ವಿವಿಧ ಸ್ಪರ್ಧೆಯ ವಿಜೇತ ಮಕ್ಕಳಿಗೆ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕ ಮಹೇಶ್ ಬಾಬು ಎನ್., ಪ್ರೆಸ್‌ಕ್ಲಬ್ ಅಧ್ಯಕ್ಷ ಆರ್.ಶ್ರೀಧರ್, ಅರುಣ್ ಸಾಗರ್, ಕೆ.ವಿ. ಪ್ರಭಾಕರ್, ಪ್ರೆಸ್‌ಕ್ಲಬ್ ಕಾರ್ಯಕಾರಿ ಸಮಿತಿ ಸದಸ್ಯ ಶಿವಣ್ಣ, ಉಪಸ್ಥಿತರಿದ್ದರು
-ಪ್ರಜಾವಾಣಿ ಚಿತ್ರ
ಬೆಂಗಳೂರು: ‘ಮಕ್ಕಳಲ್ಲಿನ ಸೃಜನಶೀಲತೆಗೆ ಮೊಬೈಲ್ ಅಡ್ಡಿಯಾಗಿದೆ. ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ, ದೈಹಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಬೇಕು’ ಎಂದು ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಅವರು ಪೋಷಕರಿಗೆ ಕಿವಿಮಾತು ಹೇಳಿದರು.
ಪ್ರೆಸ್‌ಕ್ಲಬ್ ಆಫ್ ಬೆಂಗಳೂರು ಹಾಗೂ ಜವಾಹರ ಬಾಲಭವನ ಜಂಟಿಯಾಗಿ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮಕ್ಕಳ ಜಾತ್ರೆಯ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಮಕ್ಕಳಲ್ಲಿ ಕುತೂಹಲ ಕೆರಳಿಸುವುದು, ಸೂಕ್ತ ಅವಕಾಶ ಕಲ್ಪಿಸುವುದು ಮತ್ತು ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವುದರಿಂದ ಅವರೊಳಗಿನ ಸೃಜನಶೀಲತೆ ಅರಳುತ್ತದೆ. ಪ್ರತಿ ಮಗುವೂ ಹುಟ್ಟುತ್ತಲೇ ಪ್ರತಿಭೆಗಳ ಕಣಜ ಆಗಿರುತ್ತದೆ. ಆ ಮಗುವಿನ ಮನಸ್ಸಿನ, ಆಲೋಚನೆಯ ಕಿಟಕಿ ತೆರೆದಾಗ ಪ್ರತಿಭೆ ಹೊರಗೆ ಬರುತ್ತದೆ. ಆದ್ದರಿಂದ ಮಕ್ಕಳನ್ನು ಯಾರೂ ಪ್ರತಿಭಾವಂತರನ್ನಾಗಿ ಮಾಡುವ ಅಗತ್ಯವಿಲ್ಲ. ಪ್ರತಿಭೆ ಅರಳಲು ಅಗತ್ಯವಾದ ವಾತಾವರಣ ಕಲ್ಪಿಸಿದರೆ ಸಾಕು’ ಎಂದರು.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಧ್ಯಕ್ಷ ಎನ್.ಎ. ಹ್ಯಾರಿಸ್, ‘ಮೊಬೈಲ್‌ನಿಂದಾಗಿ ಮಕ್ಕಳು ಮನೆಯ ಹೊರಗಡೆ ಆಟವಾಡಲು ಇಷ್ಟಪಡುತ್ತಿಲ್ಲ. ಆದ್ದರಿಂದ ಮೊದಲು ಮೊಬೈಲ್ ಗೀಳಿನಿಂದ ಮಕ್ಕಳನ್ನು ಹೊರತರಬೇಕು. ದೈಹಿಕ ಮತ್ತು ಮಾನಸಿಕ ಸದೃಢತೆ ಕಾಪಾಡಿಕೊಳ್ಳುವುದು ಮುಖ್ಯವಾಗಿದ್ದು, ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ನೀಡಬೇಕು’ ಎಂದರು.
ಕಲಾತ್ಮಕ ನಿರ್ದೇಶಕ ಅರುಣ್ ಸಾಗರ್, ‘ಕ್ರೀಡೆ, ಸಾಹಿತ್ಯ, ಸಂಗೀತ ಸೇರಿ ವಿವಿಧ ಕ್ಷೇತ್ರಗಳಲ್ಲಿ ಮಕ್ಕಳಿಗೆ ಆಸಕ್ತಿ ಇರುತ್ತದೆ. ಪಾಲಕರು ಪ್ರತಿಭೆ ಹಾಗೂ ಆಸಕ್ತಿಯನ್ನು ಗುರುತಿಸಿ, ಪ್ರೋತ್ಸಾಹಿಸಬೇಕು’ ಎಂದು ಹೇಳಿದರು.
ಮಕ್ಕಳ ಜಾತ್ರೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಚಿತ್ರಕಲೆ ಸೇರಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಬಳಿಕ ಗಾಯಕ ಮೆಹಬೂಬ್‌ಸಾಬ್ ನದಾಫ್ ಅವರು ಸಂಗೀತ ಸಂಜೆ ಕಾರ್ಯಕ್ರಮ ನಡೆಸಿಕೊಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.