
ಬೆಂಗಳೂರು: ಮಕರ ಸಂಕ್ರಾಂತಿಯ ದಿನವಾದ ಗುರುವಾರ ಸಂಜೆ ಸೂರ್ಯನ ಕಿರಣಗಳು ಗವಿಪುರದಲ್ಲಿರುವ ಗವಿಗಂಗಾಧರೇಶ್ವರ ದೇಗುಲದ ಶಿವಲಿಂಗವನ್ನು ಸ್ಪರ್ಶಿಸುತ್ತಿದ್ದಂತೆ ಭಕ್ತರಲ್ಲಿ ಹರ್ಷದ ಹೊನಲು ಹರಿಯಿತು.
ಸೂರ್ಯರಶ್ಮಿ 6 ಸೆಕೆಂಡ್‌ಗಳವರೆಗೆ ಶಿವಲಿಂಗದ ಮೇಲೆ ಪೂರ್ಣವಾಗಿ ಆವರಿಸಿಕೊಂಡಿತ್ತು. ಈ ಕ್ಷಣಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು. ದೇಗುಲದ ಬಲಭಾಗದ ಕಿಂಡಿಯಿಂದ ಸಂಜೆ 5.17ರ ವೇಳೆಗೆ ನೇಸರನ ಕಿರಣ ಪ್ರವೇಶಿಸಿತು. ಮೊದಲು ಗವಿಗಂಗಾಧರೇಶ್ವರ ದೇವರ ಪಾದ ಸ್ಪರ್ಶಿಸಿತು. ಬಳಿಕ ನಂದಿ ವಿಗ್ರಹದ ಮೂಲಕ ಹಾದುಹೋಗಿ ಇಡೀ ಶಿವಲಿಂಗವನ್ನು ಆವರಿಸಿತು. ಈ ಪ್ರಕ್ರಿಯೆ ಸುಮಾರು ಆರು ನಿಮಿಷಗಳ ಅವಧಿಯಲ್ಲಿ ನಡೆದಿದ್ದು, ಬಳಿಕ ಸೂರ್ಯ ಉತ್ತರಾಯಣಕ್ಕೆ ಪಥ ಬದಲಿಸಿದನು. ಸೂರ್ಯ ರಶ್ಮಿ ಪ್ರವೇಶದ ಅವಧಿಯಲ್ಲಿ ದೇವರಿಗೆ ನಿರಂತರ ಅಭಿಷೇಕ ನಡೆಸಲಾಯಿತು.
ಭಾಸ್ಕರನ ಎಳೆ ಕಿರಣಗಳು ಮರೆಯಾದ ನಂತರ ಮತ್ತೊಮ್ಮೆ ದೇವರಿಗೆ ಅಭಿಷೇಕ ಮಾಡಿ, ಪೂಜೆ ಸಲ್ಲಿಸಲಾಯಿತು. ಸೂರ್ಯರಶ್ಮಿ ಶಿವಲಿಂಗವನ್ನು ಸ್ಪರ್ಶಿಸುವ ಅವಧಿಯಲ್ಲಿ ಭಕ್ತರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ದೇವಾಲಯದ ಹೊರಗಡೆ ವಿಶೇಷ ಎಲ್‌ಇಡಿ ಪರದೆಯಲ್ಲಿ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿತ್ತು. ಗಂಗಾಜಲವನ್ನು ಪ್ರೋಕ್ಷಣೆ ಮಾಡಿ, ದೇವರಿಗೆ ವಿಶೇಷ ಅಲಂಕಾರ ಮಾಡಲಾಯಿತು. ಬಳಿಕ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.
ನಗರದ ನಾನಾ ಭಾಗಗಳಿಂದ ಸಾವಿರಾರು ಭಕ್ತರು ಬಂದಿದ್ದರು. ಸೂರ್ಯನ ಕಿರಣಗಳು ಶಿವಲಿಂಗದ ಮೇಲೆ ಬೀಳುವಾಗ ಶಿವನಾಮ ಪಠಿಸಿದರು. ಬಳಿಕ ಸರತಿ ಸಾಲಿನಲ್ಲಿ ಶಿವಲಿಂಗದ ದರ್ಶನ ಪಡೆದರು.
ಸಂಕ್ರಾಂತಿ ಹಬ್ಬದ ಪ್ರಯುಕ್ತ ಮುಂಜಾನೆಯೇ ಗವಿಗಂಗಾಧರೇಶ್ವರ ದೇವಾಲಯದಲ್ಲಿ ಭಕ್ತರ ಸಮೂಹ ಹೆಚ್ಚಿನ ಸಂಖ್ಯೆಯಲ್ಲಿ ಬಂದಿತ್ತು. ಜನರು ಸರದಿಯಲ್ಲಿ ನಿಂತು, ಗಂಗಾಧರೇಶ್ವರನ ದರ್ಶನ ಪಡೆದರು. ಮುಂಜಾನೆ 5ರಿಂದ ಮಧ್ಯಾಹ್ಮ 12ರವರೆಗೆ ಭಕ್ತರಿಗೆ ಸುಗಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.
‘ಗಂಗಾಧರೇಶ್ವರ ತೃಪ್ತಿಯಾಗಿದ್ದಾನೆ’
‘ಶಿವಲಿಂಗಕ್ಕೆ ಹಾಲಿನ ಅಭಿಷೇಕ ಮಾಡುವಾಗ ಸೂರ್ಯನ ರಶ್ಮಿಗಳು ಪೂರ್ಣವಾಗಿ ಶಿವಲಿಂಗವನ್ನು ಆವರಿಸಿಕೊಂಡಿದ್ದವು. ಎಲ್ಲಿಯೂ ಕಪ್ಪು ಚುಕ್ಕೆ ಕಾಣಿಸಿಕೊಂಡಿಲ್ಲ. ಇದರಿಂದ ಆನಂದ ಉಂಟಾಗಿದೆ. ಸಾಮಾನ್ಯವಾಗಿ ಸೂರ್ಯ ಎಲ್ಲಿಯೂ ನಿಂತುಕೊಳ್ಳುವುದಿಲ್ಲ. ಆದರೆ ಈ ಬಾರಿ ನಂದಿ ಭಾಗದಿಂದ ಪ್ರವೇಶಿಸಿದ ಸೂರ್ಯನ ಕಿರಣಗಳು ಶಿವಲಿಂಗವನ್ನು ಆರು ಸೆಕೆಂಡ್ ಆವರಿಸಿಕೊಂಡಿದ್ದವು. ಇದು ಬಹಳ ವಿಶೇಷವಾಗಿದ್ದು ಶುಭದ ಸಂಕೇತವಾಗಿದೆ. ಒಂದು ಅಥವಾ ಎರಡು ಸೆಕೆಂಡ್ ಮಾತ್ರ ಆವರಿಸಿಕೊಂಡಿದ್ದರೆ ಅನಾಹುತದ ಮುನ್ಸೂಚನೆ ಇರುತ್ತಿತ್ತು. ಆರು ಸೆಕೆಂಡ್‌ಗಳ ಸ್ಪರ್ಶದಿಂದ ಗಂಗಾಧರೇಶ್ವರ ತೃಪ್ತಿಯಾಗಿದ್ದಾನೆ’ ಎಂದು ಗವಿಗಂಗಾಧರೇಶ್ವರ ದೇಗುಲದ ಪ್ರಧಾನ ಅರ್ಚಕ ಸೋಮಸುಂದರ ದೀಕ್ಷಿತ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.