
ಬೆಂಗಳೂರು: ರಾಜ್ಯ ರಾಜಧಾನಿಯಿಂದ ವಿಜಯಪುರಕ್ಕೆ ವಂದೇ ಭಾರತ್ ಸ್ಲೀಪರ್ ಎಕ್ಸ್‌ಪ್ರೆಸ್ ರೈಲು, ಬೆಂಗಳೂರು-ಮುಂಬೈ ನಡುವೆ ಹೈಸ್ಪೀಡ್ ರೈಲು ಕಾರಿಡಾರ್ ಮತ್ತು ಬೆಂಗಳೂರು-ವಿಜಯಪುರ ನಡುವೆ ದಿನವಹಿ ವಿಶೇಷ ರೈಲುಗಳನ್ನು ಮಂಜೂರು ಮಾಡಬೇಕೆಂದು ಕೋರಿ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ. ಬಿ. ಪಾಟೀಲ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಬಾಗಲೂರಿನ ಹೈಟೆಕ್ ಹಾರ್ಡ್ ವೇರ್ ಪಾರ್ಕ್‌ನಲ್ಲಿ ಜೆಟ್ ವೆರ್ಕ್ ಸಂಸ್ಥೆಯ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಉತ್ಪಾದನೆಗೆ ಚಾಲನೆ ನೀಡಿದ ಬಳಿಕ, ಕೆಲ ಹೊತ್ತು ವೈಷ್ಣವ್ ಅವರನ್ನು ಸಚಿವರು ಭೇಟಿ ಮಾಡಿ, ಮನವಿ ಪತ್ರಗಳನ್ನು ಸಲ್ಲಿಸಿದರು. ಸಕಾರಾತ್ಮಕವಾಗಿ ಪರಿಶೀಲಿಸುವುದಾಗಿ ರೈಲ್ವೆ ಸಚಿವರು ಈ ವೇಳೆ ಭರವಸೆ ನೀಡಿದ್ದಾರೆ.
ಬೆಂಗಳೂರು ದೇಶದ ತಂತ್ರಜ್ಞಾನ ರಾಜಧಾನಿಯಾಗಿದ್ದು, ಮುಂಬಯಿ ಆರ್ಥಿಕ ರಾಜಧಾನಿ ಆಗಿದೆ. ಇವೆರಡೂ ನಗರಗಳನ್ನು ಅತ್ಯುತ್ತಮ ಸಂಪರ್ಕ ವ್ಯವಸ್ಥೆಯಿಂದ ಬೆಸೆಯುವುದು ಅನಿವಾರ್ಯ. ಇದಕ್ಕಾಗಿ ಈಗ ಮುಂಬೈ-ಪುಣೆ ನಡುವೆ ಘೋಷಿಸಿರುವ ಹೈಸ್ಪೀಡ್ ರೈಲು ಕಾರಿಡಾರನ್ನು ಬೆಂಗಳೂರಿನ ತನಕ ವಿಸ್ತರಿಸಬೇಕು ಎಂದು ಮನವಿ ಮಾಡಿದರು.
ಬೆಂಗಳೂರು-ವಿಜಯಪುರ ನಡುವೆ 530 ಕಿ.ಮೀ. ದೂರವಿದ್ದು, ರೈಲು ಪ್ರಯಾಣಕ್ಕೆ 15-16 ಗಂಟೆ ಹಿಡಿಯುತ್ತಿದೆ. ಇದನ್ನು 10 ಗಂಟೆಗೆ ಇಳಿಸಬೇಕು. ಇದಕ್ಕಾಗಿ ಬೆಂಗಳೂರು-ಹುಬ್ಬಳ್ಳಿ ನಡುವೆ ನಿಯಮಿತ ನಿಲುಗಡೆಗಳನ್ನು ಮಾತ್ರ ಕೊಟ್ಟು, ರೈಲುಗಳನ್ನು ಹುಬ್ಬಳ್ಳಿ, ಗದಗ ಬೈಪಾಸ್ ಮೂಲಕ ಓಡಿಸಬೇಕು. ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಓಡಿಸಬೇಕು ಎಂದೂ ಸಚಿವರು ಮನವಿ ಸಲ್ಲಿಸಿದರು.
ಇದೇ ರೀತಿಯಲ್ಲಿ ದಿನವಹಿ ಆಧಾರದ ಮೇಲೆ ಇದೇ ಮಾರ್ಗದಲ್ಲಿ ವಿಶೇಷ ರೈಲನ್ನು ಓಡಿಸಬೇಕು. ಈ ಮೂರೂ ಬಗೆಯ ಸೇವೆಗಳಿಂದ ಮಧ್ಯ ಮತ್ತು ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಿಗೆ ಸಾಮಾಜಿಕ, ಕೈಗಾರಿಕಾ ಮತ್ತು ಆರ್ಥಿಕ ಲಾಭವಾಗಲಿದೆ ಎಂದು ಅವರು ಮನವಿ ಪತ್ರದಲ್ಲಿ ಹೇಳಿದ್ದಾರೆ.
ಮೂರೂ ಮನವಿಗಳಿಗೆ ರೈಲ್ವೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಪಾಟೀಲ ತಿಳಿಸಿದರು. ನೈರುತ್ಯ ರೈಲ್ವೆ ಮುಖ್ಯ ಆಡಳಿತಾಧಿಕಾರಿ ಅಜಯ್ ಶರ್ಮ ಸೇರಿದಂತೆ ಇತರ ಹಿರಿಯ ರೈಲ್ವೆ ಅಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.