ADVERTISEMENT

ಮಾಜಿ ಸಂಸದರ ಹೆಸರು ಹೇಳಿ ವಂಚನೆ: ₹1.53 ಕೋಟಿ ವಂಚನೆ ಪ್ರಕರಣಕ್ಕೆ ತಿರುವು

​ಪ್ರಜಾವಾಣಿ ವಾರ್ತೆ
Published 23 ಜನವರಿ 2026, 23:30 IST
Last Updated 23 ಜನವರಿ 2026, 23:30 IST
ವಿಜಯ್‌ರಾಜ್‌ ಗೌಡ
ವಿಜಯ್‌ರಾಜ್‌ ಗೌಡ   

ಬೆಂಗಳೂರು: ಮದುವೆ ಆಗುವುದಾಗಿ ನಂಬಿಸಿ, ₹1.53 ಕೋಟಿ ಪಡೆದು ಮಹಿಳಾ ಟೆಕಿಗೆ ವಂಚಿಸಿದ್ದ ಪ್ರಕರಣದ ಆರೋಪಿ ವಿಜಯ್‌ರಾಜ್‌ ಗೌಡ ಅವರು ಹಲವು ಪ್ರಕರಣಗಳಲ್ಲಿ ಭಾಗಿ ಆಗಿರುವುದು ಪೊಲೀಸ್‌ ತನಿಖೆಯಿಂದ ಗೊತ್ತಾಗಿದೆ.

ವೈಟ್‌ಫೀಲ್ಡ್‌ ನಿವಾಸಿ, 29 ವರ್ಷದ ಯುವತಿ ನೀಡಿದ ದೂರು ಆಧರಿಸಿ, ಕೆಂಗೇರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಜ.19ರಂದು ವಿಜಯ್‌ರಾಜ್‌ ಅವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ ಇದೇ ರೀತಿಯ ಹಲವು ಪ್ರಕರಣಗಳಲ್ಲಿ ಆರೋಪಿ ಭಾಗಿಯಾಗಿರುವುದು ಪತ್ತೆಯಾಗಿದೆ.

ವಿಜಯ್‌ರಾಜ್‌ ವಿರುದ್ಧ ಕುಣಿಗಲ್, ಅತ್ತಿಬೆಲೆ, ಶಿವಮೊಗ್ಗ, ಕಾಡುಗೋಡಿ ಸೇರಿದಂತೆ ರಾಜ್ಯದ ನಾನಾ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.

ADVERTISEMENT

ಮಾಜಿ ಸಂಸದರೊಬ್ಬರ ಹೆಸರು ಹೇಳಿಕೊಂಡು ಎಂಟು ವರ್ಷಗಳಿಂದ ಹಲವು ಮಂದಿಗೆ ವಂಚಿಸಿರುವುದು ಪೊಲೀಸರ ವಿಚಾರಣೆಯಿಂದ ಪತ್ತೆಯಾಗಿದೆ.

ಮದುವೆ ಆಗುವುದಾಗಿ ನಂಬಿಸಿ, ಲಕ್ಷಾಂತರ ರೂಪಾಯಿ ಮೋಸ ಮಾಡಿರುವುದಾಗಿ ಆರೋಪಿಸಿ, ಯುವತಿ ನೀಡಿದ ದೂರಿನ ಮೇರೆಗೆ ಕಾಡುಗೋಡಿ ಪೊಲೀಸ್​ ಠಾಣೆಯಲ್ಲಿ ವಿಜಯ್‌ರಾಜ್ ವಿರುದ್ಧ ‘ಝೀರೊ ಎಫ್ಐಆರ್’ ದಾಖಲಾಗಿತ್ತು. ಕೃತ್ಯ ಎಸಗಿದ ಸ್ಥಳ ಆಧರಿಸಿ ಕೆಂಗೇರಿ ಪೊಲೀಸರಿಗೆ ಪ್ರಕರಣ ವರ್ಗಾವಣೆಗೊಂಡಿತ್ತು. ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿ, ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ 2019ರಿಂದ ಹಲವರಿಗೆ ವಂಚಿಸಿರುವುದು ಗೊತ್ತಾಗಿದೆ.

ಮ್ಯಾಟ್ರಿಮೋನಿ ವೆಬ್‌ಸೈಟ್ ಮೂಲಕ ಯುವತಿಯರನ್ನು ಆರೋಪಿ ಪರಿಚಯ ಮಾಡಿಕೊಳ್ಳುತ್ತಿದ್ದ. ದೊಡ್ಡ ಉದ್ಯಮಿ ಎಂದು ಬಿಂಬಿಸಿಕೊಂಡಿದ್ದ. ಪ್ರಕರಣವೊಂದರಲ್ಲಿ ಹಣ ಫ್ರೀಜ್‌ (ವಹಿವಾಟು ಸ್ಥಗಿತ) ಆಗಿದೆ ಎಂದು ನಕಲಿ ದಾಖಲೆಗಳನ್ನು ತೋರಿಸುತ್ತಿದ್ದ. ಆರೋಪಿಯ ಮಾತು ನಂಬುತ್ತಿದ್ದ ಕೆಲವು ಯುವತಿಯರು, ಹಣ ವರ್ಗಾವಣೆ ಮಾಡುತ್ತಿದ್ದರು. ಅದೇ ರೀತಿ ವೈಟ್‌ಫೀಲ್ಡ್‌ನಲ್ಲಿ ನೆಲಸಿರುವ ಯುವತಿಗೂ ವಂಚಿಸಿದ್ದ. ಪತ್ನಿಯನ್ನು ಅಕ್ಕ ಎಂದು ಪರಿಚಯಿಸಿಕೊಂಡು ಆ ಯುವತಿಯಿಂದ ₹1.53 ಕೋಟಿ ಸುಲಿಗೆ ಮಾಡಿದ್ದ ಎಂದು ಪೊಲೀಸರು ತಿಳಿಸಿದರು.

‘ಮಾಜಿ ಸಂಸದರೊಬ್ಬರು ನನಗೆ ಆಪ್ತರು’ ಎಂದು ಹೇಳಿಕೊಂಡು ಕಾಮಗಾರಿಗಳ ಗುತ್ತಿಗೆ ಕೊಡಿಸುವುದಾಗಿ ಆರೋಪಿ ನಂಬಿಸಿದ್ದ. ಅಲ್ಲದೇ ಹಲವು ಕಂಪನಿಗಳ ಮುಖ್ಯಸ್ಥ ನಕಲಿ ಸಹಿ ಹಾಗೂ ಮುದ್ರೆಯನ್ನು ಬಳಸಿಕೊಂಡು ವಂಚಿಸಿರುವುದು ತನಿಖೆಯಿಂದ ಗೊತ್ತಾಗಿದೆ. ಈ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದು ಗೊತ್ತಾಗಿದೆ.

ಸಿ.ಎಂ ಜಂಟಿ ಕಾರ್ಯದರ್ಶಿ ಹೆಸರು ಬಳಸಿ ವಂಚನೆ

ಮುಖ್ಯಮಂತ್ರಿ ಜಂಟಿ ಕಾರ್ಯದರ್ಶಿ ಎಂ.ರಾಮಯ್ಯ ಅವರ ಹೆಸರು ಹಾಗೂ ಹುದ್ದೆ ಬಳಸಿಕೊಂಡು ಲಕ್ಷಾಂತರ ರೂಪಾಯಿ ವಂಚಿಸಿದ್ದ ವ್ಯಕ್ತಿಯ ವಿರುದ್ಧ ಇಲ್ಲಿನ ಸಿಸಿಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೈಸೂರು ಜಿಲ್ಲೆಯ ನಂಜನಗೂಡಿನ ಕೆ.ಸಿ.ಜಗದೀಶ್ ಅವರ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

‘ಜೆಎಸ್‌ಎಸ್ ವಿಜ್ಞಾನ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ವೆಂಕಟೇಶ್ ಮುತ್ತಣ್ಣ ಅವರಿಗೆ ಕೆಪಿಎಸ್‌ಸಿ ಸದಸ್ಯ ಸ್ಥಾನವನ್ನು ಕೊಡಿಸುವುದಾಗಿ ಎಂ.ರಾಮಯ್ಯ ಅವರ ಹೆಸರು ಬಳಸಿಕೊಂಡು 2023ರ ಸೆಪ್ಟೆಂಬರ್‌ನಿಂದ 2025ರ ಏಪ್ರಿಲ್‌ ವರೆಗೆ ಹಣ ಪಡೆದುಕೊಂಡು ವಂಚಿಸಿದ್ದಾರೆ ಎಂದು ದೂರು ನೀಡಲಾಗಿದೆ. ಆರೋಪಿ ತಲೆಮರೆಸಿಕೊಂಡು ಓಡಾಡುತ್ತಿದ್ದಾರೆ. ಅವರ ಪತ್ತೆಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.