ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಝಮೀರ್ ಅಹ್ಮದ್ ಅವರು ಎಸ್‌ಎಸ್‌ಎಲ್‌ಸಿಯಲ್ಲಿ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಹಾಗೂ ಪ್ರೋತ್ಸಾಹಧನ ನೀಡಿದರು.
ಪ್ರಜಾವಾಣಿ ಚಿತ್ರ
ಬೆಂಗಳೂರು: ಶಿಕ್ಷಣವೊಂದೇ ಸಾಧನೆಗೆ ಮಾರ್ಗವಾಗಿರುವುದರಿಂದ ಅಲ್ಪಸಂಖ್ಯಾತ ಇಲಾಖೆಯ ಅನುದಾನದಲ್ಲಿ ಶೇ 70ರಷ್ಟನ್ನು ಶಿಕ್ಷಣ ಕ್ಷೇತ್ರಕ್ಕೆ ಬಳಕೆ ಮಾಡಲಾಗುತ್ತಿದೆ ಎಂದು ವಸತಿ, ವಕ್ಫ್, ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹ್ಮದ್ ತಿಳಿಸಿದರು.
ನಗರದಲ್ಲಿ ಬುಧವಾರ ನಡೆದ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆ–ಕಾಲೇಜುಗಳ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಾಗೂ ಶೈಕ್ಷಣಿಕ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
‘ಒಳ್ಳೆಯ ವಿದ್ಯಾಭ್ಯಾಸ ಪಡೆಯಲಿ ಎಂದು ಹೆತ್ತವರು ನನ್ನನ್ನು ಕಾನ್ವೆಂಟ್‌ಗೆ ಸೇರಿಸಿದ್ದರು. ಆದರೂ ನಾನು 10ನೇ ತರಗತಿಗೆ ವಿದ್ಯಾಭ್ಯಾಸ ನಿಲ್ಲಿಸಿದೆ. ಈಗ ಕಲಿಯುವ ಮನಸ್ಸಿದ್ದರೂ ಕಲಿಯಲು ಆಗುತ್ತಿಲ್ಲ. ನನಗೆ ಶಾಸಕನಾಗುವ, ಮಂತ್ರಿಯಾಗುವ ಅವಕಾಶ ಸಿಕ್ಕಿದೆ. ವಿದ್ಯೆ ಪಡೆಯದ ಎಲ್ಲರಿಗೂ ಇಂಥ ಅವಕಾಶ ಸಿಗುವುದಿಲ್ಲ. ಹಾಗಾಗಿ ನೀವು ಯಾರೂ ಅರ್ಧದಲ್ಲಿ ವಿದ್ಯಾಭ್ಯಾಸ ನಿಲ್ಲಿಸಬಾರದು’ ಎಂದು ಸಲಹೆ ನೀಡಿದರು.
‘ಅಲ್ಪಸಂಖ್ಯಾತ ಇಲಾಖೆಯಡಿ ಬರುವ ವಸತಿನಿಲಯಗಳಲ್ಲಿ ಎರಡು ವರ್ಷಗಳ ಹಿಂದೆ 1,20,350 ವಿದ್ಯಾರ್ಥಿಗಳು ದಾಖಲಾತಿ ಹೊಂದಿದ್ದರು. ಈ ವರ್ಷ 2,08,065 ವಿದ್ಯಾರ್ಥಿಗಳಿದ್ದಾರೆ. ಮುಂದಿನ 3 ವರ್ಷಗಳಲ್ಲಿ 5 ಲಕ್ಷಕ್ಕೆ ತಲುಪಬೇಕು ಎಂಬುದು ನಮ್ಮ ಗುರಿ’ ಎಂದು ತಿಳಿಸಿದರು.
ಬಿಜೆಪಿ ಆಡಳಿತದಲ್ಲಿ ಇರುವಾಗ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ 2022-23ರಲ್ಲಿ ಕೇವಲ ₹850 ಕೋಟಿ ಅನುದಾನ ನೀಡಲಾಗಿತ್ತು. ಕಾಂಗ್ರೆಸ್ ಸರ್ಕಾರ ಬಂದ ಕೂಡಲೇ ಈ ಅನುದಾನವನ್ನು ₹2,101 ಕೋಟಿಗೆ ಏರಿಸಲಾಗಿತ್ತು. 2025-26ರಲ್ಲಿ ₹4,537 ಕೋಟಿ ಮೀಸಲಿಡಲಾಗಿದೆ ಎಂದು ವಿವರಿಸಿದರು.
ವಸತಿ ಶಾಲೆ ಹಾಗೂ ಕಾಲೇಜುಗಳಲ್ಲಿ ಓದಿ ಎಸ್‌ಎಸ್‌ಎಲ್‌ಸಿಯಲ್ಲಿ ಅತ್ಯುತ್ತಮ ಅಂಕ ಗಳಿಸಿದ 125 ವಿದ್ಯಾರ್ಥಿಗಳಿಗೆ ₹10 ಸಾವಿರ ನಗದು ಮತ್ತು ಲ್ಯಾಪ್‌ಟಾಪ್ ವಿತರಿಸಲಾಯಿತು. ಪಿಯುಸಿಯಲ್ಲಿ ಅತ್ಯುತ್ತಮ ಅಂಕ ಗಳಿಸಿದ 17 ವಿದ್ಯಾರ್ಥಿಗಳಿಗೆ ₹15 ಸಾವಿರ ನಗದು ಮತ್ತು ಲ್ಯಾಪ್‌ಟಾಪ್ ವಿತರಿಸಲಾಯಿತು. ಉತ್ತಮವಾಗಿ ಕಾರ್ಯನಿರ್ವಹಿಸಿದ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲ್ಲೂಕು ವಿಸ್ತರಣಾಧಿಕಾರಿಗಳು, ಪ್ರಾಂಶುಪಾಲರು, ಉಪನ್ಯಾಸಕರು, ಶಿಕ್ಷಕರು, ವಾರ್ಡನ್‌ಗಳನ್ನು ಸನ್ಮಾನಿಸಲಾಯಿತು.
ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಕೆ. ಅಲ್ತಫ್ ಖಾನ್, ಕ್ರಿಶ್ಚಿಯನ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್. ಜಾಫೆಟ್, ಸಚಿವರ ಆಪ್ತ ಕಾರ್ಯದರ್ಶಿ ಸರ್ಫರಾಜ್ ಖಾನ್, ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಯು. ನಿಸಾರ್ ಅಹಮದ್, ಉರ್ದು ಅಕಾಡೆಮಿ ಅಧ್ಯಕ್ಷ ಮೊಹಮ್ಮದ್ ಅಲಿ, ಹಜ್ ಸಮಿತಿ ಅಧ್ಯಕ್ಷ ಎಸ್. ಜುಲ್ಫಿಕರ್ ಅಹಮದ್, ಅಲ್ಪಸಂಖ್ಯಾತರ ನಿರ್ದೇಶನಾಲಯದ ನಿರ್ದೇಶಕ ಜಿಲಾನಿ ಎಚ್. ಮೊಕಾಶಿ ಉಪಸ್ಥಿತರಿದ್ದರು.
₹1 ಲಕ್ಷ ಬಹುಮಾನ
ಎಂ.ಎಸ್ಸಿ ಭೌತ ವಿಜ್ಞಾನದಲ್ಲಿ ಆರು ಚಿನ್ನದ ಪದಕ ಪಡೆದ ಕೆ.ಎಂ. ರೂಫಿಯಾ ಅವರಿಗೆ ಸಚಿವ ಜಮೀರ್ ಅಹ್ಮದ್ ವೈಯಕ್ತಿಕವಾಗಿ ₹1 ಲಕ್ಷ ಬಹುಮಾನ ನೀಡಿದರು. ಎಂಬಿಬಿಎಸ್ ಸೀಟು ಪಡೆದ ಎ.ಆರ್. ರಿದಾ ಅವರಿಗೆ ಎಂಬಿಬಿಎಸ್ ಪೂರ್ಣಗೊಳಿಸುವವರೆಗಿನ ಪೂರ್ಣ ವೆಚ್ಚವನ್ನು ಭರಿಸುವುದಾಗಿ ತಿಳಿಸಿದ ಸಚಿವರು ರಿದಾಗೆ ದ್ವಿಚಕ್ರವಾಹನವನ್ನು ಕೊಡುಗೆಯಾಗಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.