ADVERTISEMENT

ಮಾಂಸದ ಜತೆ ಜೈಲಿಗೆ ಮೊಬೈಲ್ ಸಾಗಣೆ!

ಮಾಂಸದಂಗಡಿ ಮಾಲೀಕ ಸೇರಿ ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2018, 20:08 IST
Last Updated 7 ಡಿಸೆಂಬರ್ 2018, 20:08 IST

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿಗೆ ಕುರಿ ಮಾಂಸ ತಂದಿದ್ದ ಸರಕು ಸಾಗಣೆ ವಾಹನದಲ್ಲಿ ಆರು ಮೊಬೈಲ್‌ಗಳು ಹಾಗೂ ಸಿಮ್‌ಗಳು ಪತ್ತೆಯಾಗಿದ್ದರಿಂದ ಮಾಂಸದಂಗಡಿ ಮಾಲೀಕ ಸುರೇಶ್ ಬಾಬು, ಆತನ ಜತೆ ವಾಹನದಲ್ಲಿದ್ದ ಇಮ್ರಾನ್ ಪಾಷಾ ಹಾಗೂ ರಾಜೇಂದ್ರ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.

ಜೈಲಿನ ಕೈಪಿಡಿ ಪ್ರಕಾರ, ಪ್ರತಿ ಶುಕ್ರವಾರ ಕೈದಿಗಳಿಗೆ ಮಾಂಸದೂಟ ಕೊಡಬೇಕು. ಅಧಿಕಾರಿಗಳು ಮಾಂಸ ಪೂರೈಕೆಯ ಗುತ್ತಿಗೆಯನ್ನು ಚಾಮರಾಜಪೇಟೆಯಲ್ಲಿ ‘ರಾಜಾ ಮಟನ್‌ಸ್ಟಾಲ್’ ಅಂಗಡಿ ನಡೆಸುತ್ತಿರುವ ಸುರೇಶ್ ಅವರಿಗೆ ನೀಡಿದ್ದರು. ಹತ್ತು ವರ್ಷಗಳಿಂದ ಅವರೇ ಪೂರೈಕೆ ಮಾಡುತ್ತಿದ್ದರು.

ಶುಕ್ರವಾರ ಬೆಳಿಗ್ಗೆ 11.30ರ ಸುಮಾರಿಗೆ ಸುರೇಶ್ ವಾಹನ ಚಾಲನೆ ಮಾಡಿಕೊಂಡು ಜೈಲಿನ ಬಳಿ ಬಂದಿದ್ದರು. ಪ್ರವೇಶ ದ್ವಾರದ ಸಿಬ್ಬಂದಿ ಅಂಡರ್ ಮಿರರ್ ಸ್ಕ್ಯಾನರ್ (ವಾಹನದ ಕೆಳಭಾಗದಲ್ಲಿ ತಪಾಸಣೆ ನಡೆಸುವ ಲೋಹಶೋಧಕ) ಮೂಲಕ ತಪಾಸಣೆ ನಡೆಸಿದಾಗ, ವಾಹನದ ಕೆಳಭಾಗದಲ್ಲಿ ಒಂದು ಕಬ್ಬಿಣದ ಡಬ್ಬಿ ಕಾಣಿಸಿದೆ.

ADVERTISEMENT

ಅದಕ್ಕೆ ಅಯಸ್ಕಾಂತ ಅಂಟಿಸಿದ್ದರಿಂದ ಅನುಮಾನಗೊಂಡ ಅವರು, ಡಬ್ಬಿ ತೆಗೆದು ತೋರಿಸುವಂತೆ ಹೇಳಿದ್ದಾರೆ. ಆಗ ಸುರೇಶ್, ‘ಇಷ್ಟು ವರ್ಷದಿಂದ ಇಲ್ಲಿಗೆ ಬರುತ್ತಿದ್ದೇನೆ. ನನ್ನ ಮೇಲೆಯೇ ಅನುಮಾನ ಪಡುತ್ತೀರಲ್ಲ’ ಎನ್ನುತ್ತ ಡಬ್ಬಿ ತೋರಿಸಿದ್ದಾರೆ. ಅದರಲ್ಲಿ ಆರು ಸ್ಮಾರ್ಟ್ ಫೋನ್‌ಗಳು ಇದ್ದುದರಿಂದ ಕೂಡಲೇ ಸುರೇಶ್ ಹಾಗೂ ಅವರ ಜತೆಗಿದ್ದವರನ್ನೂ ವಶಕ್ಕೆ ಪಡೆದಿದ್ದಾರೆ ಎಂದು ಪೊಲೀಸರು ಹೇಳಿದರು.

ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ, ‘ಕಾರಾಗೃಹಕ್ಕೆ ಮಾಂಸ ಪೂರೈಸುವುದರಿಂದ ವರ್ಷಕ್ಕೆ ನನಗೆ ₹ 70 ಲಕ್ಷದಿಂದ ₹ 80 ಲಕ್ಷ ಆದಾಯ ಬರುತ್ತದೆ. ಇಷ್ಟೊಂದು ಲಾಭ ಇರುವಾಗ ಕೈದಿಗಳಿಗೆ ಮೊಬೈಲ್ ಸರಬರಾಜು ಮಾಡಿ ಅಕ್ರಮ ಸಂಪಾದನೆ ಮಾಡುವ ಪ್ರಮೇಯ ಏನಿದೆ? ನನ್ನ ಗುತ್ತಿಗೆ ರದ್ದಾಗಲೆಂದು ಯಾರೋ ಕುತಂತ್ರ ಮಾಡಿದ್ದಾರೆ’ ಎಂದು ಸುರೇಶ್ ಹೇಳಿಕೆ ಕೊಟ್ಟಿದ್ದಾರೆ ಎನ್ನಲಾಗಿದೆ.

2 ಕೆ.ಜಿ ಗಾಂಜಾ?: ‘ವಾಹನದಲ್ಲಿ 25 ಮೊಬೈಲ್‌ಗಳು ಹಾಗೂ 2 ಕೆ.ಜಿ. ಗಾಂಜಾ ಇತ್ತು. ಆ ವಾಹನ ಅಡುಗೆ ಕೊಠಡಿ ಬಳಿ ತಲುಪಿದ ಬಳಿಕ ಜೈಲು ಸಿಬ್ಬಂದಿಯೊಬ್ಬರ ಮೂಲಕವೇ ಅವು ಕೈದಿಗಳಿಗೆ ಸರಬರಾಜಾಗುತ್ತಿದ್ದವು. ಈ ದಂಧೆ ಹಲವು ದಿನಗಳಿಂದ ನಡೆಯುತ್ತಾ ಬಂದಿದೆ’ ಎಂದು ಕಾರಾಗೃಹದ ಕೆಲ ಮೂಲಗಳು ಹೇಳಿವೆ. ಆದರೆ, ಈ ಆರೋಪವನ್ನು ಹಿರಿಯ ಅಧಿಕಾರಿಗಳು ತಳ್ಳಿಹಾಕಿದ್ದಾರೆ.

ಮಾಂಸ ಕತ್ತರಿಸಲು ಬಂದಿದ್ದರು

‘ನಿಯಮದ ಪ್ರಕಾರ ತಲೆ ಕತ್ತರಿಸಿ, ಚರ್ಮ ಸುಲಿದುಕೊಂಡು ಕುರಿಗಳನ್ನು ಜೈಲಿಗೆ ತರಬೇಕು. ಅಲ್ಲಿ ಪ್ರತಿ ಕುರಿಯ ಮಾಂಸವನ್ನೂ ವೈದ್ಯರು ಪರಿಶೀಲಿಸುತ್ತಾರೆ. ಬಳಿಕ ಜೈಲರ್ ಸಮ್ಮುಖದಲ್ಲೇ ಅದನ್ನು ಕತ್ತರಿಸಿ ಅಡುಗೆ ಕೋಣೆಗೆ ಸಾಗಿಸಲಾಗುತ್ತದೆ. ಸುರೇಶ್ ಅವರು ಮಾಂಸ ಕತ್ತರಿಸುವುದಕ್ಕಾಗಿಯೇ ಇಮ್ರಾನ್ ಹಾಗೂ ರಾಜೇಂದ್ರ ಅವರನ್ನು ಕರೆದುಕೊಂಡು ಬಂದಿದ್ದರು ಎನ್ನಲಾಗಿದೆ. ಎಲ್ಲ ಆಯಾಮಗಳಿಂದಲೂ ತನಿಖೆ ನಡೆಯುತ್ತಿದೆ’ ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.