ADVERTISEMENT

‘ಮೈಲಾರಿ ಅಗ್ರೋ ಪ್ರೊಡಕ್ಟ್’ ವ್ಯವಸ್ಥಾಪಕ ನಿರ್ದೇಶಕ ಬಂಧನ

​ಪ್ರಜಾವಾಣಿ ವಾರ್ತೆ
Published 27 ಜೂನ್ 2021, 7:01 IST
Last Updated 27 ಜೂನ್ 2021, 7:01 IST
ಆರೋಪಿ ಮಹೇಶ್
ಆರೋಪಿ ಮಹೇಶ್   

ಬೆಂಗಳೂರು: ಅಧಿಕ ಬಡ್ಡಿ ಆಮಿಷವೊಡ್ಡಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ವಂಚಿಸಿರುವ ಪ್ರಕರಣದ ತನಿಖೆ ಚುರುಕುಗೊಳಿಸಿರುವ ವಿಧಾನಸೌಧ ಠಾಣೆ ಪೊಲೀಸರು, ‘ಮೈಲಾರಿ ಅಗ್ರೋ ಪ್ರೊಡಕ್ಟ್’ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಮಹೇಶ್ (42) ಅವರನ್ನು ಬಂಧಿಸಿದ್ದಾರೆ.

ಹಣ ಹೂಡಿಕೆ ಮಾಡಿ ವಂಚನೆಗೀಡಾಗಿದ್ದ ಜೆ.ಪಿ. ನಗರದ ಮಹೇಶ್ ಎಂಬುವರು ದೂರು ನೀಡಿದ್ದರು. ಅದರನ್ವಯ ಭರತ್, ಮಹೇಶ್, ಪ್ರಕಾಶ್ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಾಗಿತ್ತು.

‘ಆರೋಪಿ ಭರತ್ ತೀರಿಕೊಂಡಿದ್ದಾರೆ. ಇನ್ನೊಬ್ಬ ಆರೋಪಿ ಪ್ರಕಾಶ್ ಪಾತ್ರ ಪ್ರಕರಣದಲ್ಲಿ ಕಂಡುಬಂದಿಲ್ಲ. ತಾವೇ ಕಂಪನಿ ಸೃಷ್ಟಿಸಿಕೊಂಡಿದ್ದ ಆರೋಪಿ ಮಹೇಶ್, ಇತರರನ್ನು ನಿರ್ದೇಶಕರನ್ನಾಗಿ ಮಾಡಿಕೊಂಡಿದ್ದರು. ಆದರೆ, ಕಂಪನಿ ಬಗ್ಗೆ ನಿರ್ದೇಶಕರಿಗೆ ಯಾವುದೇ ಮಾಹಿತಿಯನ್ನು ಮಹೇಶ್ ತಿಳಿಸುತ್ತಿರಲಿಲ್ಲ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ADVERTISEMENT

‘ವಂಚನೆಗೆ ಸಂಬಂಧಪಟ್ಟ ದಾಖಲೆಗಳನ್ನು ಸಂಗ್ರಹಿಸಿ ಪೀಣ್ಯ ನಿವಾಸಿ ಮಹೇಶ್ ಅವರನ್ನು ಬಂಧಿಸಲಾಗಿದೆ. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆಯಲಾಗಿದೆ’ ಎಂದೂ ತಿಳಿಸಿವೆ.

₹ 2.50 ಕೋಟಿ ವಂಚನೆ ದಾಖಲೆ: ‘₹ 10 ಸಾವಿರ, ₹ 25 ಸಾವಿರ, ₹ 50 ಸಾವಿರ ಹಾಗೂ ₹ 1 ಲಕ್ಷ ಮೊತ್ತದ ಹೂಡಿಕೆ ಯೋಜನೆಗಳನ್ನು ಕಂಪನಿಯಿಂದ ರೂಪಿಸಲಾಗಿತ್ತು. ಬೆಂಗಳೂರು, ತುಮಕೂರು, ಮೈಸೂರು ಹಾಗೂ ರಾಜ್ಯದ ಹಲವು ಜಿಲ್ಲೆಗಳ ಜನ ಹಣ ಹೂಡಿಕೆ ಮಾಡಿರುವ ಮಾಹಿತಿ ಇದೆ. ಸುಮಾರು ₹ 2.50 ಕೋಟಿಯಷ್ಟು ವಂಚನೆಯಾಗಿರುವುದಕ್ಕೆ ಸದ್ಯ ದಾಖಲೆ ಸಿಕ್ಕಿದೆ’ ಎಂದೂ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.