರಿಗೆ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಪ್ರಶಂಸನೀಯ ಪತ್ರ ನೀಡಿದರು
ಹೆಡ್‌ ಕಾನ್‌ಸ್ಟೆಬಲ್ ಕುಮಾರಸ್ವಾಮಿ ಅವರಿಗೆ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಪ್ರಶಂಸನೀಯ ಪತ್ರ ನೀಡಿದರು   

ಬೆಂಗಳೂರು: ಕೊರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಕ್ಯಾನ್ಸರ್ ಔಷಧಿ ಸಿಗದೇ ಕಂಗಾಲಾಗಿದ್ದ ಧಾರವಾಡದ ರೋಗಿಯೊಬ್ಬರಿಗೆ, ಬೆಂಗಳೂರಿನ ಹೆಡ್‌ ಕಾನ್‌ಸ್ಟೆಬಲೊಬ್ಬರು ಔಷಧ ತಲುಪಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್‌ ವ್ಯಾಪ್ತಿಯ ನಿಯಂತ್ರಣ ಕೊಠಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೆಡ್ ಕಾನ್‌ಸ್ಟೆಬಲ್ ಎಸ್‌.ಕುಮಾರಸ್ವಾಮಿ ನಗರದಿಂದ 430 ಕಿ.ಮೀ ದೂರವಿರುವ ಧಾರವಾಡಕ್ಕೆಬೈಕ್‌ನಲ್ಲೇ ಹೋಗಿ ರೋಗಿಗೆ ಔಷಧಿ ಕೊಟ್ಟು ವಾಪಸು ಬಂದಿದ್ದಾರೆ.

ಈ ಕೆಲಸ ಮೆಚ್ಚಿದ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್, ಕುಮಾರಸ್ವಾಮಿ ಅವರನ್ನು ಸನ್ಮಾನಿಸಿ ಪ್ರಶಂಸನೀಯ ಪತ್ರ ನೀಡಿದ್ದಾರೆ.

ADVERTISEMENT

ಆಗಿದ್ದೇನು: ದೇಶದಾದ್ಯಂತ ಲಾಕ್‌ಡೌನ್ ಇದೆ. ರಾಜ್ಯವೂ ಸ್ತಬ್ಧಗೊಂಡಿದೆ. ಸರ್ಕಾರಿ ಹಾಗೂ ಖಾಸಗಿ ಸಾರಿಗೆಯೂ ಬಂದ್ ಆಗಿದೆ. ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಎಲ್ಲ ಬಗೆಯ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ಪರಿಸ್ಥಿತಿ ಹೀಗಿರುವಾಗ, ಧಾರವಾಡದ ಮಣಿಕಂಠ ನಗರದ ವ್ಯಕ್ತಿಯೊಬ್ಬರಿಗೆ ಕ್ಯಾನ್ಸರ್ ಔಷಧಿಯ ಅಗತ್ಯವಿತ್ತು. ಆನ್‌ಲೈನ್‌ ಹಾಗೂ ಸ್ಥಳೀಯ ಮಳಿಗೆಗಳನ್ನೂ ಆ ಔಷಧಿ ಲಭ್ಯವಿರಲಿಲ್ಲ.

ಬೆಂಗಳೂರಿನ ಇಂದಿರಾನಗರದ ಔಷಧಿ ಮಳಿಗೆಯೊಂದರಲ್ಲಿ ಮಾತ್ರ ಔಷಧಿ ಲಭ್ಯವಿತ್ತು. ಬೆಂಗಳೂರಿಗೆ ಬಂದು ಔಷಧಿ ತೆಗೆದುಕೊಂಡು ಹೋಗುವುದು ವ್ಯಕ್ತಿಗೆ ಸಾಧ್ಯವಾಗಿರಲಿಲ್ಲ. ಈ ಬಗ್ಗೆ ಅಳಲು ತೋಡಿಕೊಂಡು ವಿಡಿಯೊ ಚಿತ್ರೀಕರಿಸಿದ್ದ ವ್ಯಕ್ತಿ, ಆ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದರು. ಅದನ್ನು ನೋಡಿದ್ದ ಹೆಡ್‌ ಕಾನ್‌ಸ್ಟೆಬಲ್‌ ಕುಮಾರಸ್ವಾಮಿ, ರೋಗಿಯನ್ನು ಸಂಪರ್ಕಿಸಿ ಸಹಾಯ ಮಾಡುವುದಾಗಿ ಹೇಳಿದ್ದರು. ಅದರಂತೆ ಔಷಧಿ ಖರೀದಿಸಿಟ್ಟುಕೊಂಡು ಒಬ್ಬರೇ ಬೈಕ್‌ನಲ್ಲಿ ನಸುಕಿನ 4.30ರ ಸುಮಾರಿಗೆ ಬೆಂಗಳೂರಿನಿಂದ ಧಾರವಾಡದತ್ತ ಹೊರಟಿದ್ದರು.

ಮಧ್ಯಾಹ್ಮ ಧಾರವಾಡ ತಲುಪಿ ರೋಗಿಯು ಔಷಧಿ ನೀಡಿ, ಪುನಃ ರಾತ್ರಿ ಬೆಂಗಳೂರಿಗೆ ವಾಪಸು ಆಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.