ADVERTISEMENT

ಸೈಬರ್‌ ದಾಳಿ ತಡೆಯಲಿದೆ ಎಸ್ಒಸಿ

ನಮ್ಮ ಮೆಟ್ರೊ ಬೈಯಪ್ಪನಹಳ್ಳಿ ಡಿಪೊದಲ್ಲಿ ಭದ್ರತಾ ಕಾರ್ಯಾಚರಣೆ ಕೇಂದ್ರ ಸ್ಥಾಪಿಸಲು ಸಿದ್ಧತೆ

ಬಾಲಕೃಷ್ಣ ಪಿ.ಎಚ್‌
Published 3 ನವೆಂಬರ್ 2025, 18:46 IST
Last Updated 3 ನವೆಂಬರ್ 2025, 18:46 IST
ಆರು ಮೆಟ್ರೊ ನಿಲ್ದಾಣಗಳಲ್ಲಿ ಅಳವಡಿಸಿರುವ ಸುಧಾರಿತ ಸಿಸಿಟಿವಿ ಕ್ಯಾಮೆರಾ ನಿಗಾ ವ್ಯವಸ್ಥೆ ಮತ್ತು ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ನಿಯಂತ್ರಣ ಕೊಠಡಿ
ಆರು ಮೆಟ್ರೊ ನಿಲ್ದಾಣಗಳಲ್ಲಿ ಅಳವಡಿಸಿರುವ ಸುಧಾರಿತ ಸಿಸಿಟಿವಿ ಕ್ಯಾಮೆರಾ ನಿಗಾ ವ್ಯವಸ್ಥೆ ಮತ್ತು ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ನಿಯಂತ್ರಣ ಕೊಠಡಿ   

ಬೆಂಗಳೂರು: ಸೈಬರ್‌ ದಾಳಿ ನಡೆಯದಂತೆ ತಡೆಯಲು ಮತ್ತು ಸಿಸಿಟಿವಿ ಕ್ಯಾಮೆರಾಗಳ ಮೇಲ್ವಿಚಾರಣೆಗಾಗಿ ನಮ್ಮ ಮೆಟ್ರೊ ಬೈಯಪ್ಪನಹಳ್ಳಿ ಡಿಪೊದಲ್ಲಿ ಭದ್ರತಾ ಕಾರ್ಯಾಚರಣೆ ಕೇಂದ್ರ (ಎಸ್‌ಒಸಿ) ನಿರ್ಮಿಸಲಾಗುತ್ತಿದೆ. ಇದು ಆರಂಭಗೊಂಡರೆ ಅತ್ಯಾಧುನಿಕ ಭದ್ರತಾ ಕಾರ್ಯಾಚರಣೆ ಕೇಂದ್ರ ಹೊಂದಿರುವ ದೇಶದ ಮೊದಲ ಮೆಟ್ರೊಜಾಲ ಬಿಎಂಆರ್‌ಸಿಎಲ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಅತಿವೇಗದಲ್ಲಿ ಬೆಳೆಯುತ್ತಿದ್ದು, ಎಐ ಆಧಾರಿತ ಬೆದರಿಕೆಗಳು, ತಂತ್ರಜ್ಞಾನಗಳ ಹ್ಯಾಕ್‌ ಮಾಡುವ ಕೃತ್ಯಗಳೂ ಜಾಸ್ತಿಯಾಗುತ್ತಿವೆ. ಮೆಟ್ರೊದಲ್ಲಿ ಹೀಗಾಗಬಾರದು ಎಂಬ ಕಾರಣಕ್ಕೆ ಎಐ ತಂತ್ರಜ್ಞಾನವೂ ಒಳಗೊಂಡ ಎಸ್‌ಒಸಿ ಸ್ಥಾಪಿಸಲು ಬಿಎಂಆರ್‌ಸಿಎಲ್‌ ತೀರ್ಮಾನಿಸಿದೆ. ಇದಕ್ಕೆ ಸಂಬಂಧಿಸಿದಂತೆ ಟೆಂಡರ್‌ ಪ್ರಕ್ರಿಯೆಗಳು ನಡೆಯುತ್ತಿವೆ.

ನಮ್ಮ ಮೆಟ್ರೊ ನೇರಳೆ, ಹಸಿರು ಮತ್ತು ಹಳದಿ ಮಾರ್ಗಗಳಲ್ಲಿ ರೈಲುಗಳು ಸಂಚರಿಸುತ್ತಿವೆ. ಈ ಮೂರು ಮಾರ್ಗಗಳು ಒಟ್ಟು ಸುಮಾರು 93 ಕಿ.ಮೀ. ಉದ್ದ ಇವೆ. 83 ನಿಲ್ದಾಣಗಳಿವೆ. ಪ್ರತಿ ನಿಲ್ದಾಣದಲ್ಲಿ 200 ಸಿಸಿಟಿವಿ ಕ್ಯಾಮೆರಾಗಳಿವೆ. ಇದಲ್ಲದೇ ಮೆಟ್ರೊ ರೈಲಿನಲ್ಲಿ ಪ್ರತಿ ಬೋಗಿಯಲ್ಲಿ ನಾಲ್ಕು ಕ್ಯಾಮೆರಾದಂತೆ ಆರು ಬೋಗಿಗಳಲ್ಲಿ 24 ಕ್ಯಾಮೆರಾಗಳಿವೆ. ಸದ್ಯ 62 ರೈಲುಗಳು ಮೆಟ್ರೊ ಮಾರ್ಗದಲ್ಲಿ ಸಂಚರಿಸುತ್ತಿದ್ದು, 1488 ಸಿಸಿಟಿವಿ ಕ್ಯಾಮೆರಾಗಳು ರೈಲುಗಳಲ್ಲಿವೆ. ಡಿಜಿಟಲ್‌ ತಂತ್ರಜ್ಞಾನದ ಇವುಗಳನ್ನು ಸೈಬರ್‌ ವಂಚಕರು ಯಾವಾಗ ಬೇಕಾದರೂ ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಅದನ್ನು ತಡೆಯುವುದಕ್ಕಾ
ಗಿಯೇ ಎಸ್‌ಒಸಿ ಸ್ಥಾಪಿಸಲಾಗುತ್ತಿದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ADVERTISEMENT

ಭದ್ರತಾ ಕಾರ್ಯಾಚರಣೆ ಕೇಂದ್ರವು ದಿನದ 24 ಗಂಟೆಯೂ ಕಮಾಂಡ್‌ ಸೆಂಟರ್‌ ಆಗಿ ಕಾರ್ಯನಿರ್ವಹಿಸಲಿದೆ. ಸಿಗ್ನಲಿಂಗ್‌, ಟ್ರ್ಯಾಕ್‌ ನಿರ್ವಹಣೆ, ಟಿಕೆಟ್‌ ವ್ಯವಸ್ಥೆ ಸೇರಿದಂತೆ ಎಲ್ಲ ಮಾಹಿತಿ ಮತ್ತು ತಂತ್ರಜ್ಞಾನ ವ್ಯವಸ್ಥೆಯನ್ನು  ಸುರಕ್ಷಿತವಾಗಿಡಲು, ತಂತ್ರಜ್ಞಾನದ ಲೋಪವನ್ನು ಪತ್ತೆ ಹಚ್ಚಲು ಎಸ್‌ಒಸಿ ನೆರವಾಗಲಿದೆ.

ರೈಲಿನ ಒಳಗೆ ಮತ್ತು ಹೊರಗಡೆ ಅಳವಡಿಸಿದ ಎಲ್ಲ ಸಿಸಿಟಿವಿ ಕ್ಯಾಮೆರಾಗಳ ಮೇಲ್ವಿಚಾರಣೆಯನ್ನು ನುರಿತ ಸೈಬರ್‌ ಭದ್ರತಾ ಸಿಬ್ಬಂದಿ  ನಡೆಸಲಿದ್ದಾರೆ. ಮೆಟ್ರೊದಲ್ಲಿ ನಡೆಯುವ ಅಹಿತಕರ ಘಟನೆಗಳು ಮತ್ತು ನಿಲ್ದಾಣದಲ್ಲಿ ಭದ್ರತೆ ಮೇಲೆ ನಿರಂತರ ಕಣ್ಗಾವಲಿಡಲಿದೆ.

ಪ್ರತಿದಿನ ಸರಾಸರಿ 9.50 ಲಕ್ಷ ಪ್ರಯಾಣಿಕರು ಮೆಟ್ರೊದಲ್ಲಿ ಸಂಚರಿಸುತ್ತಿ
ದ್ದಾರೆ. ಇದು ಮೆಟ್ರೊ ಮೇಲಿನ ಪ್ರಯಾಣಿ
ಕರ ಒಲವನ್ನು ತೋರಿಸುತ್ತದೆ. ವಾಹನದಟ್ಟಣೆಯಿಂದ ಬಸವಳಿದ ಜನರು ಸ್ವಂತ ವಾಹನ ಇಲ್ಲವೇ ಇತರೆ ಸಾರ್ವಜನಿಕ ಸಾರಿಗೆಗಿಂತ ಮೆಟ್ರೊದಲ್ಲಿ ಸಂಚರಿಸಲು ಬಯಸುತ್ತಿದ್ದಾರೆ. ಉತ್ತಮ ಸಂಚಾರದ ಜೊತೆಗೆ ಉತ್ತಮ ಸೈಬರ್‌ ಸುರಕ್ಷತೆಯನ್ನು ನೀಡುವುದು ಬಿಎಂಆರ್‌ಸಿಎಲ್‌ ಆದ್ಯತೆಯಾಗಿದೆ ಎಂದು ನಮ್ಮ ಮೆಟ್ರೊದ ಹಿರಿಯ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟರು.

ಹಳದಿ ಮಾರ್ಗದಲ್ಲಿ ಸಂಚರಿಸುತ್ತಿರುವ ಮೆಟ್ರೊ (ಸಾಂದರ್ಭಿಕ ಚಿತ್ರ)

ಟೆಂಡರ್‌ ಪ್ರಕ್ರಿಯೆ ವಿದೇಶಗಳಲ್ಲಿ

ಸೈಬರ್‌ ದಾಳಿ ಮೂಲಕ ಮೆಟ್ರೊ ಸಂಚಾರ ಸ್ಥಗಿತಗೊಳಿಸುವುದು ವಿದ್ಯುತ್‌ ಸರಬರಾಜು ವ್ಯವಸ್ಥೆಯಲ್ಲಿ ವ್ಯತ್ಯಾಸ ಮಾಡುವುದು ನಡೆದಿತ್ತು. ರೈಲು ವ್ಯವಸ್ಥೆಗಳಲ್ಲಿಯೂ ಹ್ಯಾಕಿಂಗ್‌ಗಳಾಗಿದ್ದವು. ಸೈಬರ್‌ ಭದ್ರತೆಯನ್ನು ಹೆಚ್ಚಿಸುವ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳಾಗಿದ್ದವು. ಭಾರತದಲ್ಲಿಯೂ ಈ ಬಗ್ಗೆ ಅರ್ಬನ್‌ ರೈಲು ಸಮಾವೇಶದಲ್ಲಿ ಚರ್ಚೆಗಳು ನಡೆದಿದ್ದವು. ಅದರ ಭಾಗವಾಗಿ ಬಿಎಂಆರ್‌ಸಿಎಲ್‌ ಈ ಉಪಕ್ರಮ ಕೈಗೊಂಡಿದೆ. ಟೆಂಡರ್‌ ಪ್ರಕ್ರಿಯೆಗಳು ನಡೆಯುತ್ತಿವೆ. ಟೆಂಡರ್‌ ಪೂರ್ಣಗೊಂಡ ಬಳಿಕ ಮೂರು ತಿಂಗಳ ಒಳಗೆ ಎಸ್‌ಒಸಿ ಸ್ಥಾಪನೆಗೊಳ್ಳಲಿದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.

ಬೈಯಪ್ಪನಹಳ್ಳಿ ಮತ್ತು ಎಂ.ಜಿ. ರಸ್ತೆ ನಡುವಿನ

ಆರು ಮೆಟ್ರೊ ನಿಲ್ದಾಣಗಳಲ್ಲಿ ಸುಧಾರಿತ ಸಿಸಿಟಿವಿ ಕ್ಯಾಮೆರಾ ನಿಗಾ ವ್ಯವಸ್ಥೆ ಮತ್ತು ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವನ್ನು ಈಗಾಗಲೇ ಅಳವಡಿಸಲಾಗಿದೆ.  ನಿಲ್ದಾಣದ ಒಳ ಭಾಗಗಳ ಜೊತೆಗೆ ಸುತ್ತಲಿನ ಪ್ರದೇಶಗಳೂ ಕ್ಯಾಮೆರಾ ನಿಗಾ ವ್ಯಾಪ್ತಿಗೆ ಒಳಪಡಲಿದ್ದು ಎಐ ತಂತ್ರಜ್ಞಾನದಿಂದ ಅಪಾಯಗಳನ್ನು ತಕ್ಷಣ ಗುರುತಿಸಿ ಪ್ರಯಾಣಿಕರ ಸುರಕ್ಷತೆ ಹೆಚ್ಚಿಸಲು ನೆರವಾಗಲಿದೆ. ನಿಲ್ದಾಣದ ಮುಂದೆ ಇರುವ ವಾಹನಗಳ ಸಂಖ್ಯಾ ಫಲಕಗಳನ್ನು ಗುರುತಿಸಲು ‘ಆಟೋಮ್ಯಾಟಿಕ್ ನಂಬರ್ ಪ್ಲೇಟ್ ರೆಕಗ್ನಿಷನ್’ (ಎಎನ್‌ಪಿಆರ್‌) ತಂತ್ರಜ್ಞಾನವನ್ನು ಬಳಕೆ ಮಾಡಲಾಗಿದೆ. ಎಐ ಆಧಾರಿತ ವಿಡಿಯೊ ವಿಶ್ಲೇಷಣೆಯೊಂದಿಗೆ ಈ ತಂತ್ರಜ್ಞಾನ ಶಂಕಾಸ್ಪದ ಚಟುವಟಿಕೆಗಳು ಅನುಮಾನಾಸ್ಪದ ಘಟನೆಗಳನ್ನು ತಕ್ಷಣ ಪತ್ತೆಹಚ್ಚಲು ಸಹಕಾರಿಯಾಗಿದೆ. ಇದೇ ವ್ಯವಸ್ಥೆ ಮೆಟ್ರೊಜಾಲದ ಎಲ್ಲ ಮಾರ್ಗಗಳಿಗೂ ಅನ್ವಯವಾಗುವಂತೆ ದೊಡ್ಡಮಟ್ಟದಲ್ಲಿ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಎಸ್‌ಒಸಿ ಕಾರ್ಯ

ಅನುಮಾನಾಸ್ಪದ ಚಟುವಟಿಕೆಯನ್ನು ತಕ್ಷಣಕ್ಕೆ ಗುರುತಿಸಲಿದೆ. ದುರುದ್ದೇಶದಿಂದ ಹಾನಿ ಉಂಟು ಮಾಡುವ ಮೊದಲೇ ನಿಯಂತ್ರಿಸುವ ಕೃತಕ ಬುದ್ಧಿಮತ್ತೆ ಸಾಫ್ಟ್‌ವೇರ್‌ ಇಲ್ಲಿ ಬಳಕೆಯಾಗಲಿದೆ. ಸಂಭಾವ್ಯ ಬೆದರಿಕೆಗಳನ್ನು ಗುರುತಿಸುವ ವಿಶ್ಲೇಷಿಸುವ ಬಹು ವಿಧಾನಗಳ ತಂತ್ರಜ್ಞಾನ ಇದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.