ADVERTISEMENT

ಹೊಸ ವರ್ಷಕ್ಕೆ ರೈತರಿಗೆ ಸಿಹಿ ಸುದ್ದಿ: ಪ್ರತಿ ಲೀಟರ್‌ ಹಾಲಿಗೆ ₹ 2 ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2019, 22:56 IST
Last Updated 30 ಡಿಸೆಂಬರ್ 2019, 22:56 IST
ಹಾಲು
ಹಾಲು   

ಬೆಂಗಳೂರು: ಹೊಸ ವರ್ಷದಿಂದ ಪ್ರತಿ ಲೀಟರ್‌ ಹಾಲಿಗೆ ₹ 2 ಪ್ರೋತ್ಸಾಹಧನ ಹೆಚ್ಚಿಸಲು ಬೆಂಗಳೂರು ಹಾಲು ಉತ್ಪಾದಕರ ಒಕ್ಕೂಟ ಮುಂದಾಗಿದೆ.

‘2020ರ ಜನವರಿ 1ರಿಂದ ಪ್ರತಿ ಲೀಟರ್ ಹಾಲಿಗೆ ₹ 2 ಪ್ರೋತ್ಸಾಹಧನ ಹೆಚ್ಚಳ ಮಾಡಲಾಗುವುದು’ಎಂದು ಒಕ್ಕೂಟದ ಅಧ್ಯಕ್ಷ ನರಸಿಂಹಮೂರ್ತಿ ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲಾ ವ್ಯಾಪ್ತಿಯಲ್ಲಿ ಬಮೂಲ್ ಹಾಲು ಪೂರೈಕೆ ಮಾಡುತ್ತಿದ್ದು, ಉತ್ಪಾದಕರಿಗೆ ಕಳೆದ ಸೆಪ್ಟೆಂಬರ್‌ನಿಂದ ಪ್ರತಿ ಲೀಟರ್‌ಗೆ ₹ 26 ನೀಡಲಾಗುತ್ತಿದೆ. ಜ.1 ರಿಂದ ₹28 ನೀಡಲಾಗುವುದು’ ಎಂದರು.

ADVERTISEMENT

‘ಒಕ್ಕೂಟದ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಲ್ಲಿ ಹಸುಗಳ ಆಹಾರದ ಬೇಡಿಕೆ ಹೆಚ್ಚಾಗುತ್ತಿದೆ. ಮಳೆಯ ಕೊರತೆಯಿಂದಾಗಿ ಒಣ ಮತ್ತು ಹಸಿರು ಮೇವು ಹಾಗೂ ನೀರಿನ ಕೊರತೆ ಹೆಚ್ಚಾಗಿದೆ. ಮುಂಬರುವ ಬೇಸಿಗೆಯಲ್ಲಿ ಹೈನುಗಾರಿಕಾ ಕೃಷಿಕರಿಗೆ ಹೆಚ್ಚಿನ ಸವಾಲು ಎದುರಾಗಲಿದ್ದು, ಹಸುಗಳ ನಿರ್ವಹಣೆ ದುಬಾರಿಯಾಗಲಿದೆ. ಈ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿ, ರೈತರ ಹಿತದೃಷ್ಟಿಯಿಂದ ಹಾಲು ಖರೀದಿ ದರವನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ’ ಎಂದು ಅವರು ತಿಳಿಸಿದರು.

ನಕಲಿ ತುಪ್ಪ–ಎಫ್‌ಐಆರ್‌: ‘ಕೆಎಂಎಫ್‌ ಜಾಗೃತ ದಳದಿಂದನಗರದ ಹಲವು ಹಾಲು ಉತ್ಪನ್ನಗಳ ಮಳಿಗೆಗಳ ಮೇಲೆ ಇತ್ತೀಚೆಗೆ ದಾಳಿ ನಡೆಸಲಾಗಿತ್ತು. ಈ ವೇಳೆ ಎರಡು ಮಳಿಗೆಗಳಲ್ಲಿ ನಕಲಿ ತುಪ್ಪ ಮಾರಾಟ ಮಾಡುತ್ತಿರುವುದು ಕಂಡು ಬಂದಿದ್ದು, ಈ ಮಳಿಗೆಯ ಮಾಲೀಕರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ’ ಎಂದು ನರಸಿಂಹಮೂರ್ತಿ ತಿಳಿಸಿದರು.

‘ನಗರದಲ್ಲಿ ನಂದಿನಿ ಹೆಸರನ್ನು ಬಳಸಿ ನಕಲಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡಲಾಗುತ್ತಿದೆ. ಇದರಿಂದಾಗಿ ಕೆಎಂಎಫ್‌ ಉತ್ಪನ್ನಗಳ ಬ್ರ್ಯಾಂಡ್ ಮೌಲ್ಯ ದುರ್ಬಳಕೆಯಾಗುತ್ತಿದ್ದು, ಗ್ರಾಹಕರು ವಂಚನೆಗೊಳಗಾಗುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಸರ್ಕಾರ ಹೆಚ್ಚಿನ ಜಾಗೃತ ದಳಗಳನ್ನು ನಿಯೋಜಿಸಬೇಕು. ನಕಲಿ ಉತ್ಪನ್ನಗಳನ್ನು ನಿಯಂತ್ರಿಸಲುಸ್ಥಳೀಯ ಸಂಸ್ಥೆಗಳು, ಆಹಾರ ಇಲಾಖೆ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಮುಂದಾಗಬೇಕು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.